ಮಾಜಿ ಡಿಸಿಎಂ ಪರಮೇಶ್ವರ ಸಂಬಂಧಿ ಎಂದು ವಂಚಿಸಲು ಯತ್ನ: ಮಹಿಳೆಯನ್ನು ಪೊಲೀಸರ ವಶಕ್ಕೆ ನೀಡಿದ ವ್ಯಕ್ತಿ!

ಮಾಜಿ ಡಿಸಿಎಂ ಪರಮೇಶ್ವರ ಅವರ ಸಂಬಂಧಿ ಎಂದು ಹೇಳಿಕೊಂಡು ವಂಚಿಸಲು ಯತ್ನಿಸಿದ್ದ ಮಹಿಳೆಯೊಬ್ಬಳ ಕಪಟ ಮುಖವನ್ನು ಕಂಡುಹಿಡಿದ ವ್ಯಕ್ತಿಯೊಬ್ಬ ಪೊಲೀಸರಿಗೆ ಒಪ್ಪಿಸಿರುವ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಾಜಿ ಡಿಸಿಎಂ ಪರಮೇಶ್ವರ ಅವರ ಸಂಬಂಧಿ ಎಂದು ಹೇಳಿಕೊಂಡು ವಂಚಿಸಲು ಯತ್ನಿಸಿದ್ದ ಮಹಿಳೆಯೊಬ್ಬಳ ಕಪಟ ಮುಖವನ್ನು ಕಂಡುಹಿಡಿದ ವ್ಯಕ್ತಿಯೊಬ್ಬ ಪೊಲೀಸರಿಗೆ ಒಪ್ಪಿಸಿರುವ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. 

ಕ್ಯಾಬ್ ಚಾಲಕನಾಗಿರುವ ನಾಗದೇವನಹಳ್ಳಿಯ ನಿವಾಸಿ ಯೋಗೇಶ್ ಅವರಿಗೆ ಕೆಲ ದಿನಗಳ ಹಿಂದಷ್ಟೇ ಪಲ್ಲವಿ ಎಂಬ ಮಹಿಳೆಯ ಪರಿಚಯವಾಗಿದೆ. ಯೋಗೇಶ್ ಅವರ ಸಂಬಂಧಿಯಾಕಿರುವ ರಾಜಶೇಖರ್ ಅವರು ಪಲ್ಲವಿಯವರ ಪರಿಚಯ ಮಾಡಿಕೊಟ್ಟಿದ್ದಾರೆ. ಈ ಹಿಂದೆ ಪಲ್ಲವಿ ರಾಜಶೇಖರ್ ಅವರ ಕಾರಿನಲ್ಲಿ ಓಡಾಡುತ್ತಿದ್ದರು. 

ತಾನೊಬ್ಬ ಸಾಮಾಜಿಕ ಕಾರ್ಯಕರ್ತೆಯಾಗಿದ್ದು, ಪರಮೇಶ್ವರ್ ಅವರ ಸಂಬಂಧಿ ಎಂದು ಪಲ್ಲವಿ ತನ್ನನ್ನು ಪರಿಚಯಿಸಿಕೊಂಡಿದ್ದಾಳೆ. ಅಲ್ಲದೆ, ನಿರುದ್ಯೋಗಸ್ಥ ಯುವಕರಿಗೆ ಮುದ್ರಾ ಯೋಜನೆ ಮೂಲಕ ಸಾಲ ಕೊಡಿಸುವ ಕೆಲಸ ಮಾಡುತ್ತಿದ್ದೇನೆಂದು ಹೇಳಿ ಯೋಗೇಶ್ ಅವರಿಂದ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡಿದ್ದಾಳೆ. 

ಮೇ ತಿಂಗಳಿನಲ್ಲಿ ರಾಜೇಶೇಖರ್ ಅವರಿಗೆ ಕರೆ ಮಾಡಿರುವ ಪಲ್ಲವಿ, ತಾನು ಮೈಸೂರಿನಲ್ಲಿದ್ದು, ಕಾರಿನ ಅಗತ್ಯವಿದೆ ಎಂದು ಹೇಳಿಕೊಂಡಿದ್ದಾಳೆ. ಬಳಿಕ ರಾಜಶೇಖರ್ ಯೋಗೇಶ್ ಅವರನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ. ಲಾಕ್'ಡೌನ್ ಇದ್ದ ಕಾರಣ ನನಗೂ ಯಾವುದೇ ಕೆಲಸವಿರಲಿಲ್ಲ. ಬಳಿಕ ಮೈಸೂರಿಗೆ ತೆರಳಿ ಪಲ್ಲವಿ ಹಾಗೂ ಮತ್ತೊಬ್ಬ ಹಿರಿಯ ಮಹಿಳೆಯರನ್ನು ಎರಡು ದಿನಗಳ ಕಾಲ ಕಾರಿನಲ್ಲಿ ಸುತ್ತಾಡಿಸಿದ್ದೆ. ಇದಕ್ಕೆ ಪಲ್ಲವಿ ಹಣವನ್ನೂ ನೀಡಿದ್ದಳು. ಮತ್ತೆ ಕಾರಿನ ಅಗತ್ಯ ಬಿದ್ದರೆ ಕರೆ ಮಾಡುವುದಾಗಿ ತಿಳಿಸಿದ್ದರು. ಎರಡು ದಿನಗಳ ಬಳಿಕ ಮತ್ತೆ ಕರೆ ಮಾಡಿದ ಪಲ್ಲವಿ, ನನ್ನನ್ನು ಪ್ರೀತಿಸುತ್ತಿರುವುದಾಗಿ ತಿಳಿಸಿದ್ದರು. ಆದರೆ, ಇದಕ್ಕೆ ನಾನು ಒಪ್ಪಿರಲಿಲ್ಲ. 

