ಮೇಲ್ಮನೆಯಲ್ಲಿ ಕಾಂಗ್ರೆಸ್ ಧರಣಿ: ನೆಹರು ಪ್ರತಿಮೆ ಪುನರ್ ಪ್ರತಿಷ್ಠಾಪನೆಗೆ ಸಿಎಂ ಬಿಎಸ್‌ವೈ ಒಪ್ಪಿಗೆ

ವಿಧಾನಸೌಧದ ಮುಂಭಾಗ ಮಾಜಿ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಪ್ರತಿಮೆಯನ್ನು ಪುನರ್ ಪ್ರತಿಷ್ಠಾಪಿಸುವಂತೆ ಮೇಲ್ಮನೆಯಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು.
ನೆಹರು ಪ್ರತಿಮೆ
ನೆಹರು ಪ್ರತಿಮೆ

ಬೆಂಗಳೂರು: ವಿಧಾನಸೌಧದ ಮುಂಭಾಗ ಮಾಜಿ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಪ್ರತಿಮೆಯನ್ನು ಪುನರ್ ಪ್ರತಿಷ್ಠಾಪಿಸುವಂತೆ ಮೇಲ್ಮನೆಯಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು.

ಗಮನ ಸೆಳೆಯುವ ಸೂಚನೆ ವೇಳೆ ಕಾಂಗ್ರೆಸ್ ನ ಹಿರಿಯ ಸದಸ್ಯ ಬೋಸರಾಜ್, ಜವಾಹರ್ ಲಾಲ್ ನೆಹರು ಪ್ರತಿಮೆಯನ್ನು ಮೊದಲಿನಂತೆ ಪುನರ್ ಪ್ರತಿಷ್ಠಾಪಿಸಬೇಕೆಂದರು. ಇದಕ್ಕೆ ಉತ್ತರಿಸಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಈ ಸಂಬಂಧ ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.

ಸಭಾನಾಯಕರ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು, ಮೆಟ್ರೋ ಕಾಮಗಾರಿಯಿಂದ ವಿಧಾನ ಸೌಧದ ಮುಂಭಾಗದಲ್ಲಿ ಇದ್ದ ನೆಹರು ಪ್ರತಿಮೆಯನ್ನು ವಿಧಾನ ಸೌಧದ ಪಶ್ಚಿಮ ಭಾಗದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಮೆಟ್ರೋ ಕಾಮಗಾರಿ ಮುಗಿದ ಬಳಿಕ ಪುನಃ ಅಲ್ಲಿಯೇ ಪುನರ್ ಪ್ರತಿಷ್ಠಾಪಿಸಲು ಆದೇಶ ಹೊರಡಿಸಲಾಗಿದೆ. ಹೀಗಾಗಿ ಇದಕ್ಕೆ ಪರಿಶೀಲನೆ ಅಗತ್ಯವಿಲ್ಲ. ಕೂಡಲೇ ಪುನರ್ ಪ್ರತಿಷ್ಠಾಪಿಸುವುದಾಗಿ ಹೇಳುವಂತೆ ಒತ್ತಾಯಿಸಿದರು. ಆಗಲೂ ವಿಪಕ್ಷ ಮಾತಿಗೆ ಒಪ್ಪದ ಕೋಟಾ ಶ್ರೀನಿವಾಸ್ ಪೂಜಾರಿ, ಪರಿಶೀಲಿಸಲಾಗುವುದೆಂಬ ಮಾತನ್ನೇ ಪುನರುಚ್ಚರಿಸಿದರು.

ಇದರಿಂದ ಕೋಪಗೊಂಡ ಕಾಂಗ್ರೆಸ್ ಸದಸ್ಯರು ಸಭಾಪತಿ ಪೀಠದ ಮುಂಭಾಗ ಬಂದು ಪ್ರತಿಭಟನೆಗೆ ಮುಂದಾದರು. ಆಗ ಕಾನೂನು ಸಚಿವ ಮಾಧುಸ್ವಾಮಿ, ನೆಹರು ಪ್ರತಿಮೆ ಪುನರ್ ಪ್ರತಿಷ್ಠಾಪಿಸುವುದಾಗಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದ ಬಳಿಕ ವಿಪಕ್ಷ ಸದಸ್ಯರು ಪ್ರತಿಭಟನೆ ಹಿಂಪಡೆದರು.

ಈ ಬಗ್ಗೆ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ. ಕೆ.ಗೋವಿಂದರಾಜ್ ಅವರು ನಿಯಮ-72ರಡಿ ಮಂಡಿಸಿದ ಸೂಚನಾ ಪತ್ರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉತ್ತರಿಸಿ, ವಿಧಾನಸೌಧದ ಮುಂಭಾಗದಲ್ಲಿ ಮೂಲ ಪ್ರತಿಮೆಯಿದ್ದ ಪ್ರದೇಶದಲ್ಲಿ ಸೂಕ್ತ ಸ್ಥಳವನ್ನು ಗುರುತಿಸಿ ಪಂಡಿತ್ ಜನಾಹರ್ ಲಾಲ್ ನೆಹರೂರವರ ಪ್ರತಿಮೆಯನ್ನು ಪುನರ್ ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com