
ಬೆಂಗಳೂರು: ಕೋವಿಡ್ -19 ಕಾರಣದಿಂದಾಗಿ ಕಟ್ಟುನಿಟ್ಟಾದ ಮಾರ್ಗಸೂಚಿಗಳ ಹೊರಡಿಸಿ ಪ್ರವಾಸ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಆಯೋಜನೆ ಮಾಡದಂತೆ ಶಾಲೆಗಳಿಗೆ ಆದೇಶ ನೀಡಿದ್ದರೂ ನಗರದ ಶಾಲೆಯೊಂದು 122 ವಿದ್ಯಾರ್ಥಿಗಳನ್ನು 4 ದಿನಗಳ ಕಾಲ ಹೈದರಾಬಾದ್ ಪ್ರವಾಸಕ್ಕೆ ರವಾನಿಸಿ, ಮಕ್ಕಳ ಜೊತೆ ಚೆಲ್ಲಾಟವಾಡುತ್ತಿದೆ.
ಜಾಲಹಳ್ಳಿಯಲ್ಲಿರುವ ಪ್ರತಿಷ್ಠಿತ ಕ್ಲೂನಿ ಕಾನ್ವೆಂಟ್ ಶಾಲೆ ಸುಮಾರು 122 ವಿದ್ಯಾರ್ಥಿಗಳನ್ನ ಪ್ರವಾಸಕ್ಕೆ ಕರೆದುಕೊಂಡು ಹೋಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಬೆಂಗಳೂರು ಉತ್ತರ ಬ್ಲಾಕ್ ಶಿಕ್ಷಣಾಧಿಕಾರಿ ಟಿ ಎನ್ ಕಮಲಾಕರ ಅವರು ಪ್ರತಿಕ್ರಿಯೆ ನೀಡಿ, ಪ್ರವಾಸಕ್ಕೆ ಯಾವುದೇ ಪೂರ್ವಾನುಮತಿ ಪಡೆದಿಲ್ಲದ ಕಾರಣ ನಾವು ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಈಗಾಗಲೇ ಶಾಲಾ ಆಡಳಿತ ಮಂಡಳಿಯ ಅಧಿಕಾರಿಗಳನ್ನು ಸಂಪರ್ಕಿಸಲಾಗಿದ್ದು, ಮಕ್ಕಳು ಎಲ್ಲಿದ್ದರೂ ಶೀಘ್ರಗತಿಯಲ್ಲಿ ಹಿಂತಿರುಗಲು ಆದೇಶಿಸುವಂತೆ ಪ್ರಿನ್ಸಿಪಾಲ್ ಮತ್ತು ಮ್ಯಾನೇಜ್‌ಮೆಂಟ್ ಇಬ್ಬರಿಗೂ ನಿರ್ದೇಶನ ನೀಡಿದ್ದೇವೆಂದು ಹೇಳಿದ್ದಾರೆ.
ಈವರೆಗೂ ಶಾಲೆಯ ವಿರುದ್ಧ ಯಾವುದೇ ಔಪಚಾರಿಕ ಕ್ರಮಗಳನ್ನು ತೆಗೆದುಕೊಂಡಿಲ್ಲ, ಕೇವಲ ವಿದ್ಯಾರ್ಥಿಗಳು ಹಿಂತಿರುಗುವಂತೆ ಆದೇಶಿಸಲಾಗಿದೆ. ಮುಂದಿನ ಕ್ರಮ ಕುರಿತು ಸೋಮವಾರ ಶಾಲೆಗೆ ಆದೇಶ ನೀಡಲಾಗುವುದು ಎಂದು ಕಮಲಾಕರ ತಿಳಿಸಿದ್ದಾರೆ.
"ಶುಕ್ರವಾರ ನಮಗೆ ಅನಾಮಧೇಯ ಕರೆ ಬಂದಿತ್ತು, ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಕುರಿತು ಪರಿಶೀಲನೆ ನಡೆಸಲು ಅಧಿಕಾರಿಗಳನ್ನು ಕಳುಹಿಸಲಾಗಿತ್ತು. ಇದೀಗ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕಳುಹಿಸಿರುವುದು ಸ್ಪಷ್ಟವಾಗಿದೆ. ಪೋಷಕರು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಸರ್ಕಾರದ ಅನುಮತಿ ಪಡೆಯದಿದ್ದರೂ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ. ಮೂರು ಪ್ರತ್ಯೇಕ ಬಸ್ ಗಳು ಹಾಗೂ ಐವರು ಶಿಕ್ಷಕರೊಂದಿಗೆ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕೆರೆದುಕೊಂಡು ಹೋಗಿದ್ದಾರೆಂದು ಮಾಹಿತಿ ನೀಡಿದ್ದಾರೆ.
Advertisement