ಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಮಾರ್ಗ: ಅಧಿಕಾರಿಗಳಿಂದ ಸುರಕ್ಷತಾ ಪರಿಶೀಲನೆ
ಬೆಂಗಳೂರು: ಲೋಕಾರ್ಪಣೆಗೆ ಸಿದ್ದವಾಗುತ್ತಿರುವ ಬೆಂಗಳೂರು ದಕ್ಷಿಣ ವಲಯದ ಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಮಾರ್ಗವನ್ನು ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್) ಆಗಸ್ಟ್ 11 ಮತ್ತು 12 ರಂದು ಪರಿಶೀಲಿಸಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಮುಂದಿನ ಐದು ವರ್ಷಗಳವರೆಗೆ ಮಾನ್ಯವಾಗಿರುವ ರೋಲಿಂಗ್ ಸ್ಟಾಕ್‌ಗಾಗಿ ನಿರ್ಣಾಯಕ ಪ್ರಮಾಣಪತ್ರವನ್ನು ರೈಲ್ವೇ ಸಚಿವಾಲಯದ ಅಂಗಸಂಸ್ಥೆಯಿಂದ ಪಡೆದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಎಂಆರ್ ಸಿಎಲ್ ನ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಅವರು, , "ಸಿಎಂಆರ್ಎಸ್ ತಪಾಸಣೆಯು ಎಲ್ಲಾ ನಿಯತಾಂಕಗಳ ಸಂಪೂರ್ಣ ಪರಿಶೀಲನೆ ಮತ್ತು ಬೃಹತ್ ದಾಖಲೆಗಳ ಅಧ್ಯಯನವನ್ನು ಒಳಗೊಂಡಿರುತ್ತದೆ. ಕೇಂದ್ರ ತಂಡದ ಸದಸ್ಯರು ಆಗಸ್ಟ್ 10 ರಂದು ಕೆಲವು ತಪಾಸಣೆ ನಡೆಸಲು ಆಗಮಿಸುತ್ತಾರೆ ಎಂದು ಹೇಳಿದರು.
ಆದಾಗ್ಯೂ, ಹೊಸ ಮಾರ್ಗವನ್ನು ಲೋಕಾರ್ಪಣೆ ಮಾಡಲು ಅವರು ಯಾವುದೇ ದಿನಾಂಕವನ್ನು ನೀಡಲು ನಿರಾಕರಿಸಿದರು. ನಾವು ಮೊದಲು ಸಿಎಂಆರ್ಎಸ್ ನಿಂದ ಗ್ರೀನ್ ಸಿಗ್ನಲ್ ಪಡೆಯಬೇಕು. ನಂತರ ದಿನಾಂಕವನ್ನು ಅಂತಿಮಗೊಳಿಸುತ್ತೇವೆ ಎಂದು ಹೇಳಿದರು.
ಪರ್ಪಲ್ ಲೈನ್‌ನ ವಿಸ್ತರಣೆಯಾದ ಈ 7.53 ಕಿಮೀ ಮಾರ್ಗವು ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನ ಭಾರತಿ, ಪಟ್ಟಣಗೆರೆ, ಮೈಲಸಂದ್ರ ಮತ್ತು ಕೆಂಗೇರಿ ಬಸ್ ನಿಲ್ದಾಣಗಳ ಆರು ಎತ್ತರದ ನಿಲ್ದಾಣಗಳನ್ನು ಹೊಂದಿದೆ.
ಬಿಎಂಆರ್‌ಸಿಎಲ್ ತನ್ನ ರೋಲಿಂಗ್ ಸ್ಟಾಕ್‌ಗಾಗಿ ರೈಲ್ವೆ ಸಚಿವಾಲಯದ ಲಖನೌ ಮೂಲದ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (ಆರ್‌ಡಿಎಸ್‌ಒ) ಯಿಂದ ಪ್ರಮಾಣಪತ್ರವನ್ನು ಪಡೆದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