
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವಸು ಸಚಿವ ಸಂಪುಟ ರಚಿಸಿದ ಬೆನ್ನಲ್ಲೇ ನೀಡಿರುವ ಟಾಸ್ಕ್ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲೆಗಳಿಗೆ ಭೇಟಿ ನೀಡಿದ ನೂತನ ಸಚಿವರು ಅಲ್ಲಿನ ನೆರೆ ಹಾಗೂ ಕೋವಿಡ್ ಪರಿಸ್ಥಿತಿಗಳ ಕುರಿತು ಪರಿಶೀಲನೆ ನಡೆಸಿದರು.
ಕೆಲ ಸಚಿವರು ನೆರೆಯಿಂದ ಹಾನಿಗೊಳಗಾದ ಸ್ಥಳಗಳಿಗೆ ತೆರಳಿ ಖುದ್ದು ಪರಿಶೀಲನೆ ನಡೆಸಿದರೆ, ಮತ್ತೆ ಕೆಲವರು ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು. ಇದೇ ವೇಳೆ ಕೋವಿಡ್ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಪಡೆದು ಸೂಕ್ತ ಕ್ರಮಕೈಗೊಳ್ಳಲು ಸಲಹೆ ಹಾಗೂ ಸೂಚನೆಗಳನ್ನು ನೀಡಿದರು.
ಬಾಗಲಕೋಟೆಯಲ್ಲಿ ಸಚಿವ ಉಮೇಶ್ ಕತ್ತಿ, ಹಾವೇರಿಯಲ್ಲಿ ಬಿ.ಸಿ.ಪಾಟೀಲ್, ಹಾಸನದಲ್ಲಿ ಗೋಪಾಲಯ್ಯ, ಉತ್ತರ ಕನ್ನಡದಲ್ಲಿ ಶಿವರಾಮ್ ಹೆಬ್ಬಾರಿ, ಶಿವಮೊಗ್ಗದ ಕೆ.ಎಸ್.ಈಶ್ವರಪ್ಪ ಮತ್ತು ಅರಗ ಜ್ಞಾನೇಂದ್ರ ಜಂಟಿಯಾಗಿ ನೆರೆ ಪ್ರದೇಶಗಳಿಗೆ ಭೇಟಿ ನೀಡಿದರು. ಉಳಿದಂತೆ ಹೆಚ್ಚಿನವರು ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿದ್ದು, ಶನಿವಾರ ನೆರೆ ಪ್ರದೇಶಗಳಿಗೆ ಭೇಟಿ ನೀಡುವ ಸಾಧ್ಯತೆಗಳಿವೆ.
ಪ್ರವಾಹದಿಂದ ಅತೀ ಹೆಚ್ಚು ಹಾನಿಗೀಡಾಗಿರುವ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಸಚಿವ ಶಿವರಾಮ ಹೆಬ್ಬಾರ್ ಅಧಿಕಾರಿಗಳ ಸಭೆ ನಡೆಸಿ ತಾಲೂಕಿನಲ್ಲಿ ಪ್ರವಾಹದಿಂದ ಆಗಿರುವ ಅನಾಹುತ, ಹಾನಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಕೆಲ ಪ್ರವಾಹ ಪೀಡಿತ ಪ್ರದೇಶಗಳಿಗೂ ಭೇಟಿ ನೀಡಿದರು. ಶನಿವಾರ ಅವರು ಕಾರವಾರದಲ್ಲಿ ಕೋವಿಡ್ ನಿಯಂತ್ರಣ ಮತ್ತು ಪ್ರವಾಹ ಹಾನಿ ಬಗ್ಗೆ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಲಿದ್ದಾರೆಂದು ತಿಳಿದುಬಂದಿದೆ.
ಇನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಸಚಿವರಾದ ಕೆ.ಎಸ್.ಈಶ್ವರಪ್ಪ ಹಾಗೂ ಅರಗ ಜ್ಞಾನೇಂದ್ರ ಅವರು ಅತಿವೃಷ್ಟಿಯಿಂದ ಹಾನಿಗೀಡಾಗಿರುವ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಹೋಬಳಿಯ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ ಅವರು, ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿ ಪ್ರಮಾಣ ಸಮೀಕ್ಷೆ ನಡೆಸಲಾಗುತ್ತಿದ್ದು, ಪ್ರಾಥಮಿಕವಾಗಿ ರೂ.418 ಕೋಟಿ ಹಾನಿ ಅಂದಾಜಿಸಲಾಗಿದೆ ಎಂದು ಹೇಳಿದರು.
