ಆರ್ ಪಿಎಫ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ; ರೈಲು ಇಳಿಯಲು ಹೋಗಿ ಬಿದ್ದ ವ್ಯಕ್ತಿಯ ರಕ್ಷಣೆ

ರೈಲ್ವೆ ಸಂರಕ್ಷಣಾ ಪಡೆಯ (ಆರ್‌ಪಿಎಫ್) ಇಬ್ಬರು ಪೊಲೀಸರ ಸಮಯ ಪ್ರಜ್ಞೆಯಿಂದಾಗಿ ರೈಲು ಇಳಿಯಲು ಹೋಗಿ ಅಪಾಯಕ್ಕೆ ಸಿಲುಕಿದ್ದ ವ್ಯಕ್ತಿಯ ಪ್ರಾಣ ರಕ್ಷಣೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಗಾಯಗೊಂಡ ಪ್ರಯಾಣಿಕ ಗುರ್ಜೀತ್ ಸಿಂಗ್
ಗಾಯಗೊಂಡ ಪ್ರಯಾಣಿಕ ಗುರ್ಜೀತ್ ಸಿಂಗ್

ನವದೆಹಲಿ: ರೈಲ್ವೆ ಸಂರಕ್ಷಣಾ ಪಡೆಯ (ಆರ್‌ಪಿಎಫ್) ಇಬ್ಬರು ಪೊಲೀಸರ ಸಮಯ ಪ್ರಜ್ಞೆಯಿಂದಾಗಿ ರೈಲು ಇಳಿಯಲು ಹೋಗಿ ಅಪಾಯಕ್ಕೆ ಸಿಲುಕಿದ್ದ ವ್ಯಕ್ತಿಯ ಪ್ರಾಣ ರಕ್ಷಣೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ರೈಲ್ವೆ ವಿಭಾಗದ ಯಲಹಂಕ ರೈಲ್ವೆ ನಿಲ್ದಾಣದಲ್ಲಿ ಚಲಿಸುವ ರೈಲಿನಿಂದ ಇಳಿಯುವ ಪ್ರಯತ್ನದಲ್ಲಿ ಕೆಳಗೆ ಬಿದ್ದ 39 ವರ್ಷದ ಪ್ರಯಾಣಿಕನನ್ನು ಆರ್ ಪಿಎಫ್ ಪೊಲೀಸರು ರಕ್ಷಣೆ ಮಾಡಿದ್ದಾರೆ. 

ಮುಂಬೈ ಸಿಎಸ್‌ಎಂಟಿ-ಕೆಎಸ್‌ಆರ್ ಬೆಂಗಳೂರು ಕೋವಿಡ್-19 ವಿಶೇಷ ರೈಲು (ರೈಲು ಸಂಖ್ಯೆ 01301) ಬೆಳಿಗ್ಗೆ 6: 33 ಕ್ಕೆ ಹೊರಡುವಾಗ ನಿಲ್ದಾಣದ ಪ್ಲಾಟ್‌ಫಾರ್ಮ್ 3 ರಲ್ಲಿ ಈ ಘಟನೆ ನಡೆದಿದೆ. ಡಿ-1 ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ಪಂಜಾಬ್ ಮೂಲದ ಗುರ್ಜೀತ್ ಸಿಂಗ್, ಯಲಹಂಕದಲ್ಲಿ ಇಳಿಯಲು  ಮರೆತಿದ್ದಾನೆ. ಬಳಿಕ ರೈಲು ಚಲನೆ ಆರಂಭವಾದಾಗ ಎಚ್ಚೆತ್ತು ತರಾತುರಿಯಲ್ಲಿ ಇಳಿಯಲು ಪ್ರಯತ್ನಿಸಿದ್ದಾನೆ. ರೈಲಿನಿಂದ ನೇರವಾಗಿ ಪ್ಲಾಟ್‌ಫಾರ್ಮ್‌ಗೆ ಹಾರಲು ಪ್ರಯತ್ನಿಸಿದ್ದಾನೆ, ಈ ವೇಳೆ ಆತ ಜಾರಿಬಿದ್ದು ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಅಂತರದಲ್ಲಿ ಆತನ ಕಾಲುಗಳು ಸಿಲುಕಿದ್ದವು. ಈ ವೇಳೆ  ನಿಲ್ದಾಣದಲ್ಲಿ ಗಸ್ತು ತಿರುಗುತ್ತಿದ್ದ ಇಬ್ಬರು ರೈಲ್ವೆ ಪೊಲೀಸರಾದ, ಮಾಧವ್ ಸಿಂಗ್ ಮತ್ತು ಆಶಿಶ್ ಕುಮಾರ್ ಅವರು ಇದನ್ನು ಗಮನಿಸಿ ಕೂಡಲೇ ಕಾರ್ಯಪ್ರವೃತ್ತರಾಗಿ ಓಡಿ ಬಂದು ಗುರ್ಜೀತ್ ಸಿಂಗ್ ಅವರ ದೇಹವನ್ನು ಹಿಡಿದು ಎಳೆದಿದ್ದಾರೆ. ಈ ವೇಳೆ ಗುರ್ಜಿತ್ ಸಿಂಗ್ ಬಲಗಾಲಿಗೆ ತೀವ್ರವಾಗಿ ಪೆಟ್ಟಾಗಿದೆ. 

