ಮಧ್ಯರಾತ್ರಿ ಬಂದ ಸ್ವಾತಂತ್ರ್ಯವನ್ನು ಹಗಲಿರುಳೂ ಕಾಯೋಣ, ವರ್ಷವಿಡೀ ಆಚರಿಸೋಣ: ಸಿಎಂ ಬಸವರಾಜ ಬೊಮ್ಮಾಯಿ

ಮಧ್ಯರಾತ್ರಿ ಬಂದ ಸ್ವಾತಂತ್ರ್ಯವನ್ನು ಹಗಲಿರುಳೂ ಕಾಯೋಣ, ವರ್ಷವಿಡೀ ಆಚರಿಸೋಣ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ
ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಮಧ್ಯರಾತ್ರಿ ಬಂದ ಸ್ವಾತಂತ್ರ್ಯವನ್ನು ಹಗಲಿರುಳೂ ಕಾಯೋಣ, ವರ್ಷವಿಡೀ ಆಚರಿಸೋಣ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಧಾನಸೌಧದ ವೈಭವೋಪೇತ ಮೆಟ್ಟಿಲುಗಳ ಮೇಲೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಭಾರತದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಧ್ಯರಾತ್ರಿ ಬಂದ  ಸ್ವಾತಂತ್ರ್ಯವನ್ನು ಹಗಲಿರುಳೂ ಕಾಯೋಣ.. ಭಾರತ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವವನ್ನು ಇಡೀ ವರ್ಷ ಆಚರಿಸೋಣ ಎಂದು ಕರೆ ನೀಡಿದರು.

‘ಸ್ವಾತಂತ್ರ್ಯ ನನ್ನ ಜನ್ಮಸಿದ್ಧ ಹಕ್ಕು ಎಂಬ ಗೋಪಾಲಕೃಷ್ಣ ಗೋಖಲೆ ಅವರ ಘೋಷಣೆಯೊಂದಿಗೆ ಸ್ವಾತಂತ್ರ್ಯ ಹೋರಾಟ ಹೊಸ ದಿಕ್ಕಿನತ್ತ ಸಾಗಿತು. ಭಗತ್‌ ಸಿಂಗ್‌ ಅವರ ಬಲಿದಾನ, ವೀರ ಸಾವರ್ಕರ್‌ ಅವರಂತಹರ ತ್ಯಾಗದ ಮೂಲಕ ಮುನ್ನಡೆದುದು ಸ್ಮರಣಾರ್ಹ. ಸ್ವಾತಂತ್ರ್ಯ ಚಳುವಳಿಯ ಸಾತ್ವಿಕ ಹೋರಾಟಕ್ಕೆ  ಸತ್ಯದ ಮೆರಗು ನೀಡಿದವರು ಮಹಾತ್ಮ ಗಾಂಧಿ, ಇವರೆಲ್ಲರನ್ನು ನಾವು ಸದಾಕಾಲ ಸ್ಮರಿಸಬೇಕು. ಸಾತ್ವಿಕ ಸತ್ಯವಾದ ಅಸ್ತ್ರವನ್ನ ಕೊಟ್ಟಿದ್ದು ಮಹಾತ್ಮಾ ಗಾಂಧೀಜಿ. ಇಂದಿಗೆ ನಾವೆಲ್ಲ ಸ್ವಾತಂತ್ರ್ಯ ಪಡೆದು 75 ವರ್ಷ ಕಳೆದಿದ್ದೇವೆ. ಹಿಂದಿನ ದಿನಗಳನ್ನು ಹಿಂತಿರುಗಿ ನೋಡಬೇಕಾಗಿದೆ, ಮುಂದಿನ ನವ ಕರ್ನಾಟಕ  ಕಲ್ಪನೆ ಬಿತ್ತಬೇಕಾಗಿದೆ. ನವ ಕರ್ನಾಟಕ ನವ ಭಾರತದ ಚೈತನ್ಯ ತುಂಬಿ ದೇಶ ಕಟ್ಟುವ ಕೆಲಸ ಮಾಡಬೇಕಾಗಿದೆ. ದೇಶ ವಿಭಜನೆ ಆಗಿದ್ದು ನೋವಿನ ಸಂಗತಿ. ಅಂದು ಸಾವಿರಾರು ಜನ ಸಂಕಷ್ಟಕ್ಕೊಳಗಾದರು. ಅಂದಿನ ದಿನಗಳನ್ನು ಮತ್ತೆ ನೆನಪಿಸಿಕೊಳ್ಳಬೇಕು ಎಂದು ಹೇಳಿದರು.

