ಕೋಟ್ಪಾಗೆ ಬಲ ತುಂಬಲು ತಿದ್ದುಪಡಿ ತರಬೇಕು, ಧೂಮಪಾನಕ್ಕೆ ಕನಿಷ್ಠ ಕಾನೂನು ವಯಸ್ಸನ್ನು 18 ರಿಂದ 21ಕ್ಕೆ ಏರಿಸಬೇಕು!

ತಂಬಾಕು ನಿಯಂತ್ರಣಕ್ಕೆ ಸದ್ಯ ಚಾಲ್ತಿಯಲ್ಲಿರುವ ಕೋಟ್ಪಾ 2003 ಕಾಯ್ದೆಯಲ್ಲಿ ಬಹಳಷ್ಟು ನ್ಯೂನತೆಗಳಿವೆ ಎಂದು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (ಏನ್ಎಲ್ಎಸ್ಐಯು) ಮಂಗಳವಾರ ಬಿಡುಗಡೆ ಮಾಡಿದ “ಭಾರತದಲ್ಲಿ ತಂಬಾಕು ನಿಯಂತ್ರಣ  ಕಾನೂನು - ಮೂಲ ಮತ್ತು ಪ್ರಸ್ತಾವಿತ ಸುಧಾರಣೆಗಳು” ವರದಿ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ತಂಬಾಕು ನಿಯಂತ್ರಣಕ್ಕೆ ಸದ್ಯ ಚಾಲ್ತಿಯಲ್ಲಿರುವ ಕೋಟ್ಪಾ 2003 ಕಾಯ್ದೆಯಲ್ಲಿ ಬಹಳಷ್ಟು ನ್ಯೂನತೆಗಳಿವೆ ಎಂದು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (ಏನ್ಎಲ್ಎಸ್ಐಯು) ಮಂಗಳವಾರ ಬಿಡುಗಡೆ ಮಾಡಿದ “ಭಾರತದಲ್ಲಿ ತಂಬಾಕು ನಿಯಂತ್ರಣ  ಕಾನೂನು - ಮೂಲ ಮತ್ತು ಪ್ರಸ್ತಾವಿತ ಸುಧಾರಣೆಗಳು” ವರದಿ ಹೇಳಿದೆ.

ಭಾರತದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ನಿಷೇಧವಿದ್ದರೂ ಹೋಟೆಲ್ ಮತ್ತು ವಿಮಾನ ನಿಲ್ದಾಣಗಳಲ್ಲಿ ಧೂಮಪಾನಕ್ಕೆ ಪ್ರತ್ಯೇಕ ಸ್ಥಳ ಮೀಸಲಿಗೆ ಅವಕಾಶವಿದೆ; ತಂಬಾಕು ಪದಾರ್ಥಗಳ ಜಾಹೀರಾತಿನ ಮೇಲೆ  ನಿಷೇಧವಿದ್ದರೂ, ಅಂಗಡಿ ಮತ್ತು ಮಳಿಗೆಗಳಲ್ಲಿ ತಂಬಾಕು  ಉತ್ಪನ್ನಗಳ ಜಾಹೀರಾತು ಜೋರಾಗಿಯೇ ಇವೆ; ಕೋಟ್ಪಾ 2003ರ ಅಡಿಯಲ್ಲಿ ಅಸ್ತಿತ್ವದಲ್ಲಿರುವ ದಂಡದ ಮೊತ್ತ ಬಹಳ ಕಡಿಮೆ; ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳನ್ನು ಬಿಡಿಯಾಗಿ ಮಾರಾಟ ಮಾಡುವುದು ಭಾರತದಲ್ಲಿ ರೂಢಿಯಾಗಿದೆ; ಸಿಗರೇಟ್ ಪ್ಯಾಕ್ ಗಳ ಮೇಲೆ ಅದರ  ಕಾರಕದ (emission yields) ಕುರಿತು ಮುದ್ರಿಸುವ ಮಾಹಿತಿ ಬಹುತೇಕ ದಿಕ್ಕು ತಪ್ಪಿಸುವಂತದ್ದು; ಕೋಟ್ಪಾ 2003 (COTPA 2003) ರಲ್ಲಿ ಇಂಥ ಹಲವು ನ್ಯೂನತೆಗಳಿರುವುದರಿಂದ ದೇಶದಲ್ಲಿ ತಂಬಾಕು ಸೇವನೆಯ ಪರಿಣಾಮಕಾರಿ ನಿಯಂತ್ರಣ ಸಾಧ್ಯವಾಗುತಿಲ್ಲ  ಎಂದು ವರದಿ ಹೇಳಿದೆ. 