ತೀವ್ರವಾಗಿ ರಕ್ತಸ್ರಾವವಾಗುತ್ತಿದ್ದ ಗುರ್ಜೀತ್ ಸಿಂಗ್ ರ ಕಾಲಿಗೆ ಬಟ್ಟೆ ಕಟ್ಟಿ ಬಳಿಕ ಒಂದು ಪ್ಲಾಸ್ಟಿಕ್ ಚೀಲ ಹಾಕಿ ಅವರನ್ನು ಆಂಬ್ಯುಲೆನ್ಸ್ ಮೂಲಕ ಯಲಹಂಕಾದ ಜನರಲ್ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಗಿದೆ. ನಂತರ ಅವರನ್ನು ಕೆಸಿ ಜನರಲ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ಪೊಲೀಸರು  ಹೇಳಿದ್ದಾರೆ.

ಆರ್ ಪಿಎಫ್ ಪೊಲೀಸರ ತುರ್ತು ಕ್ರಮದಿಂದಾಗಿ ರೈಲಿನ ಕೆಳಗೆ ಸಿಲುಕಿ ಪ್ರಾಣಾಪಾಯಕ್ಕೆ ಸಿಲುಕಬಹುದಾಗಿದ್ದ ವ್ಯಕ್ತಿಯ ಪ್ರಾಣ ಉಳಿದಿದೆ.

ಪೊಲೀಸರ ಕ್ರಮಕ್ಕೆ ರೈಲ್ವೇ ಇಲಾಖೆ ಶ್ಲಾಘನೆ ವ್ಯಕ್ತಪಡಿಸಿದ್ದು, ಈ ಬಗ್ಗೆ ಮಾತನಾಡಿರುವ ಹಿರಿಯ ವಿಭಾಗೀಯ ಭದ್ರತಾ ಆಯುಕ್ತ (ಬೆಂಗಳೂರು ವಿಭಾಗ) ದೇಬಾಶ್ಮಿತಾ ಚಟ್ಟೋಪಾಧ್ಯಾಯ ಬ್ಯಾನರ್ಜಿ ಅವರು, ಪೊಲೀಸರು ಅದ್ಭುತ ಕೆಲಸ ಮಾಡಿದ್ದಾರೆ ಮತ್ತು ಆಸ್ಪತ್ರೆಯಲ್ಲಿಯೂ ಸಹ ಅವರಿಗೆ ಸಹಾಯ ಮಾಡಲು  ನೆರವಾಗಿದ್ದಾರೆ" ಎಂದು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com