ಸಾಕಷ್ಟು ಸಂದರ್ಭದಲ್ಲಿ ನನ್ನ ಕಾರನ್ನು ಪಡೆದುಕೊಳ್ಲುತ್ತಿದ್ದರು. ಆದರೆ, ಬಾಡಿಗೆ ನೀಡುತ್ತಿರಲಿಲ್ಲ. ಇದರ ಮೊತ್ತ ರೂ.4 ಲಕ್ಷವಾಗಿದೆ. ಬಾಡಿಗೆ ಹಣವನ್ನು ನೀಡುವಂತೆ ಕೇಳಿದಾಗ ಪಲ್ಲವಿ ನನಗೆ ಬೆದರಿಕೆ ಹಾಕಿದ್ದಳು. ಮದುವೆಯಾಗದಿದ್ದರೆ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಳು. ಕೆಲ ದಿನಗಳು ಕಳೆದಂತೆ ಪಲ್ಲವಿ ಸಾಕಷ್ಟು ಹತ್ತಿರವಾಗಿದ್ದಳು. ಬಳಿಕ ನಾನು ನನ್ನ ಪೋಷಕರಿಗೆ ಈ ಬಗ್ಗೆ ತಿಳಿಸಿ ಮದುವೆ ಬಗ್ಗೆ ಮಾತನಾಡಿದ್ದೆ. ಈ ವೇಳೆ ಪಲ್ಲವಿಗೆ ಈ ಹಿಂದೆಯೇ ಎರಡು ಬಾರಿ ಮದುವೆಯಾಗಿದ್ದು, 

ಸಾಲ ಕೊಡಿಸುವ ಆಸೆ ತೋರಿಸಿ ಹಣಕ್ಕಾಗಿ ಹಲವು ಯುವಕರಿಗೂ ಮೋಸ ಮಾಡಿರುವುದು ನನಗೆ ತಿಳಿದಿತ್ತು. ಆಕೆಯ ಗುರ್ತಿಕೆಯನ್ನು ಪತ್ತೆ ಹಚ್ಚುವ ಸಲುವಾಗಿ ನಾನು ಆಕೆಯನ್ನು ಸದಾಶಿವನಗರದಲ್ಲಿರುವ ಪರಮೇಶ್ವರ್ ಅವರ ನಿವಾಸಕ್ಕೆ ಅಕ್ಟೋಬರ್ 23ಕ್ಕೆ ಕರೆದುಕೊಂಡು ಹೋಗಿದ್ದೆ. ಈ ವೇಳೆ ಪರಮೇಶ್ವರ ಅವರ ಪತ್ನಿ ಆಕೆಯನ್ನು ಗುರ್ತಿಸಲಿಲ್ಲ. ಈಗೆ ತಮ್ಮ ಸಂಬಂಧಿಯಲ್ಲ ಎಂದಿದ್ದರು. ಬಳಿಕ ಮತ್ತೆ ತುಮಕೂರಿನಲ್ಲಿರುವ ಸಿದ್ಧಾರ್ಥ ವೈದ್ಯಕೀಯ ಕಾಲೇಜಿಗೆ ತೆರಳಿ ಈ ಬಗ್ಗೆ ವಿಚಾರಿಸಿದಾಗ ಪರಮೇಶ್ವರ್ ಅವರೂ ಕೂಡ ಇದೇ ರೀತಿ ಹೇಳಿದರು. ಅಲ್ಲದೆ, ಪೊಲೀಸರಿಗೆ ದೂರು ನೀಡುವಂತೆ ತಿಳಿಸಿದ್ದರು. ಇದೀಗ ನಾನು ಜ್ಞಾನಬಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆಂದು ಯೋಗೇಶ್ ಅವರು ತಿಳಿಸಿದ್ದಾರೆ. 

ಪಲ್ಲವಿ ಈ ಹಿಂದೆ ಪೊಲೀಸರಿಗೂ ಮೋಸ ಮಾಡಿರುವುದು ಇದೇ ವೇಳೆ ಬೆಳಕಿಗೆ ಬಂದಿದೆ. ಪೊಲೀಸ್ ಠಾಣೆಗಳಿಗೆ ಭೇಟಿ ನೀಡುತ್ತಿದ್ದ ಪಲ್ಲವಿ, ಪೊಲೀಸ್ ಸಿಬ್ಬಂದಿಗಳಿಗೆ ವರ್ಗಾವಣೆಗೆ ಸಹಾಯ ಮಾಡುವುದಾಗಿ ತಿಳಿಸುತ್ತಿದ್ದಳು ಎಂದು ಮೂಲಗಳಿಂದ ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com