ನವೆಂಬರ್ 24 ರಂದು ಬಿಡುಗಡೆಗೊಂಡ ವರದಿಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಎನ್ಎಲ್ಎಸ್ಐಯು ಸಲ್ಲಿಸಿದೆ. ಈ ವರದಿ ಕೋಟ್ಪಾ ಕಾಯ್ದೆಯನ್ನು ಸಮಗ್ರವಾಗಿ ವಿಶ್ಲೇಷಿಸಿದ್ದು, ಅದರಲ್ಲಿನ ನ್ಯೂನತೆಗಳನ್ನು ಒರೆಗೆ ಹಚ್ಚಿದೆ. ಹಾಗೆಯೇ, ಸಂಸದೀಯ  ಸಮಿತಿಗಳ ಶಿಫಾರಸ್ಸುಗಳು, ಇತರೆ ರಾಷ್ಟ್ರಗಳಲ್ಲಿ ಆಚರಣೆಯಲ್ಲಿರುವ ಪದ್ಧತಿಗಳು ಮತ್ತು ವಿಶ್ವ ಅರೋಗ್ಯ ಸಂಸ್ಥೆಯ ಫ್ರೇಮ್ ವರ್ಕ್ ಕನ್ವೆನ್ಷನ್ ಆನ್ ಟೊಬ್ಯಾಕೋ ಕಂಟ್ರೋಲ್ (WHO FCTC) ಕೈಗೊಂಡಿರುವ ಮಾರ್ಗಸೂಚಿಗಳಿಗೆ ಹೊಂದಿಕೆಯಾಗುವ ಸುಧಾರಣೆಗಳನ್ನು  ಪ್ರಸ್ತಾವಿಸಿದೆ.

“ತಂಬಾಕು ಬಳಕೆಯ ದುಷ್ಪರಿಣಾಮಗಳು ಜಾಗತಿಕವಾಗಿ ಸಾಬೀತಾಗಿ ಒಪ್ಪಿತವಾಗಿದೆ. ಈ ವರದಿಯ ಮೂಲಕ ಏನ್ಎಲ್ಎಸ್ಐಯುವಿನ ದಿ ಚೇರ್ ಆನ್ ಕನ್ಸ್ಯುಮರ್ ಲಾ ಅಂಡ್ ಪ್ರಾಕ್ಟೀಸ್ ಕೋಟ್ಪಾದಲ್ಲಿನ ನ್ಯೂನತೆಗಳನ್ನು ಪತ್ತೆ ಹಚ್ಚಲು ಕಠಿಣ ಪರಿಶ್ರಮ ವಹಿಸಿದೆ. ಭಾರತವೂ ಸಹಿ  ಹಾಕಿರುವ ಎಫ್ ಸಿಟಿಸಿಯ ಜಾಗತಿಕ ಸಾರ್ವಜನಿಕ ಆರೋಗ್ಯ ಒಪ್ಪಂದ ಮತ್ತು ಇತರೆ ರಾಷ್ಟ್ರಗಳಲ್ಲಿರುವ ಅತ್ಯುತ್ತಮ ರೂಢಿಗಳನ್ನು ಆಧರಿಸಿ ಶಾಸನೀಯ ಸುಧಾರಣೆಗಳನ್ನು ತರಲು ಈ ವರದಿ ಶಿಫಾರಸ್ಸು ಮಾಡುತ್ತದೆ. ಸಮಗ್ರ ಕೋಟ್ಪಾ ತಿದ್ದುಪಡಿ ಮಸೂದೆ ಮಂಡಿಸುವಾಗ ಸರ್ಕಾರ ಈ  ಶಿಫಾರಸ್ಸುಗಳನ್ನು ಪರಿಗಣಿಸುತ್ತದೆ ಎಂದು ನಾವು ಭಾವಿಸುತ್ತೇವೆ,” ಎಂದು ಏನ್ಎಲ್ಎಸ್ಐಯು ಉಪ ಕುಲಪತಿ ಪ್ರೊ. ಸುಧೀರ್ ಕೃಷ್ಣಸ್ವಾಮಿ ಹೇಳಿದರು.

