ವಿಧಾನ ಪರಿಷತ್ ಚುನಾವಣೆ: ರಾಜ್ಯಾದ್ಯಂತ ದಾಖಲೆಯ ಶೇ.99.8ರಷ್ಟು ಮತದಾನ

ತೀವ್ರ ಕುತೂಹಲ ಕೆರಳಿಸಿದ್ದ ವಿಧಾನ ಪರಿಷತ್ ಚುನಾವಣಾ ಮತದಾನ ಅಂತ್ಯವಾಗಿದ್ದು, ದಿನದಂತ್ಯಕ್ಕೆ ದಾಖಲೆಯ ಶೇ.99.8ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.
ಪರಿಷತ್ ಚುನಾವಣೆ
ಪರಿಷತ್ ಚುನಾವಣೆ
Updated on

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ವಿಧಾನ ಪರಿಷತ್ ಚುನಾವಣಾ ಮತದಾನ ಅಂತ್ಯವಾಗಿದ್ದು, ದಿನದಂತ್ಯಕ್ಕೆ ದಾಖಲೆಯ ಶೇ.99.8ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.

ಕರ್ನಾಟಕದ 20 ಚುನಾವಣಾ ಕ್ಷೇತ್ರಗಳಿಂದ ಒಟ್ಟು 25 ಸ್ಥಾನಗಳಿಗೆ ಇಂದು ಚುನಾವಣೆ ನಡೆದಿದ್ದು, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸೇರಿದಂತೆ ಒಟ್ಟು 90 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಸ್ಪರ್ಧಿಸಿದ್ದಾರೆ. ಬೆಳಗ್ಗೆ 8ರಿಂದಲೇ ಮತದಾನ ಆರಂಭವಾಗಿ, ಸಂಜೆ 4 ಗಂಟೆವರೆಗೂ ನಡೆಯಿತು. ಇಂದಿನ ಮತದಾನ ಪ್ರಕ್ರಿಯೆಯಲ್ಲಿ ದಾಖಲೆಯ ಶೇ.99.8ರಷ್ಟು ಮತದಾನವಾಗಿದ್ದು, ಇದು 2015 ಚುನಾವಣೆಯ ಮತದಾನಕ್ಕೆ ಹೋಲಿಸಿದರೆ ಶೇ.0.2ರಷ್ಟು ಏರಿಕೆಯಾಗಿದೆ.

ಬಹುತೇಕ ಎಲ್ಲಾ ಚುನಾವಣಾ ಕ್ಷೇತ್ರಗಳಲ್ಲಿ ಉತ್ತಮ ಮತದಾನವಾಗಿದ್ದು, ಕೋಲಾರ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 99.9 ಶೇಕಡಾ ಮತ್ತು ವಿಜಯಪುರದಲ್ಲಿ ಅತಿ ಕಡಿಮೆ ಶೇಕಡಾ 99.55 ರಷ್ಟು ಮತದಾನವಾಗಿದೆ.

ಬೆಂಗಳೂರು ನಗರರದಲ್ಲಿ 2,073 ಮತದಾರರ ಪೈಕಿ 2,070 ಸದಸ್ಯರು ತಮ್ಮ ಹಕ್ಕು ಚಲಾಯಿಸುವುದರೊಂದಿಗೆ ಶೇ.99.86 ರಷ್ಟು ಮತದಾನವಾಗಿದೆ. ಈ ಕ್ಷೇತ್ರವು ಕದನ ಕುತೂಹಲ ಕೆರಳಿಸಿದ್ದು ಇಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕೆಜಿಎಫ್ ಬಾಬು ಎಂದೇ ಖ್ಯಾತಿ ಗಳಿಸಿರುವ ಯೂಸುಫ್ ಷರೀಫ್ ಅವರು ಸ್ಪರ್ಧಿಸಿದ್ದಾರೆ. ಈ ಹಿಂದೆ ಇದೇ ಯೂಸುಫ್ ಷರೀಫ್ ಅವರು 1,744 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದರು. ಬಿಜೆಪಿಯ ಗೋಪಿನಾಥ್ ರೆಡ್ಡಿ ಅವರು 34 ಕೋಟಿ ರೂಪಾಯಿಗಳನ್ನು ತಮ್ಮ ನಿವ್ವಳ ಆಸ್ತಿ ಎಂದು ಘೋಷಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಗೆ ಪ್ರತ್ಯೇಕ ಮತ ಪೆಟ್ಟಿಗೆ
ಇತ್ತ ಆನೇಕಲ್ ಪಟ್ಟಣದ ಪುರಸಭೆಗೆ 15 ನಾಮನಿರ್ದೇಶಿತ ಸದಸ್ಯರ ಮತದಾನದ ಹಕ್ಕುಗಳನ್ನು ಪ್ರಶ್ನಿಸಿದ ಕಾಂಗ್ರೆಸ್ ಅಭ್ಯರ್ಥಿ ಯೂಸೂಫ್ ಷರೀಫ್ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯೊಂದಿಗೆ ತಮ್ಮ ಹಕ್ಕು ಚಲಾಯಿಸಿದ್ದಾರೆ. ಆದರೆ, ಅವರ ಮತಗಳನ್ನು ಎಣಿಕೆಗೆ ತೆಗೆದುಕೊಳ್ಳಬಹುದೇ ಅಥವಾ ಬೇಡವೇ ಎಂಬ ಬಗ್ಗೆ ಹೈಕೋರ್ಟ್‌ನ ತೀರ್ಮಾನ ಬಾಕಿಯಿರುವುದರಿಂದ ಅವರಿಗಾಗಿ ಪ್ರತ್ಯೇಕ ಮತಪೆಟ್ಟಿಗೆಯನ್ನು ಇರಿಸಲಾಗಿತ್ತು.