ಅಂತೆಯೇ ಮಧ್ಯರಾತ್ರಿ ಬಂದ ಸ್ವಾತಂತ್ರ್ಯವನ್ನು ನಾವು ಹಗಲಿರಳು ಕಾಯಬೇಕು. ವಿಧಾನಸೌಧದ ಮೆಟ್ಟಿಲುಗಳು ನವಭಾರತದ ನಿರ್ಮಾಣಕ್ಕೆ ಸಾಕ್ಷಿಯಾಗಿವೆ. ಮಹಾತ್ಮ ಗಾಂಧಿಯವರು ಸ್ವಾತಂತ್ರ್ಯ ಚಳವಳಿಯಲ್ಲಿ ಸಾತ್ವಿಕ ಹೋರಾಟಕ್ಕೆ ಸತ್ಯದ ಮೆರುಗು ನೀಡಿದರು. ಅವರೆಲ್ಲರನ್ನೂ ನಾವು ಸದಾ ಕಾಲ  ಸ್ಮರಿಸಬೇಕು. ವಿಧಾನಸೌಧದ ಈ ಮೆಟ್ಟಿಲುಗಳು ನವ ಭಾರತದ ನಿರ್ಮಾಣಕ್ಕೆ ಸಾಕ್ಷಿಯಾಗಿವೆ ಎಂದು ಬೊಮ್ಮಾಯಿ ಹೇಳಿದರು.

ನಾಟಕ ಪ್ರದರ್ಶನ
ಇದೇ ವೇಳೆ ಧಾರವಾಡ ರಂಗಾಯಣದ ಕಲಾವಿದರು ‘ದಂಡಿಯಾತ್ರೆ’ ಮತ್ತು ‘ವೀರ ರಾಣಿ ಕಿತ್ತೂರು ಚೆನ್ನಮ್ಮ’ ಕಿರು ನಾಟಕಗಳನ್ನು ಪ್ರಸ್ತುತಪಡಿಸಿದರು. ಶಿವಮೊಗ್ಗ ರಂಗಾಯಣದ ಕಲಾವಿದರು ‘ಏಸೂರು ಕೊಟ್ಟರೂ ಈಸೂರು ಬಿಡೆವು’ ಮತ್ತು ‘ವಿದುರಾಶ್ವತ್ಥ’ ನಾಟಕಗಳನ್ನು ಪ್ರದರ್ಶಿಸಿದರು. ರಾಜ್ಯದ ವಿವಿಧ ಜಿಲ್ಲೆಗಳ  ಕಲಾವಿದರು ವೀರಗಾಸೆ, ಡೊಳ್ಳು ಕುಣಿತ, ಪೂಜಾ ಕುಣಿತ, ಕೀಲು ಕುದರೆ ಮತ್ತಿತರ ಜಾನಪದ ನೃತ್ಯಗಳನ್ನು ಪ್ರಸ್ತುತಪಡಿಸಿದರು.

ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಆರ್‌. ವಿಶ್ವನಾಥ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ವಂದಿತಾ ಶರ್ಮ, ರಜನೀಶ್‌ ಗೋಯಲ್‌, ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಪ್ರಧಾನ  ಕಾರ್ಯದರ್ಶಿ ಎನ್‌. ಮಂಜುನಾಥ್‌ ಪ್ರಸಾದ್, ವಾರ್ತಾ  ಇಲಾಖೆ ಆಯುಕ್ತ ಡಾ.ಪಿ.ಎಸ್‌. ಹರ್ಷ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com