ಉಪಚುನಾವಣೆ: ಶಿರಾದಲ್ಲಿ ಭರ್ಜರಿ ಮತದಾನ, ರಾಜರಾಜೇಶ್ವರಿ ನಗರದಲ್ಲಿ ನೀರಸ ಪ್ರತಿಕ್ರಿಯೆ

ಮಹಾಮಾರಿ ಕೊರೋನಾ ಸೋಂಕಿನಿ ಭೀತಿಯ ನಡುವೆಯೂ ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಉತ್ತಮ ಮತದಾನವಾಗಿದ್ದು, ರಾಜಧಾನಿ ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ನೀರ ಪ್ರತಿಕ್ರಿಯೆ ವ್ಯಕ್ತವಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಹಾಮಾರಿ ಕೊರೋನಾ ಸೋಂಕಿನಿ ಭೀತಿಯ ನಡುವೆಯೂ ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಉತ್ತಮ ಮತದಾನವಾಗಿದ್ದು, ರಾಜಧಾನಿ ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ನೀರ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಶಿರಾ ಕ್ಷೇತ್ರದಲ್ಲಿ ಒಟ್ಟು ಶೇ.82.31ರಷ್ಟು ಮತದಾನವಾಗಿದ್ದರೆ, ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಕೇವಲ ಶೇ.45.24ರಷ್ಟು ಮತದಾನವಾಗಿದೆ. ಮತ ಎಣಿಕೆ ನ.10ರಂದು ನಡೆಯಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ. 

ಕಳೆದ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಶಿರಾ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ. ಈ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಶೇ.54.38ರಷ್ಟು ಮತದಾನವಾಗಿದ್ದರೆ, ಈ ಬಾರಿ ಕೇವಲ ಶೇ.45.24ರಷ್ಟು ಮತದಾನವಾಗಿದೆ. ಶಿರಾ ಕ್ಷೇತ್ರದಲ್ಲಿ ಕಳೆದ ಬಾರಿ ಶೇ.84.77ರಷ್ಟು ಮತದಾನವಾಗಿದ್ದು, ಈ ಬಾರಿ ಶೇ.82.31ರಷ್ಟು ಮತದಾನವಾಗಿದೆ. ಕೇವಲ ಶೇ.2 ಮಾತ್ರ ಶಿರಾ ಕ್ಷೇತ್ರದಲ್ಲಿ ಕಡಿಮೆ ಮತದಾನವಾಗಿದೆ. 

ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್'ಗೆ ಪ್ರತಿಷ್ಠೆಯ ಕಣವಾಗಿರುವ ಶಿರಾ ವಿಧಾನಸಭಾ ಕ್ಷೇತ್ರ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮತದಾರರು ಮಂಗಳವಾರ ಚುನಾವಣಾ ಕಣದಲ್ಲಿರುವ 31 ಅಭ್ಯರ್ಥಿಗಳ ಭವಿಷ್ಯವನ್ನು ಬರೆದಿದ್ದು, ಮತಯಂತ್ರದಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ. ಈ ತಿಂಗಳ 10ರಂದು ಮತಎಣಿಕೆ ನಡೆಯಲಿದೆ. 

ಈ ಬಾರಿ ರಾಜರಾಜೇಶ್ವರಿ ನಗರದಲ್ಲಿ ಮತದಾನ ಪ್ರಮಾಣ ಶೇ.5-6ರಷ್ಟು ಹೆಚ್ಚಾಗುವ ನಿರೀಕ್ಷೆಗಳಿತ್ತು. ಆದರೆ, ಕಡಿಮೆ ಮತದಾನವಾಗಿದೆ. ಆದರೂ ನಾವು 21,000-22,000 ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತೇವೆ. ಶಿರಾದಲ್ಲಿ 10,000 ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ. ರಾಜರಾಜೇಶ್ವರಿ ನಗರದಲ್ಲಿ ಕಡಿಮೆ ಮತದಾನವಾಗದೇ ಹೋಗಿದ್ದರೆ 40,000 ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಿದ್ದೆವು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಯವರು ಹೇಳಿದ್ದಾರೆ. 

ಈ ನಡುವೆ ಕಡಿಮೆ ಮತದಾನವಾಗಿರುವುದು ಕಾಂಗ್ರೆಸ್ ಪಕ್ಷ ಚಿಂತೆಗೀಡಾಗುವಂತೆ ಮಾಡಿದೆ. ಸಾಕಷ್ಟು ವಲಸೆ ಕಾರ್ಮಿಕರು ಸರ್ಕಾರದ ವೈಫಲ್ಯದಿಂದಾಗಿ ತಮ್ಮ ಮನೆಗಳಿಗೆ ತಲುಪಲು ಸಾಧ್ಯವಾಗಿಲ್ಲ. ಮತದಾರರು ನಮ್ಮನ್ನು ಆಯ್ಕೆ ಮಾಡಿದ್ದಾರೆಂಬ ವಿಶ್ವಾಸ ನಮಗಿದೆ. ಶಿರಾದಲ್ಲಿ ಟಿ ಬಿ ಜಯಚಂದ್ರ ಗೆಲುವು ಸಾಧಿಸುವುದು ಖಚಿತ. ಅದೂ ಕೂಡ ಭಾರೀ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆಂದು ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಸಲೀಂ ಅಹ್ಮದ್ ಅವರು ಹೇಳಿದ್ದಾರೆ. 

ಸಮುದಾಯದ ಬೆಂಬಲ ನಮಗಿದೆ. ದೇವೇಗೌಡ ಸೇರಿದಂತೆ ನಮ್ಮ ಪಕ್ಷದ ಎಲ್ಲಾ ನಾಯಕರೂ ತಮ್ಮಿಂದ ಸಾಧ್ಯವಾದಷ್ಟು ಶ್ರಮಪಟ್ಟಿದ್ದಾರೆ. ಶಿರಾದಲ್ಲಿ ಗೆಲುವು ಸಾಧಿಸುವುದು ಖಚಿತ. ಆದರೆ, ರಾಜರಾಜೇಶ್ವರಿ ನಗರದಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಜೆಡಿಎಸ್ ಹಿರಿಯ ನಾಯಕ ಹಾಗೂ ಎಂಎಲ್ಸಿ ಬಸವರಾಜ ಹೊರಟ್ಟಿಯವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com