ಏನ್ಎಲ್ಎಸ್ಐಯು ವರದಿ ಕೋಟ್ಪಾ ಕಾಯ್ದೆಗೆ ಕೆಳಕಂಡ ತಿದ್ದುಪಡಿಗಳನ್ನು ಶಿಫಾರಸ್ಸು ಮಾಡುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ (ಹೋಟೆಲ್, ಪಬ್, ಇತ್ಯಾದಿ) ‘ಗೊತ್ತುಪಡಿಸಿದ ಧೂಮಪಾನ ಪ್ರದೇಶ’ಗಳಿಗೆ ಅವಕಾಶ ನೀಡಬಾರದು; ಅಂಗಡಿ ಮತ್ತು ಮಳಿಗೆಗಳಲ್ಲಿ ಜಾಹೀರಾತು ಮತ್ತು ತಂಬಾಕು ಉತ್ಪನ್ನಗಳ ಪ್ರದರ್ಶನ ಕಡ್ಡಾಯವಾಗಿ ನಿಷೇಧಿಸಬೇಕು.

ಅಂತರ್ಜಾಲ ಆಧಾರಿತ ವೇದಿಕೆಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತು ನಿಷಿದ್ಧ ಎಂಬುದನ್ನು ನಿರ್ದಿಷ್ಟ ಪಡಿಸಬೇಕು. ತಂಬಾಕು ಕಂಪನಿಗಳು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಚಟುವಟಿಕೆಗಳಲ್ಲಿ  ತೊಡಗುವುದು ಮತ್ತು ಕಾರ್ಯಕ್ರಮಗಳ ಕಾರ್ಪೊರೇಟ್ ಪ್ರಾಯೋಜಕತ್ವ ಪಡೆಯುವುದನ್ನು ನಿಷೇಧಿಸಬೇಕು; ಸಿಗರೇಟ್ ಪ್ಯಾಕ್ ಗಳ ಮೇಲೆ ಕಾರಕ ಮುದ್ರಣವನ್ನು ನಿಷೇಧಿಸಬೇಕು. ಸುವಾಸನೆಭರಿತ ತಂಬಾಕು ನಿಷೇಧಿಸಬೇಕು; ತಂಬಾಕು ಉತ್ಪನ್ನಗಳ ಮಾರಾಟ ವನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ವ್ಯಕ್ತಿಗೆ ನಿಷೇಧಿಸಲಾಗಿದೆ. ಕನಿಷ್ಠ ವಯಸ್ಸನ್ನು 21 ವರ್ಷಕ್ಕೆ ಹೆಚ್ಚಿಸಬೇಕು; ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಬಿಡಿ ಮಾರಾಟವನ್ನು ನಿಷೇಧಿಸಬೇಕು ಮತ್ತು ದಂಡವನ್ನು ಹೆಚ್ಚಿಸಬೇಕು.

