ಕೋವಿಡ್ ಹಿನ್ನೆಲೆ: ನವೆಂಬರ್ 13 ರಂದು ಒಂದೇ ದಿನ ಹಂಪಿ ಉತ್ಸವ

ಕೋವಿಡ್ 19 ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಹಂಪಿಯಲ್ಲಿ ಈ ವರ್ಷದ ಹಂಪಿ‌ ಉತ್ಸವವನ್ನು ಸರಳವಾಗಿ ಆಚರಿಸುತ್ತಿದ್ದು, ನವೆಂಬರ್ 13 ರಂದು ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸಲು ಸರ್ಕಾರ ತೀರ್ಮಾನಿಸಿದೆ.
ಹಂಪಿ ಉತ್ಸವದ ಸಾಂದರ್ಭಿಕ ಚಿತ್ರ
ಹಂಪಿ ಉತ್ಸವದ ಸಾಂದರ್ಭಿಕ ಚಿತ್ರ

ಬಳ್ಳಾರಿ: ಕೋವಿಡ್ 19 ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಹಂಪಿಯಲ್ಲಿ ಈ ವರ್ಷದ ಹಂಪಿ‌ ಉತ್ಸವವನ್ನು ಸರಳವಾಗಿ ಆಚರಿಸುತ್ತಿದ್ದು, ನವೆಂಬರ್ 13 ರಂದು ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸಲು ಸರ್ಕಾರ ತೀರ್ಮಾನಿಸಿದೆ.

ಪ್ರತಿ ವರ್ಷ ಮೂರು ದಿನಗಳ ಕಾಲ ಹಂಪಿ ಉತ್ಸವ ನಡೆಯುತ್ತಿತ್ತು. ಪ್ರತಿ ವರ್ಷದಂತೆ ಮೂರು ದಿನ ‘ಹಂಪಿ ಉತ್ಸವ’ ಆಚರಿಸಬೇಕೆಂದು ಜಿಲ್ಲೆಯ ಹಲವು ಸಂಘಟನೆಗಳು ಆಗ್ರಹಿಸಿದ್ದವು. ಆದರೆ, ಕೋವಿಡ್‌–19 ಕಾರಣಕ್ಕಾಗಿ ಒಂದು ದಿನ ಸಾಂಕೇತಿಕವಾಗಿ ಆಚರಿಸಲು ತೀರ್ಮಾನ ತೆಗೆದುಕೊಂಡಿದೆ. ಕೋವಿಡ್ 19 ಸೋಂಕು ನಿಯಂತ್ರಣ ಕ್ರಮಗಳ ನಡುವೆ ಉತ್ಸವ ಆಯೋಜಿಸಲಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು, 'ಈ ಬಾರಿಯ ಹಂಪಿ‌ ಉತ್ಸವವನ್ನು ನವೆಂಬರ್ 13 ರಂದು ಒಂದು ದಿನ ಮಾತ್ರ ನಡೆಸಲು ತೀರ್ಮಾನಿಸಿದೆ. ಪ್ರತಿ ವರ್ಷ ಮೂರು ದಿನಗಳ‌ ಕಾಲ‌ ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಇಂದಿನ‌ ಪೀಳಿಗೆಗೆ ಪರಿಚಯಿಸಲು ಹಂಪಿ ಉತ್ಸವ ನಡೆಸುತ್ತಿತ್ತು. ಆದರೆ ಈ ಬಾರಿ ಕೋವಿಡ್ ನಿಂದಾಗಿ ನ 13ರಂದು ಒಂದೇ ದಿನ ‘ಹಂಪಿ ಉತ್ಸವ’ ಆಚರಿಸಲು ತೀರ್ಮಾನಿಸಿದೆ ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ, 'ಈ ಬಾರಿ ಉತ್ಸವದಲ್ಲಿ ವೇದಿಕೆ ಕಾರ್ಯಕ್ರಮಗಳು ಇರುವುದಿಲ್ಲ ಬದಲಾಗಿ ನ.13ರಂದು ಸಂಜೆ ಹಂಪಿಯ ಉದ್ದಾನ ವೀರಭದ್ರೇಶ್ವರ ದೇವಸ್ಥಾನದಿಂದ ವಿರೂಪಾಕ್ಷ ದೇವಸ್ಥಾನದ ವರೆಗೆ ಜನಪದ ಕಲಾ ತಂಡಗಳೊಂದಿಗೆ ವಿರೂಪಾಕ್ಷ ದೇವರ ಮೂರ್ತಿಯ ಶೊಭಾಯಾತ್ರೆ ನಡೆಯಲಿದೆ. ಇದರಲ್ಲಿ ಜಿಲ್ಲೆಯ ಪ್ರತಿ ತಾಲ್ಲೂಕಿನಿಂದ ಎರಡೆರೆಡು ಜನಪದ ಕಲಾ ತಂಡಗಳು ಪಾಲ್ಗೊಳ್ಳಲಿವೆ. ಇದು ಮುಗಿದ ನಂತರ ವಿರೂಪಾಕ್ಷ ದೇವಸ್ಥಾನದ ಪಕ್ಷದಲ್ಲಿ ಹರಿಯುವ ತುಂಗಭದ್ರಾ ನದಿ ತಟದಲ್ಲಿ ‘ತುಂಗಾ ಆರತಿ’ ನಡೆಯಲಿದೆ ಇಷ್ಟನ್ನು ಮಾತ್ರ ನಡೆಸಲು ಸರ್ಕಾರ ಸಧ್ಯಕ್ಕೆ ತೀರ್ಮಾನಿಸಿದೆ ಎನ್ನಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com