ಕಬ್ಬನ್‌ ಪಾರ್ಕ್‌ನಲ್ಲಿ ಸಂಪೂರ್ಣ ವಾಹನ ಸಂಚಾರ ನಿಷೇಧ ಅಸಾಧ್ಯ: ನ್ಯಾಯಾಲಯಕ್ಕೆ ಸರ್ಕಾರ ಸ್ಪಷ್ಟನೆ

ಕಬ್ಬನ್ ಪಾರ್ಕ್ ಒಳಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್'ಗೆ ರಾಜ್ಯ ಸರ್ಕಾರ ಗುರುವಾರ ಸ್ಪಷ್ಟಪಡಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕಬ್ಬನ್ ಪಾರ್ಕ್ ಒಳಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್'ಗೆ ರಾಜ್ಯ ಸರ್ಕಾರ ಗುರುವಾರ ಸ್ಪಷ್ಟಪಡಿಸಿದೆ. 

ಕಬ್ಬನ್‌ ಪಾರ್ಕ್ ಒಳಗೆ ವಾಹನಗಳ ಸಂಚಾರ ಸಂಪೂರ್ಣ ನಿಷೇಧಿಸುವ ಕುರಿತು ಕಬ್ಬನ್‌ ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ವಕೀಲ ಎಸ್‌.ಉಮೇಶ್‌ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ, ಗುರುವಾರ ನ್ಯಾಯಮೂರ್ತಿ ಬಿ.ವಿ.ನಾಗರತ್ನ ನೇತೃತ್ವದ ವಿಭಾಗೀಯ ಪೀಠದ ಮುಂದೆ ಇತ್ತೀಚೆಗೆ ವಿಚಾರಣೆಗೆ ಬಂದಿತ್ತು.

ಈ ವೇಳೆ ಸರ್ಕಾರದ ಪರ ವಕೀಲರು, ಅರ್ಜಿ ಸಂಬಂಧ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಸಲ್ಲಿಸಿದ ಪ್ರಮಾಣ ಪತ್ರವನ್ನು ನ್ಯಾಯಪೀಠಕ್ಕೆ ಒದಗಿಸಿದರು.

ಅದರಂತೆ ಹೈಕೋರ್ಟ್‌ ನಿರ್ದೇಶನದಂತೆ ಕಬ್ಬನ್‌ ಪಾರ್ಕ್‌ನಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧ ಮಾಡುವ ವಿಚಾರದ ಬಗ್ಗೆ 2020ರ ನ.21ರಂದು ಸಂಬಂಧಪಟ್ಟ ಎಲ್ಲಾ ಇಲಾಖೆಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಯಿತು. 

ಕಬ್ಬನ್‌ ಪಾರ್ಕ್‌ನಲ್ಲಿ ವಾಹನ ಸಂಚಾರ ನಿರ್ಬಂಧಿಸಲು ಸಾಧ್ಯವಿಲ್ಲ. ಮೊದಲಿನಂತೆಯೇ ಕಬ್ಬನ್‌ ಪಾರ್ಕ್‌ನಲ್ಲಿ ವಾಹನ ಸಂಚಾರ ಮುಂದುವರಿಯಬೇಕು ಎಂದು ಎಲ್ಲಾಇಲಾಖೆಗಳು ಅಭಿಪ್ರಾಯ ಸಲ್ಲಿಸಿವೆ. ಅವುಗಳನ್ನು ಪರಿಶೀಲಿಸಿದ ನಂತರ ಕಬ್ಬನ್‌ ಪಾರ್ಕ್‌ನಲ್ಲಿ ವಾಹನ ಸಂಚಾರ ನಿರ್ಬಂಧಿಸದೇ ಇರಲು ನಿರ್ಧರಿಸಲಾಗಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ. 

ಬಳಿಕ ಈ ಪ್ರಮಾಣ ಪತ್ರವನ್ನು ಪರಿಗಣಿಸಿದ ನ್ಯಾಯಪೀಠ, ನ್ಯಾಯಾಂಗ ನಿಂದನೆ ಆರೋಪವನ್ನು ಕೈಬಿಟ್ಟಿದೆ. ಕಬ್ಬನ್‌ ಪಾರ್ಕ್‌ನಲ್ಲಿ ವಾಹನ ಸಂಚಾರ ಸಂಪೂರ್ಣ ನಿರ್ಬಂಧಿಸಬೇಕೆಂಬ ಅರ್ಜಿದಾರರ ಮನವಿ ಮತ್ತು ಆ ಕುರಿತು 2020ರ ಸೆ.3ರಂದು ನಗರ ಭೂ ಸಾರಿಗೆ ನಿರ್ದೇಶನಾಲಯದ ಆಯುಕ್ತರು ಮಾಡಿರುವ ಶಿಫಾರಸನ್ನು ಪರಿಗಣಿಸಿ ಸೂಕ್ತ ತೀರ್ಮಾನ ಕೈಗೊಳ್ಳುವಂತೆ 2020ರ ಅ.22ರಂದು ಸರಕಾರಕ್ಕೆ ಹೈಕೋರ್ಟ್‌ ಸೂಚಿಸಿತ್ತು. 

ಅದರಂತೆ ಈ ವಿಚಾರವನ್ನು ಸರಕಾರವು ಪರಿಗಣಿಸಿ, ತಿರ್ಮಾನ ಕೈಗೊಂಡಿದೆ. ಆ ಮೂಲಕ ನ್ಯಾಯಾಲಯದ ಸೂಚನೆಯನ್ನು ಸರಕಾರ ಪಾಲಿಸಿರುವ ಕಾರಣ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಕೈಬಿಡಲಾಗುವುದು ಎಂದು ನ್ಯಾಯಪೀಠ ತಿಳಿಸಿದೆ. ಅಲ್ಲದೆ, ಸರಕಾರದ ಈ ನಿರ್ಧಾರದಿಂದ ಅರ್ಜಿದಾರರು ತೃಪ್ತಿಯಾಗದಿದ್ದರೆ, ಅದನ್ನು ಕಾನೂನು ಪ್ರಕಾರ ಪ್ರಶ್ನಿಸಲು ಸ್ವತಂತ್ರರಾಗಿದ್ದಾರೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com