ಈ ಬಗ್ಗೆ ಮಾತನಾಡಿದ ಯೂಸುಫ್ ಪರ ವಕೀಲ ಪ್ರೊ. ರವಿವರ್ಮ ಕುಮಾರ್ ಅವರು, 'ಸೋಮವಾರ (ಡಿಸೆಂಬರ್ 13) ಮುಂದಿನ ವಿಚಾರಣೆಯಲ್ಲಿ ನ್ಯಾಯಾಲಯದ ನಿರ್ಧಾರವು ದೇಶಾದ್ಯಂತ ಅದರ ಪ್ರಭಾವವನ್ನು ಹೊಂದಿರುತ್ತದೆ ಎಂದು ಹೇಳಿದ್ದಾರೆ.

ಉಳಿದಂತೆ ಕರ್ನಾಟಕದಾದ್ಯಂತ ನಗರ ಸ್ಥಳೀಯ ಸಂಸ್ಥೆಗಳಿಗೆ ನಾಮನಿರ್ದೇಶಿತ ಸದಸ್ಯರು ಎಂದಿನಂತೆ ತಮ್ಮ ಹಕ್ಕು ಚಲಾಯಿಸಿದರು. ದಕ್ಷಿಣ ಕನ್ನಡ, ಬೀದರ್, ಉತ್ತರ ಕನ್ನಡ, ರಾಯಚೂರು, ಬಳ್ಳಾರಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ಕೊಡಗು ಕ್ಷೇತ್ರಗಳಲ್ಲಿ ಮಧ್ಯಾಹ್ನ 2 ಗಂಟೆ ವೇಳೆಗೆ ಶೇ.90ರಷ್ಟು ಮತದಾನವಾಗಿದ್ದು, ಅಂತ್ಯದ ವೇಳೆಗೆ ಶೇ.99ಕ್ಕೆ ತಲುಪಿದೆ. ಈ ಹಿಂದಿನ ಚುನಾವಣೆಗಿಂತಲೂ ಶೇ.0.1 ರಿಂದ 0.5 ಶೇಕಡಾ ಹೆಚ್ಚಳ ಅಥವಾ ಅದನ್ನು ಮೀರಿದ್ದಾಗಿದೆ ಎನ್ನಲಾಗಿದೆ.

ಗಣ್ಯರಿಂದ ಮತದಾನ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಪರಿಷತ್ತಿನ ಪ್ರತಿಪಕ್ಷದ ನಾಯಕ ಎಸ್‌ಆರ್ ಪಾಟೀಲ್ ಸೇರಿದಂತೆ ಆಯಾ ನಗರ ಸ್ಥಳೀಯ ಸಂಸ್ಥೆಗಳ ಪದನಿಮಿತ್ತ ಸದಸ್ಯರಾಗಿ ಅಧಿಕಾರ ಚಲಾಯಿಸಿದರು.  ಆದಾಗ್ಯೂ, ಬಿಬಿಎಂಪಿ ಸಂಸ್ಥೆ ಅಸ್ತಿತ್ವದಲ್ಲಿಲ್ಲದ ಕಾರಣ ಸಂಸದರು ಮತ್ತು ಶಾಸಕರು ಸೇರಿದಂತೆ ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳು ತಮ್ಮಮತ ಹಕ್ಕು ಕಳೆದುಕೊಂಡರು.

ಡಿಸೆಂಬರ್ 14 ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶಕ್ಕಾಗಿ ರಾಜಕೀಯ ವಲಯ ಕುತೂಹಲದಿಂದ ಕಾಯುತ್ತಿದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com