ಅರಗ ಜ್ಞಾನೇಂದ್ರ ಅವರು ಮಾತನಾಡಿ, ಸಮೀಕ್ಷೆಯು ನಾಲ್ಕು ದಿನಗಳಲ್ಲಿ ಪೂರ್ಣಗೊಳ್ಳಳಿದೆ. ವರದಿ ಸಿದ್ಧಗೊಳ್ಳುತ್ತಿದ್ದಂತೆಯೇ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ನಾಲ್ವರು ಸಾವನ್ನಪ್ಪಿದ್ದಾರೆ. 4609 ಹೆಕ್ಟೇರು ಸಣ್ಣ ಕೃಷಿ ಭೂಮಿ, 1132 ಹೆಕ್ಟೇರ್ ತೋಟಗಾರಿಕೆ ಭೂಮಿ, 240 ಹೆಕ್ಟೇರ್ ಇತರೆ ಕೃಷಿ ಭೂಮಿ, 27 ಜಾನುವಾರುಗಳು, 126 ಮನೆಗಳು ಸಂಪೂರ್ಣ ಹಾನಿಯಾಗಿವೆ, 478 ಹಾನಿಯಾಗಿರುವ ಮನೆಗಳು, 540 ಭಾಗಶಃ ಹಾನಿಯಾಗಿರುವ ಮನೆಗಳು, 56 ಕಿಮೀ ರಾಜ್ಯ ಹೆದ್ದಾರಿ 138 ಕಿಮೀ ಜಿಲ್ಲಾ ಮುಖ್ಯ ರಸ್ತೆ, 1243 ಕಿಮೀ ಗ್ರಾಮೀಣ ರಸ್ತೆ, 168 ಕಿಮೀ ನಗರ ರಸ್ತೆಗಳು, 196 ಸೇತುವೆಗಳು, 10 ಕಾಳಜಿ ಕೇಂದ್ರಗಳಲ್ಲಿ 640 ಜನರಿಗೆ ಆಶ್ರಯ ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದರಂತೆ ಸಚಿವ ಮುರುಗೇಶ್ ನಿರಾಣಿಯವರೂ ಕೂಡ ವಿಕಾಸಸೌಧದಿಂದ ವಿಡಿಯೋ ಕಾನ್ಫೆರೆನ್ಸ್ ನಡೆಸಿದ ಕಲಬುರಗಿಯ ಪರಿಸ್ಥಿತಿ ಪರಿಶೀಲನೆ ನಡೆಸಿದರು. ಈ ವೇಳೆ ಆಗಸ್ಟ್ ಅಂತ್ಯದೊಳಗೆ ಜಿಲ್ಲೆಯ ಎಲ್ಲಾ ಭಾಗದ ಹಾನಿಯಾದ ಪ್ರದೇಶಗಳ ಸಮೀಕ್ಷೆ ಮಾಡಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಇದಕ್ಕೆ ಉತ್ತರಿಸಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಿತೇಂದ್ರನಾಥ ಸೂಗೂರು ಅವರು, ಮಳೆಗೆ ಜಿಲ್ಲೆಯಲ್ಲಿ ಒಟ್ಟು 27 ಸಾವಿರ ಹೆಕ್ಟೇರ್ ಪ್ರದೇಶ ಹಾನಿಯಾಗಿದ್ದು, ಅದರಲ್ಲಿ ತೊಗರಿ 15 ಸಾವಿರ ಹೆಕ್ಟೇರ್, ಹೆಸರು 7 ಸಾವಿರ ಹೆಕ್ಟೇರ್, ಉದ್ದು 2 ಸಾವಿರ ಹೆಕ್ಟೇರ್, ಸೋಯಾಬಿನ್ 103 ಹೆಕ್ಟೇರ್, ಹತ್ತಿ 1345 ಹೆಕ್ಟೇರ್ ಹಾಗೂ ಸೂರ್ಯಕಾಂತಿ 22 ಹೆಕ್ಟೇರ್ ಪ್ರದೇಶಗಳಲ್ಲಿ ಮಳೆಗೆ ಹಾನಿಯಾಗಿದೆ. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ಒಟ್ಟು 76 ಸಾವಿರ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ವರ್ಷ 20 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ. ಈ ವರ್ಷ ಸಮೀಕ್ಷೆ ಬಳಿಕ ಪರಿಹಾರ ನೀಡಲಾಗುವುದು ಎಂದು ವಿವರಿಸಿದರು
Advertisement