ಬಿಜೆಪಿಗೆ ಅತ್ಯಾಚಾರಿಗಳೆಂದರೆ ಹೆಚ್ಚು ಪ್ರೀತಿ! ಮೈಸೂರು ಗ್ಯಾಂಗ್ ರೇಪ್ ನಡೆದು 24 ಗಂಟೆ ಕಳೆದರೂ ಆರೋಪಿಗಳನ್ನು ಬಂಧಿಸಿಲ್ಲ: ಕಾಂಗ್ರೆಸ್ ಆರೋಪ

ಯುವತಿಯನ್ನು ಅತ್ಯಾಚಾರವೆಸಗಿದ ಮಾಜಿ ಸಚಿವರ ರಕ್ಷಣೆ ನಿಂತಂತೆ ಮೈಸೂರಿನ ಅತ್ಯಾಚಾರಿಗಳ ರಕ್ಷಣೆಯನ್ನೂ ಮಾಡುವಂತಿದೆ ಸರ್ಕಾರ ಎಂದು ಕಾಂಗ್ರೆಸ್ ಆರೋಪಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಯುವತಿಯನ್ನು ಅತ್ಯಾಚಾರವೆಸಗಿದ ಮಾಜಿ ಸಚಿವರ ರಕ್ಷಣೆ ನಿಂತಂತೆ ಮೈಸೂರಿನ ಅತ್ಯಾಚಾರಿಗಳ ರಕ್ಷಣೆಯನ್ನೂ ಮಾಡುವಂತಿದೆ ಸರ್ಕಾರ ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ಬಗ್ಗೆ ಟ್ವೀಟ್ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ರಾಜ್ಯ ಕಾಂಗ್ರೆಸ್, ಮೈಸೂರಿನಂತಹ ನಗರದಲ್ಲಿ ಅತ್ಯಾಚಾರ ಪ್ರಕರಣ ನಡೆದು 24 ಗಂಟೆಗೂ ಅಧಿಕ ಸಮಯ ಕಳೆದಿದ್ದರೂ ಆರೋಪಿಗಳನ್ನು ಬಂಧಿಸಲಾಗದ್ದು ಆಡಳಿತದಲ್ಲಿ ಗೃಹ ಇಲಾಖೆಯ ಕಾರ್ಯಕ್ಷಮತೆ ಕುಸಿದಿರುವುದಕ್ಕೆ ಸಾಕ್ಷಿಯಾಗಿದೆ. ಇದುವರೆಗೂ ಗೃಹಸಚಿವರು, ಬಿಜೆಪಿಯ ಮಹಿಳಾ ನಾಯಕಿಯರು ಸಂತ್ರಸ್ತೆಯನ್ನು ಭೇಟಿಯಾಗದಿರುವುದು ಬಿಜೆಪಿಯ ನಿರ್ಲಕ್ಷ್ಯ ಧೋರಣೆಗೆ ನಿದರ್ಶನ ಎಂದು ಟೀಕಿಸಿದೆ.

ಅತ್ಯಾಚಾರ ನಡೆಸಿದ್ದ ಶಾಸಕ, ಮಾಜಿ ಸಚಿವರನ್ನು ಹೊಂದಿದ ಬಿಜೆಪಿಗೆ ಅತ್ಯಾಚಾರಿಗಳೆಂದರೆ ಹೆಚ್ಚು ಪ್ರೀತಿ, ಸಿದ್ದು ಸವದಿಯನ್ನ ರಕ್ಷಿಸಿದ ಮಹಿಳಾ ವಿರೋಧಿ ಬಿಜೆಪಿಯಿಂದ ಮಹಿಳೆಯರ ರಕ್ಷಣೆ ಬಗ್ಗೆ ನಿರೀಕ್ಷೆಯಿಡಲು ಹೇಗೆ ಸಾಧ್ಯ ಎಂದು ಕೇಳಿದೆ.

ಸಾಂಸ್ಕೃತಿಕ ನಗರಿ ಎನಿಸಿಕೊಂಡ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆದ ಅತ್ಯಾಚಾರ ಪ್ರಕರಣವು ಸರ್ಕಾರದ ಕಳಪೆ ಕಾನೂನು ಸುವ್ಯವಸ್ಥೆಗೆ ಕನ್ನಡಿ ಹಿಡಿದಂತಿದೆ. ಹಿಂದೊಮ್ಮೆ ಮಾಧ್ಯಮ ವರದಿಗಾರ್ತಿಗೆ ಅವರು ಆಡಿದ ಅಸಂಬದ್ಧ ಮಾತುಗಳೇ ಬಿಜೆಪಿಯ ಮಹಿಳಾ ವಿರೋಧಿ ಧೋರಣೆ ಹಾಗೂ ಮಹಿಳಾ ರಕ್ಷಣೆಯ ಬಗೆಗೆ ಇರುವ ಉದಾಸೀನತೆ ತೋರುತ್ತದೆ.

ಅಧಿಕಾರಕ್ಕೆ ಬಂದಮೇಲೆ ಉತ್ತರ ಪ್ರದೇಶದ ಮಾದರಿಯಲ್ಲಿಯೇ ರಾಜ್ಯದಲ್ಲೂ ಅತ್ಯಾಚಾರ ಪ್ರಕರಣಗಳು ಘಟಿಸುತ್ತಿವೆ. ಬಿಜೆಪಿ ಸದಾ ಜಪಿಸುವ 'ಯುಪಿ ಮಾಡೆಲ್'ನ್ನು ರಾಜ್ಯದಲ್ಲಿ ಈ ಮೂಲಕ ಜಾರಿಗೊಳಿಸಲು ತೀರ್ಮಾನಿಸಿದೆ. ಚಾಮುಂಡಿ ಬೆಟ್ಟದಂತಹ ಪ್ರವಾಸಿತಾಣದಲ್ಲೂ ಪೊಲೀಸ್ ರಕ್ಷಣೆ, ಗಸ್ತು ಇಲ್ಲದಿರುವುದು ಸರ್ಕಾರದ ವೈಫಲ್ಯ ಗೃಹಸಚಿವರೇ ಎಂದು ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com