“ಜಗತ್ತಿನಾದ್ಯಂತ ಉಂಟಾಗುತ್ತಿರುವ ಮರಣ ಮತ್ತು ಖಾಯಿಲೆಗಳಿಗೆ ತಂಬಾಕು ಅತ್ಯಂತ ಪ್ರಮುಖ ಕಾರಣ ಎಂಬುದನ್ನು ವೈದ್ಯಕೀಯ ವಿಜ್ಞಾನ ಸ್ಪಷ್ಟವಾಗಿ ಗುರುತಿಸಿದೆ. ಭಾರತದ ಸಂವಿಧಾನದ ಅಡಿ ಸಾರ್ವಜನಿಕರ ಆರೋಗ್ಯ ಕಾಪಾಡುವುದು ಮತ್ತು ಉತ್ತಮಗೊಳಿಸುವುದು ಸರ್ಕಾರದ  ಪ್ರಾಥಮಿಕ ಕರ್ತವ್ಯವಾಗಿದೆ. ಸಂವಿಧಾನದ ಅನುಚ್ಛೇದ 21ರ  ಅಡಿಯಲ್ಲಿ ಭಾರತೀಯರಿಗೆ ದೊರೆತಿರುವ ಆರೋಗ್ಯದ ಹಕ್ಕನ್ನು ಸಂರಕ್ಷಿಸಲು ಹಾಗು ದೇಶದಲ್ಲಿ ತಂಬಾಕು ಬಳಕೆ ಕಡಿಮೆ ಮಾಡಲು ಏನ್ಎಲ್ಎಸ್ಐಯು ವರದಿಯ ಶಿಫಾರಸ್ಸುಗಳನ್ನು ತುರ್ತಾಗಿ ಜಾರಿಗೆ ತರಬೇಕು. ಎಫ್  ಸಿಟಿಸಿಯ ಜಾಗತಿಕ ಸಾರ್ವಜನಿಕ ಆರೋಗ್ಯ ಒಪ್ಪಂದಕ್ಕೆ ಬದ್ಧವಾಗಿರಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕೋಟ್ಪಾ 2003ಕ್ಕೆ ತಿದ್ದುಪಡಿ ತರುವುದು ಬಹುಮುಖ್ಯವಾಗಿದೆ,” ಎಂದು ಸುಪ್ರೀಂ ಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್  ಎಂ ಎನ್  ವೆಂಕಟಾಚಲಯ್ಯ ಅಭಿಪ್ರಾಯಪಟ್ಟರು.

ತಂಬಾಕು ಉತ್ಪನ್ನಗಳ ಲಭ್ಯತೆ ಮತ್ತು ಜಾಹೀರಾತನ್ನು ನಿಯಂತ್ರಿಸಲು ಹಾಗು ತಂಬಾಕು ಉತ್ಪನ್ನಗಳ ಬಳಕೆಗೆ ಜನರಲ್ಲಿ ನಿರುತ್ಸಾಹ ಮೂಡಿಸಿ ಸಾರ್ವಜನಿಕ ಆರೋಗ್ಯವನ್ನು ವೃದ್ಧಿಸಲು ಕೋಟ್ಪಾ ಕಾಯ್ದೆಯನ್ನು 2003ರಲ್ಲಿ ಪರಿಚಯಿಸಲಾಯಿತು. ತಂಬಾಕು ನಿಯಂತ್ರಣದ ಸಮಗ್ರ ಕಾನೂನು  ಈ ಕಾಯ್ದೆ ಉದ್ದೇಶವಾಗಿತ್ತು. ಆದರೆ, ಸಮಯ ಕಳೆದಂತೆ ಅದರ ನ್ಯೂನತೆಗಳೇ  ಅದರ ಆಶಯಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸವಾಲೊಡ್ಡಿದೆ.

