ಮಂಗಳೂರು: ಮಾಜಿ ಶಾಸಕರ ಪುತ್ರನ ಮನೆಗೆ ಮುತ್ತಿಗೆ ಯತ್ನ; ವಿಎಚ್ ಪಿ, ಭಜರಂಗದಳದ ಕಾರ್ಯಕರ್ತರ ಬಂಧನ

ಮಾಜಿ ಶಾಸಕ ಇದಿನಬ್ಬ ಅವರ ಮಗನ ಮನೆಗೆ ವಿಶ್ವ ಹಿಂದು ಪರಿಷತ್ ಹಾಗು ಭಜರಂಗದಳದ ಮುಖಂಡರು ಮುತ್ತಿಗೆ ಹಾಕಲು ಯತ್ನಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಹಲವರನ್ನು ಬಂಧಿಸಿದ್ದಾರೆ.
ಕಾರ್ಯಕರ್ತರ ಬಂಧನ
ಕಾರ್ಯಕರ್ತರ ಬಂಧನ
Updated on

ಮಂಗಳೂರು: ಮಾಜಿ ಶಾಸಕ ಇದಿನಬ್ಬ ಅವರ ಮಗನ ಮನೆಗೆ ವಿಶ್ವ ಹಿಂದು ಪರಿಷತ್ ಹಾಗು ಭಜರಂಗದಳದ ಮುಖಂಡರು ಮುತ್ತಿಗೆ ಹಾಕಲು ಯತ್ನಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಹಲವರನ್ನು ಬಂಧಿಸಿದ್ದಾರೆ.

ಮಂಗಳೂರಿನ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ ಇರುವ ಇದಿನಬ್ಬ ಪುತ್ರ ಬಿಎಂ ಭಾಷಾ ಮನೆಗೆ  ವಿಶ್ವ ಹಿಂದು ಪರಿಷತ್ ಹಾಗು ಭಜರಂಗದಳದ ಮುಖಂಡರ ಮುತ್ತಿಗೆ ಹಾಕಲು ಯತ್ನಿಸಿದ್ದು, ಈ ವೇಳೆ ಪೊಲೀಸರು 14 ಮಂದಿ ಕಾರ್ಯತರ್ತರನ್ನು ಬಂಧಿಸಿದ್ದಾರೆ. 

ಇದಿನಬ್ಬ ಮಗ ಭಾಷಾ ವಿರುದ್ಧ ಲವ್ ಜಿಹಾದ್ ಆರೋಪ ಮಾಡಿದ ಕಾರ್ಯಕರ್ತರು ಭಾಷಾರ ಸೊಸೆ ಜೊತೆ ಮಾತನಾಡಲು ಹೊರಗೆ ಕಳುಹಿಸಿ ಎಂದು ಪಟ್ಟು ಹಿಡಿದಿದ್ದು, ಈ ವೇಳೆ ಮನೆಯ ಮುಂಭಾಗ ವಿಎಚ್ ಪಿ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ತಳ್ಳಾಟ ನಡೆದಿದೆ.  ಪ್ರತಿಭಟನೆ ನಡುವೆ ಮನೆಗೆ ನುಗ್ಗುವ ಪ್ರಯತ್ನ ಮಾಡಿದ ಕಾರ್ಯಕರ್ತರು, ಇದ್ದಿನಬ್ಬರ ಮೊಮ್ಮಗ ಮಡಿಕೇರಿ ಮೂಲದ ಹಿಂದೂ ಯುವತಿಯನ್ನು ಲವ್ ಜಿಹಾದ್ ಮಾಡಿದ್ದಾರೆಂದು ಆರೋಪಿಸಿದರು. 

ಬಂಟ ಸಮುದಾಯದ ಯುವತಿಯನ್ನು ಇಸ್ಲಾಂಗೆ ಮತಾಂತರಿಸಿ ಭಯೋತ್ಪಾದನಾ ಚಟುವಟಿಕೆಗೆ ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ. ಜನಜಾಗೃತಿಗಾಗಿ ಉಳ್ಳಾಲದ ರಸ್ತೆಗಳಲ್ಲಿ ಪ್ಲೇ ಕಾರ್ಡ್ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. 

