ಸೆ.6 ರಿಂದ 6,7 ಮತ್ತು 8 ನೇ ತರಗತಿ ಪ್ರಾರಂಭಕ್ಕೆ ಸರ್ಕಾರ ನಿರ್ಧಾರ; ವಾರದಲ್ಲಿ ಐದು ದಿನ ಮಾತ್ರ ಶಾಲೆ ಓಪನ್

ರಾಜ್ಯದಲ್ಲಿ 6,7 ಮತ್ತು 8ನೇ ತರಗತಿ ಭೌತಿಕ ತರಗತಿಗಳನ್ನು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳ ಅನ್ವಯ ಸೆಪ್ಟೆಂಬರ್ 6 ರಿಂದ ಪ್ರಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ, 1 ರಿಂದ 5ನೇ ತರಗತಿ ವಿಚಾರದಲ್ಲಿ ಸದ್ಯಕ್ಕೆ ಯಾವುದೇ ತೀರ್ಮಾನ ಕೈಗೊಳ್ಳದೇ ಇರಲು ತೀರ್ಮಾನಿಸಲಾಗಿದೆ. 
ಕೋವಿಡ್-19 ಸಲಹಾ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಆರ್. ಅಶೋಕ್ ಮತ್ತಿತರರು
ಕೋವಿಡ್-19 ಸಲಹಾ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಆರ್. ಅಶೋಕ್ ಮತ್ತಿತರರು
Updated on

ಬೆಂಗಳೂರು: ರಾಜ್ಯದಲ್ಲಿ 6,7 ಮತ್ತು 8ನೇ ತರಗತಿ ಭೌತಿಕ ತರಗತಿಗಳನ್ನು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳ ಅನ್ವಯ ಸೆಪ್ಟೆಂಬರ್ 6 ರಿಂದ ಪ್ರಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ, 1 ರಿಂದ 5ನೇ ತರಗತಿ ವಿಚಾರದಲ್ಲಿ ಸದ್ಯಕ್ಕೆ ಯಾವುದೇ ತೀರ್ಮಾನ ಕೈಗೊಳ್ಳದೇ ಇರಲು ತೀರ್ಮಾನಿಸಲಾಗಿದೆ. 

ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ತಾಂತ್ರಿಕ ಸಲಹಾ ಸಮಿತಿ ಸಭೆ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್, ಅಶೋಕ್, ಶೇಕಡಾ 2ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ರಾಜ್ಯದ ಎಲ್ಲಾ ತಾಲೂಕ್ ಗಳಲ್ಲಿ 6 ರಿಂದ 8ನೇ ತರಗತಿವರೆಗಿನ ಶಾಲೆಗಳನ್ನು ಸೆಪ್ಟೆಂಬರ್ 6 ರಿಂದ ತೆರೆಯಲು ಅನುಮತಿ ನೀಡಲಾಗಿದೆ. ಕೊರೋನಾ ಮಾರ್ಗಸೂಚಿ ಅನುಸರಿಸಿ ದಿನ ಬಿಟ್ಟು ದಿನ ಶೇ.50ರ ಹಾಜರಾತಿಯಲ್ಲಿ ತರಗತಿಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ವಾರದಲ್ಲಿ ಐದು ದಿನ ಮಾತ್ರ ಶಾಲೆಗಳು ನಡೆಯಲಿದ್ದು, ವಾರಾಂತ್ಯದಲ್ಲಿ ಎರಡು ದಿನ ಶಾಲೆಗಳು ಇರುವುದಿಲ್ಲ, ಸೋಮವಾರದಿಂದ ಶುಕ್ರವಾರದವರೆಗೆ ಶಾಲೆಗಳು ತೆರೆಯಲಿವೆ. ಇನ್ನುಳಿದ ಎರಡು ದಿನ ಶಾಲೆ, ಕೊಠಡಿಗಳ ಸ್ವಚ್ಛತಾ ಕಾರ್ಯ ಸ್ಯಾನಿಟೈಸಿಂಗ್ ಗೆ ಅವಕಾಶ ಕಲ್ಪಿಸಲಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಮಕ್ಕಳಿಗೆ ಒಂದು ದಿನ ತರಗತಿ, ಒಂದು ದಿನ ರಜೆ ಇರುತ್ತದೆ ಎಂದು ತಿಳಿಸಿದರು.

