ಬೆಂಗಳೂರಿನಲ್ಲಿ ಕೋವಿಡ್ ಕೇರ್ ಕೇಂದ್ರಗಳ ನಿರ್ಮಾಣ: ಬಿಬಿಎಂಪಿ

ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಬಿಬಿಎಂಪಿ ಕೋವಿಡ್ ಕೇರ್ ಕೇಂದ್ರಗಳ ನಿರ್ಮಾಣದ ಕಾರ್ಯವನ್ನು ತ್ವರಿತಗೊಳಿಸಿದೆ.
ಕೋವಿಡ್ ಕೇರ್ ಸೆಂಟರ್
ಕೋವಿಡ್ ಕೇರ್ ಸೆಂಟರ್
Updated on

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಬಿಬಿಎಂಪಿ ಕೋವಿಡ್ ಕೇರ್ ಕೇಂದ್ರಗಳ ನಿರ್ಮಾಣದ ಕಾರ್ಯವನ್ನು ತ್ವರಿತಗೊಳಿಸಿದೆ.

ಈ ಕುರಿತಂತೆ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ರಾಜೇಂದ್ರ ಚೋಳನ್ ಅವರು, 'ಎಂಟು ಬಿಬಿಎಂಪಿ ವಲಯಗಳಲ್ಲಿನ ಕೋವಿಡ್ ಕೇರ್ ಸೆಂಟರ್‌ಗಳು (ಸಿಸಿಸಿಗಳು) ಎರಡು ಮೂರು ದಿನಗಳಲ್ಲಿ ಸಿದ್ಧವಾಗಲಿವೆ. ಈ ಸಮಯದಲ್ಲಿ, ಖಾಸಗಿ ಹಾಸ್ಟೆಲ್‌ಗಳಿಗಿಂತ ಸಿಸಿಸಿಗಳಿಗಾಗಿ ಅಸ್ತಿತ್ವದಲ್ಲಿರುವ  ಸರ್ಕಾರಿ ಸ್ಥಳಗಳಿಗೆ ಆದ್ಯತೆ ನೀಡಲಾಗುತ್ತಿದೆ. ಈ ಕೇಂದ್ರಗಳ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಖಾಸಗಿ ಆಸ್ಪತ್ರೆಗಳಿಗೆ ನೀಡುವ ಕುರಿತು ಬಿಬಿಎಂಪಿ ಚಿಂತನೆ ನಡೆಸಿದೆ. ಈ ಸಿಸಿಸಿಗಳಿಗೆ ಈವರೆಗೆ ಸುಮಾರು 25 ಸ್ಥಳಗಳನ್ನು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಲಯ ಮತ್ತು ವಿಶೇಷ ಆಯುಕ್ತರೊಂದಿಗಿನ ಸಭೆಯಲ್ಲಿ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮತ್ತು ಚೋಳನ್ ಅವರು ಪ್ರಸ್ತುತ ಸ್ಥಿತಿಗತಿ ವರದಿ ಪಡೆದುಕೊಂಡರು. ಅಂತೆಯೇ ಮೈಕ್ರೊ ಕಂಟೈನ್‌ಮೆಂಟ್ ವಲಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಲು ಮತ್ತು ಎಲ್ಲಾ ಪ್ರಾಥಮಿಕ ಮತ್ತು ದ್ವಿತೀಯಕ  ಸಂಪರ್ಕಗಳನ್ನು 72 ಗಂಟೆಗಳ ಒಳಗೆ ಪತ್ತೆಹಚ್ಚಲು ಸಭೆಯಲ್ಲಿ ನಿರ್ಧರಿಸಲಾಯಿತು.

ಇನ್ನು ತಾಪಮಾನ ಹೆಚ್ಚಿರುವುದರಿಂದ ರಾಷ್ಟ್ರೀಯ ಕ್ರೀಡಾ ಗ್ರಾಮವನ್ನು ಮೀಸಲು ಜಾಗವಾಗಿ ಸಿಸಿಸಿ ಆಗಿ ಪರಿವರ್ತಿಸಲಾಗುವುದು. ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ದಿನಕ್ಕೆ 10,000 ಕ್ಕೆ ಹೆಚ್ಚಿಸುವಂತೆ ಉಪಮುಖ್ಯಮಂತ್ರಿ ಡಾ.ಸಿ ಎನ್ ಅಶ್ವಥ್ ನಾರಾಯಣ್ ನಿರ್ದೇಶನ ನೀಡಿದ್ದಾರೆ. ಈಗ ಪ್ರತಿದಿನ 6,000  ಜನರನ್ನು ಪರೀಕ್ಷಿಸಲಾಗುತ್ತಿದೆ ಮತ್ತು ಇದನ್ನು ತಕ್ಷಣ 8,000 ಕ್ಕೆ ಹೆಚ್ಚಿಸಬೇಕು. ಮತ್ತು ಅತಿ ಶೀಘ್ರದಲ್ಲಿ 10,000 ಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಿದರು.

ಕೋವಿಡ್ ಪರೀಕ್ಷಾ ಕೇಂದ್ರಗಳ ಸ್ಥಳಗಳನ್ನು ಪ್ರಚಾರ ಮಾಡಲಾಗುತ್ತಿದ್ದು, ಕೋವಿಡ್ ಸಹಾಯವಾಣಿ 080-68248454 24/7 ಸಕ್ರಿಯವಾಗಿರುತ್ತದೆ. ಮೊಬೈಲ್ ತಂಡಗಳ ಸಂಖ್ಯೆಯನ್ನು 84 ರಿಂದ 100 ಕ್ಕೆ ಹೆಚ್ಚಿಸಲಾಗುವುದು ಮತ್ತು ಸ್ಯಾಂಪಲ್ ಸಂಗ್ರಹಿಸಿದ 24 ಗಂಟೆಗಳಲ್ಲಿ ಕೋವಿಡ್ ಪರೀಕ್ಷಾ ಫಲಿತಾಂಶಗಳು  ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ವಲಯದಲ್ಲಿ ಐಸಿಯು ಹಾಸಿಗೆಗಳ ಕೊರತೆಯಿಲ್ಲ. ಕೆಸಿ ಜನರಲ್ ಆಸ್ಪತ್ರೆಯಲ್ಲಿ ಐಸಿಯು ಹಾಸಿಗೆಗಳನ್ನು 50 ರಿಂದ 100 ಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com