ಕರ್ನಾಟಕದ ನಗರಗಳನ್ನು ಮತ್ತಷ್ಟು ವಾಸಯೋಗ್ಯವಾಗಿಸಿ: ಅಧಿಕಾರಿಗಳಿಗೆ ಭೈರತಿ ಬಸವರಾಜ್ ಸೂಚನೆ

ಕರ್ನಾಟಕದ ನಗರಗಳನ್ನು ಮತ್ತಷ್ಟು ವಾಸಯೋಗ್ಯವಾಗಿಸುವಂತೆ ಅಧಿಕಾರಿಗಳಿಗೆ ಸಚಿವ ಭೈರತಿ ಬಸವರಾಜ್ ಅವರು ಸೋಮವಾರ ಸೂಚನೆ ನೀಡಿದ್ದಾರೆ. 
ಭೈರತಿ ಬಸವರಾಜ್
ಭೈರತಿ ಬಸವರಾಜ್

ಬೆಂಗಳೂರು: ಕರ್ನಾಟಕದ ನಗರಗಳನ್ನು ಮತ್ತಷ್ಟು ವಾಸಯೋಗ್ಯವಾಗಿಸುವಂತೆ ಅಧಿಕಾರಿಗಳಿಗೆ ಸಚಿವ ಭೈರತಿ ಬಸವರಾಜ್ ಅವರು ಸೋಮವಾರ ಸೂಚನೆ ನೀಡಿದ್ದಾರೆ. 

ರಾಜ್ಯ ಸಚಿವ ಸಂಪುಟದಲ್ಲಿ ಮತ್ತೆ ನಗರಾಭಿವೃದ್ಧಿ ಇಲಾಖೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸರಣಿ ಸಭೆ ನಡೆಸಿದ ಅವರು, ಎಲ್ಲಾ ಮಹಾನಗರ ಪಾಲಿಕೆ ಪ್ರದೇಶದ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದರು. 

ಬೆಂಗಳೂರು ನಗರ ಹೊರತುಪಡಿಸಿ ರಾಜ್ಯದ 10 ನಗರಗಳಲ್ಲಿ ಪ್ರತಿ ದಿನ ಒಂದು ಗಂಟೆಗಳ ಕಾಲ ಆಯುಕ್ತರು ಸಂಚರಿಸುವ ಮೂಲಕ ಸ್ವಚ್ಚತಾ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಹೇಳಿದರು. 

ನಗರ ಕೇಂದ್ರಗಳಲ್ಲಿ ಸ್ವಚ್ಛತೆ ಕುರಿತು ನಿರಂತರ ದೂರುಗಳು ಬರುತ್ತಿವೆ. ಪ್ರಮುಖವಾಗಿ ಘನತ್ಯಾಜ್ಯದ ಬಗ್ಗೆ ದೂರುಗಳು ಬರುತ್ತಿವೆ. ಈ ಸಮಸ್ಯೆಗಳನ್ನು ವ್ಯವಸ್ಥಿತವಾಗಿ ಪರಿಹರಿಸುವ ಅಗತ್ಯವಿದೆ. ಇದು ನಿರಂತರ ಕಾರ್ಯವಾಗಬೇಕು. 

ಈ ನಗರಗಳಲ್ಲಿ ರಸ್ತೆ, ಪಾದಚಾರಿ ಮಾರ್ಗ, ಬೀದಿ ದೀಪಗಳು ಸಮಸ್ಯೆ ಸೇರಿದಂತೆ ಹಲವಾರು ಮೂಲಸೌಕರ್ಯಗಳ ಸಮಸ್ಯೆ ಎದುರಾಗಿದೆ. ಈ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು. ಸಾರ್ವಜನಿಕರಿಂದ ಬರುವ ಕುಂದುಕೊರತೆಗಳನ್ನು ನಿವಾರಿಸಲು ಅಧಿಕಾರಿಗಳು ಮುಂದಾಗಬೇಕು. ಸ್ಥಳೀಯ ಸಮಸ್ಯೆಗಳು ವಿಧಾನಸೌಧದ ಸಚಿವರ ಕಚೇರಿಯವರೆಗೆ ಬರದ ಹಾಗೆ ಪಾಲಿಕೆ ಆಯುಕ್ತರು ಸ್ಥಳೀಯ ಮಟ್ಟದಲ್ಲಿ ಅದನ್ನು ಪರಿಹರಿಸಬೇಕು. ಸಂಬಂಧಪಟ್ಟ ಅಧಿಕಾರಿ ವರ್ಗದವರು ಸಾರ್ವಜನಿಕರಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಸ್ಪಂದಿಸದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ತಾಕೀತು ಮಾಡಿದರು.

ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಅನುಷ್ಠಾನಕ್ಕೆ ಈಗಾಗಲೇ ಸರ್ಕಾರದ ಅನುಮೋದನೆ ದೊರೆತಿದ್ದು, ಆದಷ್ಟು ಬೇಗ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಯೋಜನೆಯನ್ನು ಕಾಲ ಮಿತಿಯಲ್ಲಿ ಪೂರ್ಣಗೊಳಿಸಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಖಾಸಗಿ ಸ್ವತ್ತುಗಳ ಅಸ್ತಿ ತೆರಿಗೆಯನ್ನು ಸರಿಯಾಗಿ ಸಂದಾಯ ಆಗುವ ರೀತಿಯಲ್ಲಿ ನೋಡಿಕೊಳ್ಳಬೇಕು. ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ಜಾರಿ ಮಾಡುವ ಮೂಲಕ ವಸೂಲಿಗೆ ಮುಂದಾಗಬೇಕು. ಯಾವುದೇ ರೀತಿಯ ಒತ್ತಡಕ್ಕೆ ಮಣಿಯಬಾರದು ಎಂದು ಸೂಚಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com