ಕಳೆದ ವಾರ 9 ರಿಂದ 12 ನೇತರಗತಿವರೆಗೆ ಶಾಲೆಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿತ್ತು. ಸರ್ಕಾರಿ ಶಾಲೆಗಳಲ್ಲಿ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖಾಸಗಿ ಶಾಲೆಗಳಲ್ಲಿ ಇನ್ನೂ ಸ್ವಲ್ಪ ಹಾಜರಾತಿ ಕಡಿಮೆಯಿದ್ದು, ಅದು ಉತ್ತಮಗೊಳ್ಳುವ ನಿರೀಕ್ಷೆಯಿದೆ. ರಾಜ್ಯದ 2,912 ಪಂಚಾಯತ್ ಗಳಲ್ಲಿ ಶೂನ್ಯ ಪಾಸಿಟಿವಿಟಿ ದರ ಇದೆ. 9 ರಿಂದ 12ನೇ ತರಗತಿವರೆಗಿನ 6,472 ಮಕ್ಕಳ ಕೊರೋನಾ ಪರೀಕ್ಷೆ ಮಾದರಿ ಸಂಗ್ರಹ ಮಾಡಲಾಗಿದೆ. ಅದರಲ್ಲಿ ಕೇವಲ 14 ಮಕ್ಕಳಿಗೆ ಮಾತ್ರ ಸೋಂಕು ತಗುಲಿದೆ. ಇದು ಅತ್ಯಂತ ಕಡಿಮೆ ಸಂಖ್ಯೆ ಎಂದು ಸಚಿವ ಆರ್. ಅಶೋಕ್ ಸಮರ್ಥಿಸಿಕೊಂಡರು.

ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ ಒಂದು ವಾರ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ ಒಳಪಡಿಸುವಂತೆ ನಿರ್ಬಂಧ ವಿಧಿಸಲಾಗಿದೆ. ಏಳು ದಿನಗಳ ನಂತರ ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಬೇಕು ಎಂದು ಅಶೋಕ್ ಹೇಳಿದರು.

ಉಡುಪಿ, ಚಿಕ್ಕಮಗಳೂರು, ಹಾಸನ, ಕಲಬುರಗಿ, ಮೈಸೂರು, ಶಿವಮೊಗ್ಗ, ಕೋಲಾರ ಜಿಲ್ಲೆಗಳಲ್ಲಿ ಶೇ 1.5ಕ್ಕಿಂತ ಪಾಸಿಟಿವಿಟಿ ದರ ಕಡಿಮೆ ಇರುವ ಕಾರಣ ಕಠಿಣ ನಿರ್ಬಂಧಗಳನ್ನು ಸಡಿಲಗೊಳಿಸಲು ನಿರ್ಧಾರ ಮಾಡಲಾಗಿದೆ. ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕು ಹೆಚ್ಚಿರುವ ಹಿನ್ನೆಲೆಯಲ್ಲಿ ನಿಯಂತ್ರಣ ಕ್ರಮಗಳು ಹಾಗೆಯೇ ಮುಂದುವರೆಯಲಿವೆ. ಕೇರಳದಲ್ಲಿ ಪಾಸಿಟಿವಿಟಿ ದರ ಶೇ 19ಕ್ಕೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಈ ಎರಡು ಜಿಲ್ಲೆಗಳಲ್ಲಿ ನಿರ್ಬಂಧ ಮುಂದುವರೆಯಲಿದೆ ಎಂದರು.

ಮದುವೆ ಸಮಾರಂಭಕ್ಕೆ ಸಂಬಂಧಪಟ್ಟಂತೆ ಮದುವೆ ಮಂಟಪದ ಸಾಮರ್ಥ್ಯದಲ್ಲಿ ಶೇ. 50 ರಷ್ಟು ಜನರನ್ನು ಸೇರಿಸಿಕೊಂಡು ಮದುವೆ ಮಾಡಬಹುದಾಗಿದೆ. ಸಿನಿಮಾ ಮಂದಿರಗಳ ಮಾದರಿಯಲ್ಲಿ ಅರ್ಧದಷ್ಟು ಜನರನ್ನು ಸೇರಿಸಿ ಮದುವೆ ಮಾಡಲು ಅವಕಾಶ ನೀಡಲಾಗಿದೆ. ಆದರೆ, ಗರಿಷ್ಠ 400 ಜನರನ್ನು ಮೀರುವಂತಿಲ್ಲ. ಕಲ್ಯಾಣ ಮಂಟಪದ ಮಾಲೀಕರು ತೊಂದರೆಯಿರುವ ಕಾರಣ ಈ ವಿನಾಯಿತಿ ನೀಡಲಾಗುತ್ತಿದೆ ಎಂದರು.

 ಕೊಡಗು, ದಕ್ಷಿಣ ಕನ್ನಡ, ಹಾಸನ ಹೊರತುಪಡಿಸಿ ಇತರೆ ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ ಸಡಿಲಿಸಲಾಗಿದೆ. ಗಡಿ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಮುಂದುವರೆಯಲಿದೆ. ಕರ್ನಾಟಕ ಇಡೀ ದೇಶದಲ್ಲಿಯೇ ಅತ್ಯುತ್ತಮ ರೀತಿಯಲ್ಲಿ ಕೋವಿಡ್-19 ಸಾಂಕ್ರಾಮಿಕವನ್ನು ನಿಯಂತ್ರಣ ಮಾಡಿದೆ ಎಂದು ಆರ್.ಅಶೋಕ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com