ಸ್ಥಳೀಯ ವಿದ್ಯಾರ್ಥಿಗಳ ಹಿತಾಸಕ್ತಿ ರಕ್ಷಿಸುವಂತೆ ಮುಖ್ಯಮಂತ್ರಿಗೆ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಒತ್ತಾಯ

ಸ್ಥಳೀಯ ವಿದ್ಯಾರ್ಥಿಗಳ ಹಿತಾಸಕ್ತಿ ರಕ್ಷಿಸಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕ್ರಮ ಕೈಗೊಳ್ಳಬೇಕೆಂದು ರಾಜ್ಯಸಭಾ ಸದಸ್ಯ ಜಿ. ಸಿ. ಚಂದ್ರಶೇಖರ್ ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಕಾನೂನು ಶಾಲೆ ವಿವಿ ವಿದ್ಯಾರ್ಥಿಗಳ ಪ್ರತಿಭಟನೆ
ರಾಷ್ಟ್ರೀಯ ಕಾನೂನು ಶಾಲೆ ವಿವಿ ವಿದ್ಯಾರ್ಥಿಗಳ ಪ್ರತಿಭಟನೆ

ಬೆಂಗಳೂರು: ಸ್ಥಳೀಯ ವಿದ್ಯಾರ್ಥಿಗಳ ಹಿತಾಸಕ್ತಿ ರಕ್ಷಿಸಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕ್ರಮ ಕೈಗೊಳ್ಳಬೇಕೆಂದು ರಾಜ್ಯಸಭಾ ಸದಸ್ಯ ಜಿ. ಸಿ. ಚಂದ್ರಶೇಖರ್ ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಅಧ್ಯಯನ ಮಾಡಿರುವ ಅಭ್ಯರ್ಥಿಗಳಿಗೆ ಶೇ. 25 ರಷ್ಟು ಮೀಸಲಾತಿ ಒದಗಿಸುವ ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾನಿಲಯದ ಕಾಯ್ದೆ ತಿದ್ದುಪಡಿ ಕಾನೂನು ಬಾಹಿರ ಎಂದು ಹೈಕೋರ್ಟ್ ಹೇಳಿದ ನಂತರ ಈ ಬೆಳವಣಿಗೆ ನಡೆದಿದೆ.

ಮುಖ್ಯಮಂತ್ರಿಗೆ ಪತ್ರ ಬರೆದಿರುವ ಜಿ. ಸಿ. ಚಂದ್ರಶೇಖರ್, ಕೂಡಲೇ ಕಾನೂನು ತಜ್ಞರನ್ನೊಳಗೊಂಡ ಸಮಿತಿಯನ್ನು ರಚಿಸಬೇಕು, ಸ್ಥಳೀಯ ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಈ ವಿಚಾರವನ್ನು ಸುಪ್ರೀಂಕೋರ್ಟ್ ಗೆ ಕೊಂಡೊಯ್ಯಬೇಕು ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷ ರಾಜ್ಯದ ಕೇವಲ 8 ವಿದ್ಯಾರ್ಥಿಗಳು ಮಾತ್ರ ಎನ್ ಎಲ್ ಎಸ್ ಐಯುನಲ್ಲಿ ಸೀಟು ಪಡೆದುಕೊಂಡಿದ್ದಾರೆ. ಧಾರವಾಡ ಐಐಟಿಯಲ್ಲಿ ಐದು ಸ್ಥಳೀಯ ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿರುವುದಾಗಿ ಚಂದ್ರಶೇಖರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಶೇ. 25 ರಷ್ಟು ಮೀಸಲಾತಿ ನ್ಯಾಯಯುತವಾದದ್ದು, ಇದರಿಂದ ಸ್ಥಳೀಯ ಯುವ ಜನಾಂಗಕ್ಕೆ ಉದ್ಯೋಗ ದೊರೆಯಲು ನೆರವಾಗಲಿದೆ. ದೇಶದಲ್ಲಿರುವ 23 ರಾಷ್ಟ್ರೀಯ ಕಾನೂನು ಕಾಲೇಜುಗಳ ಪೈಕಿ ಬಹುತೇಕ ಕಾಲೇಜುಗಳಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹೈದ್ರಾಬಾದಿನ ಎನ್ ಎಎಲ್ ಎಸ್ ಎಆರ್ ನಲ್ಲಿ ಶೇ.20, ಭೂಪಾಲ್ ನ ಎನ್ ಎಲ್ ಯುನಲ್ಲಿ 26 ಸೀಟುಗಳನ್ನು ಸ್ಥಳೀಯ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಶೇ.30 ರಷ್ಟು ಮೀಸಲಾತಿ ನೀಡುವ ವ್ಯವಸ್ಥೆಯನ್ನು ಕೊಲ್ಕತ್ತಾ ಎನ್ ಯುಜೆಎಸ್ ಅಳವಡಿಸಿಕೊಂಡಿದೆ ಎಂದು ಹೇಳಿರುವ ಚಂದ್ರಶೇಖರ್, ರಾಷ್ಟ್ರೀಯ ಕಾನೂನು ಕಾಲೇಜುಗಳು, ಐಐಟಿ, ಐಐಎಂಸ್ ನಂತಹ ಸಂಸ್ಥೆಗಳು ನಡೆಸುವ ಪ್ರವೇಶ ಪರೀಕ್ಷೆಗಳಲ್ಲಿ ನಗರದ ವಿದ್ಯಾರ್ಥಿಗಳೊಂದಿಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸ್ಪರ್ಧಿಸುವುದು ಕಷ್ಟಕರವಾಗಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com