ರಾಜ್ಯದಲ್ಲಿ ತೀವ್ರಗೊಂಡ ಕೊರೋನಾ ಹೆಮ್ಮಾರಿ ಕಾಟ: ಸಾರ್ವಜನಿಕ ಒಗ್ಗೂಡುವಿಕೆ, ಸಮಾರಂಭಗಳಿಗೆ ಸರ್ಕಾರ ನಿಷೇಧ

ಸಾರ್ವಜನಿಕರ ನಿರ್ಲಕ್ಷ್ಯದಿಂದಾಗಿ ರಾಜ್ಯದಲ್ಲಿ ಮಹಾಮಾರಿ ಕೊರೋನಾ ಸೋಂಕು ತೀವ್ರಗೊಳ್ಳುತ್ತಿದ್ದು, ನಿಮಯ ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಾರ್ವಜನಿಕರ ನಿರ್ಲಕ್ಷ್ಯದಿಂದಾಗಿ ರಾಜ್ಯದಲ್ಲಿ ಮಹಾಮಾರಿ ಕೊರೋನಾ ಸೋಂಕು ತೀವ್ರಗೊಳ್ಳುತ್ತಿದ್ದು, ನಿಮಯ ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, ರಾಜ್ಯದಲ್ಲಿ ಕಳೆದ 2 ತಿಂಗಳುಗಳಿಂದ ಸೋಂಕಿತರ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ವೈರಸ್ ಎಷ್ಟು ಅಪಾಯವಾಗಿದೆ ಎಂಬುದರ ಕುರಿತು ಜಾಗೃತಿ ಮೂಡಿಸುತ್ತಿದ್ದರೂ ಜನರು ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದಾರೆ. ಮಾಸ್ಕ್ ಧರಿಸದೆ ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಸಾಮಾಜಿಕ ಅಂತರ ಹಾಗೂ ಇತರೆ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಲಿದ್ದೇವೆಂದು ಹೇಳಿದ್ದಾರೆ. 

ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ. ಸರ್ಕಾರದೊಂದಿಗೆ ಸಿನಿಮಾ ತಾರೆಯರು, ಧಾರ್ಮಿಕ ಮುಖಂಡರು, ರಾಜಕೀಯ ನಾಯಕರು, ಕಲಾವಿದರು, ವಿಶೇಷ ವ್ಯಕ್ತಿಗಳು ಜೊತೆಗೂಡಿ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗುವುದು. ರಾಜ್ಯದ 11 ಜಿಲ್ಲೆಗಳ ಪೈಕಿ 7 ಜಿಲ್ಲೆಗಳಲ್ಲಿ ಶೇ.12ರಷ್ಟು ಪಾಸಿಟಿವ್ ರೇಟ್ ದಾಖಲಾಗಿದೆ. ಆದರೆ, ಸಾವಿನ ಪ್ರಮಾಣದಲ್ಲಿ ರಾಜ್ಯ ಶೇ.1.5ರಷ್ಟು ಇದ್ದು, ನಿಯಂತ್ರಣದಲ್ಲಿದ್ದೇವೆ. ಈ ಪ್ರಮಾಣವನ್ನು ಶೇ.1ಕ್ಕಿಂತ ಕೆಳಗಿಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದ್ದೇವೆಂದು ವಿವರಿಸಿದರು. 

ಕೊರೋನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಾಧ್ಯಮದ ಪಾತ್ರ ದೊಡ್ಡದಾಗಿದ್ದು, ಮಾಧ್ಯಮದವರಿಗಾಗಿ ವಿಶೇಷ ಕಾರ್ಯಗಾರ ನಡೆಸುವ ಸಲಹೆ ಕೇಳಿಬಂದಿದೆ. ವಾರದೊಳಗೆ ಕಾರ್ಯಗಾರ ಆಯೋಜನೆ ಮಾಡಲಾಗುವುದು. ಕೊರೋನಾ ಸೋಂಕಿಗೆ ಮಾಸ್ಕ್ ಧರಿಸುವುದೇ ಲಸಿಕೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅದರಂತೆ ನಾವೆಲ್ಲರೂ ಮಾಸ್ಕ್ ಧರಿಸುವ ಮೂಲಕ ಕೊರೋನಾ ನಿಯಂತ್ರಿಸಬೇಕು. ಮೋದಿಯವರು ರಾಜ್ಯದಲ್ಲಿ ಪರೀಕ್ಷೆ ಪ್ರಮಾಣವನ್ನು 3 ಪಟ್ಟು ಹೆಚ್ಚಿಸಲು ಸೂಚನೆ ನೀಡಿದ್ದಾರೆ. ಅಂತೆಯೇ ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com