ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೋವಿಡ್-19: ನಗರದಲ್ಲಿ ಕಳೆದ 40 ದಿನಗಳಿಂದ ದೈನಂದಿನ ಪಾಸಿಟಿವಿಟಿ ದರ ಶೇ.1ಕ್ಕಿಂತ ಕೆಳಗೆ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಅಬ್ಬರ ಇಳಿಕೆಯಾಗಿದ್ದು, ಕಳೆದ 40 ದಿನಗಳಿಂದ ದೈನಂದಿನ ಪಾಸಿಟಿವಿಟಿ ದರ ಶೇ.1ಕ್ಕಿಂತ ಕಡಿಮೆಯೇ ಇರುವುದು ಕಂಡು ಬಂದಿದೆ. 
Published on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಅಬ್ಬರ ಇಳಿಕೆಯಾಗಿದ್ದು, ಕಳೆದ 40 ದಿನಗಳಿಂದ ದೈನಂದಿನ ಪಾಸಿಟಿವಿಟಿ ದರ ಶೇ.1ಕ್ಕಿಂತ ಕಡಿಮೆಯೇ ಇರುವುದು ಕಂಡು ಬಂದಿದೆ. 

ಬಿಬಿಎಂಪಿ ಮಾಹಿತಿ ನೀಡಿರುವ ಪ್ರಕಾರ ಜುಲೈ 12 ರಿಂದ ಆಗಸ್ಟ್ 21 ರವರೆಗೆ, ನಗರದ ಪಾಸಿಟಿವಿಟಿ ದರ ಶೇ.1ಕ್ಕಿಂತ ಕಡಿಮೆ ಇದೆ ಎಂದು ತಿಳಿಸಿದೆ. 

ಜುಲೈ 12 ರಂದು, ಪಾಸಿಟಿವಿಟಿ ದರ ಶೇಕಡಾ 0.62 ರಷ್ಟಿತ್ತು ಮತ್ತು ಜುಲೈ 18 ರಂದು ಶೇಕಡಾ 0.55 ರಷ್ಟು ಕುಸಿತ ಕಂಡಿತ್ತು. ಜುಲೈ 24ರಂದು ಅತ್ಯಂತ ಕಡಿಮೆ ಶೇ.0.27 ಶೇಕಡ ಪಾಸಿಟಿವಿಟಿ ದರ ಕಂಡು ಬಂದಿತ್ತು ಎಂದು ಮಾಹಿತಿ ನೀಡಿದೆ. 

ಇನ್ನು ವಲಯವಾರು ಪಾಸಿಟಿವಿಟಿ ದರದತ್ತ ಗಮನಹರಿಸಿದರೆ, ಕಳೆದ ವಾರ ಮಹದೇವಪುರದಲ್ಲಿ ಶೇ.0.63, ಬೊಮ್ಮನಹಳ್ಳಿಯಲ್ಲಿ ಶೇ.0.59, ರಾಜರಾಜೇಶ್ವರಿ ನಗರ ಶೇ.0.50, ಯಲಹಂಕ ಶೇ.0.45, ದಕ್ಷಿಣ ಮತ್ತು ಪೂರ್ವ ವಲಯದಲ್ಲಿ ಶೇ. 0.42 ಮತ್ತು 0.40 ಶೇಕಡಾ ಮತ್ತು ಪಶ್ಚಿಮ ಮತ್ತು ದಾಸರಹಳ್ಳಿ ವಲಯಗಳಲ್ಲಿ ತಲಾ ಶೇ.0.24 ರಷ್ಟು ಪಾಸಿಟಿವಿಟಿ ದರ ಕಂಡು ಬಂದಿದೆ.

ಬೆಂಗಳೂರಿನ ಒಂದು ದಿನದಲ್ಲಿ 50,000-60,000 ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಆಗಸ್ಟ್ 20 ರವರೆಗೆ, ನಗರದಲ್ಲಿ 1,79,29,475 ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗಿದೆ.

ನಗರದಲ್ಲಿ ಹೆಚ್ಚಿನ ಸಂಖ್ಯೆಯ ಜನರಿಗೆ ಲಸಿಕೆ ನೀಡಿರುವುದು ಹಾಗೂ ಪರೀಕ್ಷೆ ನಡೆಸಿರುವುದರಿಂದ ಪಾಸಿಟಿವಿಟಿ ದರ ಕಡಿಮೆಯಾಗಲು ಕಾರಣವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. 

ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿಯ ನಿರ್ದೇಶಕ ಡಾ ಸಿ ಎನ್ ಮಂಜುನಾಥ್ ಅವರು ಮಾತನಾಡಿ, ರಾಜ್ಯದ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ ಸುಮಾರು 1500 ಆಗಿದೆ. ಇದು ಸ್ಥಿರವಾಗಿದೆ ಎಂದು ಹೇಳಿದ್ದಾರೆ. 

ದಕ್ಷಿಣ ಕನ್ನಡ, ಉಡುಪಿ, ಮೈಸೂರು ಮುಂತಾದ ಜಿಲ್ಲೆಗಳಲ್ಲಿ ಸೋಂಕು ಹೆಚ್ಚಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಆದರೆ, ಬೆಂಗಳೂರಿನಲ್ಲಿ ಕಡಿಮೆಯಾಗಿದೆ. ಇದು ಸಹಜ ಪ್ರಕ್ರಿಯೆಯಾಗಿದೆ. ಸೋಂಕು ಒಮ್ಮೆಲೆ ಉತ್ತುಂಗಕ್ಕೇರಿ ನಾಲ್ಕು ತಿಂಗಳ ಬಳಿಕ ಇಳಿಕೆಯಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಕಳೆದ ಮೇ ತಿಂಗಳಿನಲ್ಲಿ ನಗರದಲ್ಲಿ ಸೋಂಕು ಹೆಚ್ಚಾಗಿದ್ದನ್ನು ನಾವು ನೋಡಿದ್ದೆವು. ಇದೀಗ ಇಳಿಕೆಯಾಗಿದೆ. ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿನ ಪರಿಸ್ಥಿತಿಯನ್ನು ನಾವು ನೋಡಬೇಕಿದೆ ಎಂದಿದ್ದಾರೆ. 

ನೆರೆ ರಾಜ್ಯ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಸೋಂಕು ಹೆಚ್ಚಾಗಿರುವುದು ಆತಂಕವನ್ನು ಸೃಷ್ಟಸಿತ್ತಿದೆ. ಈ ಎರಡೂ ರಾಜ್ಯಗಳು ನಮ್ಮ ಜಿಲ್ಲೆಗಳ ಗಡಿಯಲ್ಲಿದೆ. ರಾಜ್ಯ ಸರ್ಕಾರ ಈಗಾಗಲೇ ಗಡಿಯಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಬೆಂಗಳೂರಿನಲ್ಲಿ ಲಸಿಕೆ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಪರೀಕ್ಷೆಗಳನ್ನು ಹೆಚ್ಚಾಗಿ ನಡೆಸಲಾಗುತ್ತಿದೆ. ಸೋಂಕು ಕಡಿಮೆಯಾಗಿರುವಂತೆ ಮಾಡಲು ಜನರು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲನೆಮಾಡಬೇಕು ಎಂದು ತಿಳಿಸಿದ್ದಾರೆ. 

ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್ ಡಿ ಅವರು ಮಾತನಾಡಿ, “ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಜಿಲ್ಲೆಯಲ್ಲಿ ಪ್ರಕರಣಗಳು ಹೆಚ್ಚಾಗದಂತೆ ನೋಡಿಕೊಳ್ಳಲಾಗುತ್ತಿದೆ. ಮಾರ್ಷಲ್‌ಗಳನ್ನು ಮಾರುಕಟ್ಟೆಗಳಲ್ಲಿ ನಿಯೋಜಿಸಲಾಗಿದೆ ಮತ್ತು ನಗರದ ಜನನಿಬಿಡ ಪ್ರದೇಶಗಳಲ್ಲಿ ಯಾದೃಚ್ಛಿಕ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ಆರ್‌ಡಬ್ಲ್ಯೂಎಗಳು ಕೂಡ ಉತ್ತಮ ಸಹಕಾರ ನೀಡುತ್ತಿದ್ದಾರೆಂದು ಹೇಳಿದ್ದಾರೆ. 

ಲಸಿಕೆ ವ್ಯಾಪ್ತಿಯಲ್ಲಿ ಬೆಂಗಳೂರು ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದು, 1,22,31,840 ಜನರಿಗೆ ಲಸಿಕೆ ನೀಡುವ ಮೂಲಕ ಮೊದಲನೆಯ ಸ್ಥಾನದಲ್ಲಿ ಇದೆ. ನಂತರ 96,16,935 ಜನರಿಗೆ ಲಸಿಕೆ ನೀಡುವ ಮೂಲಕ ಬೆಂಗಳೂರು ಎರಡನೇ ಸ್ಥಾನದಲ್ಲಿದೆ, 86,65,037ನೊಂದಿಗೆ ಮುಂಬೈ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com