“ತಂಬಾಕು ಉತ್ಪನ್ನಗಳು ಆರೋಗ್ಯಕ್ಕೆ ಮಾರಕ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಇವು ಜನರನ್ನು ಜೀವನಪರ್ಯಂತ ದುಃಖ ಮತ್ತು ಬಳಲಿಕೆಗೆ ದೂಡುತ್ತವೆ. ಇದರಿಂದ ಭಾರತೀಯರನ್ನು ರಕ್ಷಿಸಲು ತಂಬಾಕು ಪದಾರ್ಥಗಳು ಕೈಗೆ ಸಿಗದಂತೆ ಮಾಡಬೇಕು. ದೇಶದಲ್ಲಿ  ಸಾಂಕ್ರಾಮಿಕವೆಂಬಂತೆ ಹಬ್ಬುತ್ತಿರುವ ತಂಬಾಕು ಚಟವನ್ನು ನಿಯಂತ್ರಿಸಲು ಹಾಗು ತಂಬಾಕಿನ ವಿರುದ್ಧ ಹೋರಾಟಕ್ಕೆ ಚೈತನ್ಯ ತುಂಬಲು ತಂಬಾಕು ನಿಯಂತ್ರಣ ಕಾನೂನುಗಳನ್ನು ಕಠಿಣಗೊಳಿಸುವುದು ಬಹುಮುಖ್ಯವಾಗಿದೆ,” ಎಂದು ಪ್ರಸಿದ್ಧ ಕ್ಯಾನ್ಸರ್ ತಜ್ಞರು ಮತ್ತು ತಂಬಾಕು  ನಿಯಂತ್ರಣ ಉನ್ನತ ಮಟ್ಟದ ಸಮಿತಿ, ಕರ್ನಾಟಕ ಸರ್ಕಾರ, ಸದಸ್ಯರಾದ ಡಾ. ವಿಶಾಲ್ ರಾವ್ ತಿಳಿಸಿದ್ದಾರೆ.

ತಂಬಾಕು ಬಳಕೆದಾರರ ಪಟ್ಟಿಯಲ್ಲಿ ಜಾಗತಿಕವಾಗಿ ಭಾರತ ಎರಡನೇ ಸ್ಥಾನದಲ್ಲಿದೆ (268 ಮಿಲಿಯನ್ ಅಥವಾ ದೇಶದ ಶೇಕಡಾ 28.6 % ವಯಸ್ಕರು). ಇದರಲ್ಲಿ ಪ್ರತಿವರ್ಷ 12 ಲಕ್ಷ ಮಂದಿ ತಂಬಾಕು ಸಂಬಂಧಿತ ಖಾಯಿಲೆಗಳಿಂದ ಮೃತಪಡುತಿದ್ದಾರೆ.  ಧೂಮಪಾನದಿಂದಾಗಿ 10 ಲಕ್ಷ ಜನ  ಮರಣ ಹೊಂದುತ್ತಿದ್ದರೆ, ಎರಡು ಲಕ್ಷಕ್ಕೂ ಹೆಚ್ಚು ಮಂದಿ ಧೂಮಪಾನಕ್ಕೆ ಒಡ್ಡಿಕೊಂಡು (ಸೆಕೆಂಡ್ ಹ್ಯಾಂಡ್ ಸ್ಮೋಕಿಂಗ್) ಸಾವನ್ನಪ್ಪುತ್ತಿದ್ದಾರೆ. ಅಲ್ಲದೆ, 35,000ಕ್ಕೂ ಹೆಚ್ಚು ಜನ ಹೊಗೆರಹಿತ ತಂಬಾಕು ಬಳಕೆಯಿಂದ ಅಸುನೀಗುತ್ತಿದ್ದಾರೆ. ತಂಬಾಕು ಬಳಕೆ ಭಾರತದಲ್ಲಿನ ಶೇಕಡಾ 27 % ಎಲ್ಲ  ವಿಧದ ಕ್ಯಾನ್ಸರ್ ಗಳಿಗೆ ಕಾರಣ. ತಂಬಾಕು ಸಂಬಂದಿತ ಖಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ ಪ್ರತಿವರ್ಷ 1,82,000 ಕೋಟಿ ರೂಪಾಯಿಗಳು ವ್ಯಯವಾಗುತ್ತಿದ್ದು, ಇದು ಭಾರತದ ಜಿಡಿಪಿಯ ಶೇಕಡಾ 1.8% ರಷ್ಟಾಗಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com