ದೆಹಲಿಯಲ್ಲಿ ಸಿಎಂ ಬೊಮ್ಮಾಯಿ: ಇಂದು ಜೆಪಿ ನಡ್ಡಾ ಭೇಟಿ, ಸಂಪುಟ ಕ್ಯಾತೆ ಕುರಿತು ಮಾತುಕತೆ ಸಾಧ್ಯತೆ

ಸಚಿವ ವಿಸ್ತರಣೆ ರಚನೆ ಬಳಿಕ ಮೊದಲ ಬಾರಿ ದೆಹಲಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗುರುವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಲಿದ್ದು ಈ ವೇಳೆ ಸಂಪುಟ ರಚನೆ ಬಳಿಕ ಭುಗಿಲೆದ್ದಿರುವ ಅಸಮಾಧಾನಗಳ ಕುರಿತು ಮಾತುಕತೆ ನಡೆಸುವ ಸಾಧ್ಯತೆಗಳಿವೆ. 
ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿ ಮಾಡಿರುವ ಸಿಎಂ ಬೊಮ್ಮಾಯಿ
ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿ ಮಾಡಿರುವ ಸಿಎಂ ಬೊಮ್ಮಾಯಿ
Updated on

ಬೆಂಗಳೂರು: ಸಚಿವ ವಿಸ್ತರಣೆ ರಚನೆ ಬಳಿಕ ಮೊದಲ ಬಾರಿ ದೆಹಲಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಗುರುವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಲಿದ್ದು ಈ ವೇಳೆ ಸಂಪುಟ ರಚನೆ ಬಳಿಕ ಭುಗಿಲೆದ್ದಿರುವ ಅಸಮಾಧಾನಗಳ ಕುರಿತು ಮಾತುಕತೆ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ನಿನ್ನೆಯಷ್ಟೇ ರಾಷ್ಟ್ರರಾಜಧಾನಿ ದೆಹಲಿಗೆ ಬೊಮ್ಮಾಯಿ ಭೇಟಿ ನೀಡಿದ್ದು, ಈ ವೇಳೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿ ಮಾಡಿದ್ದು, ರೈತರ ಆದಾಯ ದ್ವಿಗುಣಗೊಳಿಸುವ ಕುರಿತು ಮಾತುಕತೆ ನಡೆಸಿದ್ದಾರೆ. 

ಇದೇ ವೇಳೆ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನೂ ಬೇಟಿ ಮಾಡಿರುವ ಅವರು ಮೇಕೆದಾಟು ಯೋಜನೆ ಸೇರಿದಂತೆ ಇತರೆ ಜಲವಿವಾದಗಳ ಕುರಿತಂತೆ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ. 

ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಬೊಮ್ಮಾಯಿಯವರು, ಅಪಾಯಿಂಟ್ಮೆಂಟ್ ದೃಢಪಟ್ಟ ಕೂಡಲೇ ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡುತ್ತೇನೆಂದು ಹೇಳಿದ್ದರು. 

ಸಂಪುಟ ವಿಸ್ತರಣೆ ಮಾಡಿದ ಬಳಿಕ ರಾಜ್ಯ ಬಿಜೆಪಿ ಪಾಳಯದಲ್ಲಿ ಅಸಮಾಧಾನಗಳು ಭುಗಿಲೆದಿದ್ದವು. ಅರಣ್ಯ ಹಾಗೂ ಇಂಧನ ಖಾತೆ ಮೇಲೆ ಕಣ್ಣಿಟ್ಟಿದ್ದ ಸಚಿವ ಆನಂದ್ ಸಿಂಗ್ ಅವರಿಗೆ ಈ ಖಾತೆಗಳು ಸಿಗದೆ ಪರಿಸರ ಹಾಗೂ ಪ್ರವಾಸೋದ್ಯಮ ಸಚಿವ ಸ್ಥಾನ ಸಿಕ್ಕಿದ್ದಕ್ಕೆ ಸ್ಥಾನಕ್ಕೆ ರಾಜೀನಾಮೆಯನ್ನೇ ನೀಡುವ ನಿರ್ಧಾರಕ್ಕೆ ಬಂದಿದ್ದರು. ಬಳಿಕ ಪಕ್ಷ ಹಾಗೂ ಮುಖ್ಯಮಂತ್ರಿಗಳು, ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹಲವು ದಿನಗಳ ಕಾಲ ನಡೆಸಿದ ಮನವೊಲಿಕೆ ಪ್ರಯತ್ನ ಎರಡು ದಿನಗಳ ಹಿಂದಷ್ಟೇ ಯಶಸ್ವಿಯಾಗಿತ್ತು. ಇದೇ ರೀತಿ ಎಂಟಿಬಿ ನಾಗರಾಜ್ ಕೂಡ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. 

ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಬೊಮ್ಮಾಯಿಯವರು, ರೈತರ ಆದಾಯ ದ್ವಿಗುಣಗೊಳಿಸುವುದು, ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವುದು ಸೇರಿದಂತೆ ಹಲವು ವಿಚಾರಗಳ ಕುರಿತು ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸಿದ್ದೇನೆ. ಸೆ.5ರಂದು ವಿಧಾನಸೌಧದಲ್ಲಿ ಆಯೋಜಿಸಿರುವ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲು ಬೆಂಗಳೂರಿಗೆ ಬರಲು ಸಚಿವರು ಒಪ್ಪಿಗೆ ನೀಡಿದ್ದಾರೆ. ಈ ವೇಳೆ ಕೃಷಿ ಇಲಾಖೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 

ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್ ನೇತೃತ್ವದ ಕೃಷ್ಣಾ ಜಲ ನ್ಯಾಯಮಂಡಳಿ 2010 ರಲ್ಲಿ ಕರ್ನಾಟಕಕ್ಕೆ 911 ಟಿಎಂಸಿ ಅಡಿ ಹಂಚಿಕೆ ಮಾಡಿತ್ತು. ಈ ಯೋಜನೆ ವಿಚಾರವಾಗಿ ತೆಲಂಗಾಣ ಸುಪ್ರೀಂಕೋರ್ಟ್'ಗೆ ಸಲ್ಲಿಸಿದ್ದ ತನ್ನ ಮೊದಲ ಅರ್ಜಿ ಹಿಂಪಡೆದುಕೊಂಡಿದೆ. ಆಂಧ್ರಪ್ರದೇಶದ ಜೊತೆಗೆ ನೀರು ಹಂಚಿಕೊಳ್ಳುವ ಪ್ರಸ್ತಾಪದಡಿ ಹೊಸ ಅರ್ಜಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ನಮಗೆ ಯೋಜನೆ ಮುಂದುವರೆಸಲು ಸುಲಭವಾಗಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದ್ದೇನೆ. ಯೋಜನೆ ಆರಂಭಿಸಲು ಅನುಮತಿ ಕೇಳಿದ್ದೇನೆಂದು ಮಾಹಿತಿ ನೀಡಿದ್ದಾರೆ. 

ಭದ್ರತಾ ಮೇಲ್ದಂಡೆ ಯೋಜನೆಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪವಾಗಲಿದೆ. ರಾಷ್ಟ್ರೀಯ ಯೋಜನೆಗಳಿಗೆ ಅನುಮತಿ ನೀಡುವಾಗ ಈ ಯೋಜನೆಯೂ ಅದರಲ್ಲಿರಲಿದೆ ಎಂದು ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ. ಎತ್ತಿನಹೊಳೆ ಯೋಜನೆಗೆ ಜಲ ಜೀವನ ಮಿಷನ್ ನಲ್ಲಿ ಹಣ ಕೇಳಿದ್ದೇನೆ. ಹೊಸ ಪ್ರಸ್ತಾವನೆ ಕಳುಸಲು ಸಲಹೆ ನೀಡಿದ್ದಾರೆಂದು ತಿಳಿಸಿದರು. 

ತಮಿಳುನಾಡಿನ ವೆಲ್ಲಾರ್ ನದಿ ಜೋಡಣೆ ಯೋಜನೆಗೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಇದು ನ್ಯಾಯಸಮ್ಮತ ಯೋಜನೆ ಅಲ್ಲ ಎಂದು ಹೇಳಿದೆ. ಕೇಂದ್ರ ಸಚಿವರು ಈ ಬಗ್ಗೆ ಲಿಖಿತವಾಗಿ ದೂರು ನೀಡಲು ಸೂಚಿಸಿದ್ದಾರೆ. ಕಾನೂನು ತಂಡದ ಜೊತೆಗೆ ಮಾತನಾಡಿ ಮಹದಾಯಿ ಮೇಕೆದಾಟು ಬಗ್ಗೆ ಕಾನೂನುತ್ಮಾಕವಾಗಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com