ಬೆಂಗಳೂರು: ಚರ್ಚ್ ಸ್ಟ್ರೀಟ್ ‘ಕ್ಲೀನ್ ಏರ್ ಸ್ಟ್ರೀಟ್’ ಅಭಿಯಾನಕ್ಕೆ ಸಿಎಂ ಯಡಿಯೂರಪ್ಪ ಚಾಲನೆ

ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ದೇಶದ ಮೊದಲ ಸ್ವಚ್ಛ ವಾಯು ಬೀದಿ(ಕ್ಲೀನ್ ಏರ್ ಸ್ಟ್ರೀಟ್) ಮಾಡುವ ಸಿದ್ಧತೆ ನಡೆಯುತ್ತಿದೆ.
ಚರ್ಚ್ ಸ್ಟ್ರೀಟ್
ಚರ್ಚ್ ಸ್ಟ್ರೀಟ್

ಬೆಂಗಳೂರು: ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ದೇಶದ ಮೊದಲ ಸ್ವಚ್ಛ ವಾಯು ಬೀದಿ(ಕ್ಲೀನ್ ಏರ್ ಸ್ಟ್ರೀಟ್) ಮಾಡುವ ಸಿದ್ಧತೆ ನಡೆಯುತ್ತಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶನಿವಾರ ಚರ್ಚ್ ಸ್ಟ್ರೀಟ್ ನಲ್ಲಿ ‘ಕ್ಲೀನ್ ಏರ್ ಸ್ಟ್ರೀಟ್’ ಅಭಿಯಾನಕ್ಕೆ ಚಾಲನೆ ನೀಡಿದರು. ವಾಯುಮಾಲಿನ್ಯ ತಗ್ಗಿಸಿ ಪರಿಸರ ಸ್ನೇಹಿ ವಾಹನಗಳ ಬಳಕೆ ಉತ್ತೇಜಿಸುವ ಉದ್ದೇಶದಿಂದ ಈ ಅಭಿಯಾನ ಆಯೋಜಿಸಲಾಗಿದೆ.

ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ವಾಯುಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಚರ್ಚ್‌ಸ್ಟ್ರೀಟ್‌ನಲ್ಲಿ ಪ್ರಾಯೋಗಿಕವಾಗಿ ವಾರಾಂತ್ಯದಲ್ಲಿ ಶನಿವಾರ ಮತ್ತು ಭಾನುವಾರ ವಾಹನ ಸಂಚಾರ ನಿಷೇಧಿಸುವ ಮೂಲಕ ಶುದ್ಧ ವಾಯು ಬೀದಿ ಅಭಿಯಾನ ಆರಂಭಿಸಲಾಗಿದೆ. ಇದು ದೇಶದಲ್ಲೇ ಪ್ರಥಮ ವಿನೂತನ ಪ್ರಯೋಗವಾಗಿದೆ. ಬೆಂಗಳೂರು ತಂತ್ರಜ್ಞಾನಗಳ ರಾಜಧಾನಿಯಾಗಿದ್ದು, ವಾಯು ಮಾಲಿನ್ಯ ತಪ್ಪಿಸಲು ವಿದ್ಯುತ್‌ ಚಾಲಿತ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ಚರ್ಚ್ ಸ್ಟ್ರೀಟ್‌ನಲ್ಲಿ ವಾರಾಂತ್ಯದ ಎರಡು ದಿನಗಳಲ್ಲಿ ಎಲ್ಲ ರೀತಿಯ ವಾಹನಗಳನ್ನು ನಿರ್ಬಂಧಿಸಲಾಗಿದೆ. ಶುದ್ಧಗಾಳಿ ಮತ್ತು ನೀರು ಪ್ರತಿ ನಾಗರಿಕರ ಹಕ್ಕಾಗಿದೆ. ಆದರೆ ಜಾಗತಿಕ ತಾಪಮಾನ ಮತ್ತು ಮಾಲಿನ್ಯದಿಂದಾಗಿ ಸ್ವಚ್ಛ ಪರಿಸರ ದುರ್ಲಭವಾಗಿದೆ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬ ನಾಗರಿಕರೂ ಮಾಲಿನ್ಯ ರಹಿತ ವಾತಾವರಣ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಕರೆ ನೀಡಿದರು.

ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್‌, ಶುದ್ಧ ವಾಯು ಒದಗಿಸುವ ಉದ್ದೇಶದಿಂದ ಚರ್ಚ್‌ ಸ್ಟ್ರೀಟ್‌ನಲ್ಲಿ ಶುದ್ಧವಾಯು ಬೀದಿ ನಿರ್ಮಿಸಲಾಗಿದ್ದು, ವಾರದ ಶನಿವಾರ ಮತ್ತು ಭಾನುವಾರ ಪಾದಾಚಾರಿಗಳಿಗೆ ಮೀಸಲಿಡಲಾಗಿದೆ. ಈ ಮೂಲಕ ಶುದ್ಧ ಗಾಳಿ ಮತ್ತು ಪರಿಸರಕ್ಕೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಶಾಸಕ ಎನ್‌.ಎ.ಹ್ಯಾರಿಸ್‌, ದೇಶದ ಹಲವು ನಗರಗಳಲ್ಲಿ ಈಗಾಗಲೇ ವಾಯು ಮಾಲಿನ್ಯ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ನಗರದ ಚರ್ಚ್‌ಸ್ಟ್ರೀಟ್‌ನ್ನು ದೇಶದಲ್ಲೇ ಮೊಟ್ಟ ಮೊದಲ ಶುದ್ಧ ಗಾಳಿ ಅಭಿಯಾನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಇಂತ ಇನ್ನಷ್ಟು ಶುದ್ಧವಾಯು ಬೀದಿಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ, ಬೆಂಗಳೂರು ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com