ಮೂಲಗಳ ಪ್ರಕಾರ ಮಡಿಕೇರಿ ಮೂಲದ ಬಂಟ ಸಮುದಾಯದ ಯುವತಿ ಮರಿಯಮ್ ಆಲಿಯಾಸ್ ದೀಪ್ತಿ ಮಾರ್ಲ ಎಂಬಾಕೆಯನ್ನು ಲವ್ ಜಿಹಾದ್ ನಡೆಸಿ ಅನಾಸ್ ನಿಂದ ದೀಪ್ತಿ ವಿವಾಹ ಮಾಡಲಾಗಿದೆ.  ದೀಪ್ತಿ ಮಾರ್ಲ ಸೇರಿ ಇಡೀ ಕುಟುಂಬದ ವಿರುದ್ಧ ತನಿಖೆ ನಡೆಸಬೇಕು ಎಂದು ವಿಎಚ್ ಪಿ ಆಗ್ರಹಿಸಿದೆ.  

ಏನಿದು ಘಟನೆ?
ಮಂಗಳೂರು ಬಳಿಯ ಉಳ್ಳಾಲದ ಮಾಜಿ ಶಾಸಕ ದಿ.ಬಿ.ಎಂ.ಇದಿನಬ್ಬ ಅವರ ಮೊಮ್ಮಗ ಅಮ್ಮರ್‌ ಅಬ್ದುಲ್‌ ರಹಮಾನ್‌ ಸೇರಿದಂತೆ ನಾಲ್ವರನ್ನು ಉಗ್ರರಿಗೆ  ನೆರವು ನೀಡಿದ ಆರೋಪದ ಮೇರೆಗೆ ಬಂಧಿಸಲಾಗಿತ್ತು. ಐಸಿಸ್‌ ಸೇರಿದಂತೆ ಅನೇಕ ಉಗ್ರ ಸಂಘಟನೆಗಳ ನಂಟು ಹೊಂದಿರುವ ಅನುಮಾನದ ಮೇರೆಗೆ ಇವರನ್ನು ಸೆರೆ ಹಿಡಿಯಲಾಗಿದ್ದು, ಬಂಧಿತರಿಂದ ಮೊಬೈಲ್‌, ಲ್ಯಾಪ್‌ಟಾಪ್‌ ಸೇರಿದಂತೆ ಅನೇಕ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇವರೆಲ್ಲರೂ ಸಿರಿಯಾ ಮೂಲದ ಇಸ್ಲಾಮಿಕ್‌ ಸ್ಟೇಟ್‌(ಐಸಿಸ್‌) ಉಗ್ರ ಸಂಘಟನೆಗೆ ಯುವಕರ ನೇಮಕಾತಿ ನಡೆಸುತ್ತಿದ್ದರು ಎನ್ನಲಾಗಿದೆ. ಬಂಧಿತರಿಗೆ ಐಸಿಸ್‌, ಜಮ್ಮು-ಕಾಶ್ಮೀರದ ಉಗ್ರ ಸಂಘಟನೆ ಜೊತೆಗೆ ಸಂಪರ್ಕ ಇತ್ತು. ಮಾತ್ರವಲ್ಲದೆ ಕರ್ನಾಟಕ ಮತ್ತು ಕೇರಳಗಳಲ್ಲಿ ಕೆಲ ಪ್ರಮುಖರ ಕೊಲೆಗೆ ಸಂಚು ರೂಪಿಸಿದ್ದ ಐಸಿಸ್‌ನೊಂದಿಗೆ ನಂಟು ಹೊಂದಿದ್ದ ಇರುವ ಕೇರಳದ ಮಹಮ್ಮದ್‌ ಅಮೀನ್‌ ಜೊತೆಗೆ ಸಂಪರ್ಕ ಇತ್ತು. ಜೊತೆಗೆ ಜಿಹಾದಿ ಕೃತ್ಯಗಳಿಗೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವುದರೊಂದಿಗೆ ಹಣಕಾಸು ಸಂಗ್ರಹವನ್ನೂ ಮಾಡುತ್ತಿದ್ದರು ಎಂಬ ಮಾಹಿತಿ ಲಭಿಸಿರುವ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com