ನಗರದ ಜೆಸಿ ರಸ್ತೆಯಲ್ಲಿ ದಿಢೀರ್ ಭೂಕುಸಿತದಿಂದ ಗುಂಡಿ ನಿರ್ಮಾಣ: ವಾಹನ ಸಂಚಾರ ಅಸ್ತವ್ಯಸ್ತ

ನಗರದ ಪ್ರಮುಖ ರಸ್ತೆಯೊಂದರಲ್ಲಿ ಇದ್ದಕ್ಕಿದ್ದಂತೆ ಭೂಮಿ ಕುಸಿದು ಗುಂಡಿ ನಿರ್ಮಾಣವಾದ ಪರಿಣಾಮ ಭಾರೀ ಪ್ರಮಾಣ ಸಂಚಾರ ದಟ್ಟಣೆ ಎದುರಾಗಿ ವಾಹನ ಸವಾರರು ಹೈರಾಣಾದ ಘಟನೆ ಗುರುವಾರ ನಡೆಯಿತು.
ಜೆಸಿ ರಸ್ತೆಯಲ್ಲಿ ಭೂಮಿ ಕುಸಿದಿರುವುದು.
ಜೆಸಿ ರಸ್ತೆಯಲ್ಲಿ ಭೂಮಿ ಕುಸಿದಿರುವುದು.

ಬೆಂಗಳೂರು: ನಗರದ ಪ್ರಮುಖ ರಸ್ತೆಯೊಂದರಲ್ಲಿ ಇದ್ದಕ್ಕಿದ್ದಂತೆ ಭೂಮಿ ಕುಸಿದು ಗುಂಡಿ ನಿರ್ಮಾಣವಾದ ಪರಿಣಾಮ ಭಾರೀ ಪ್ರಮಾಣ ಸಂಚಾರ ದಟ್ಟಣೆ ಎದುರಾಗಿ ವಾಹನ ಸವಾರರು ಹೈರಾಣಾದ ಘಟನೆ ಗುರುವಾರ ನಡೆಯಿತು.

ಬೆಂಗಳೂರಿನ ಹೃದಯ ಭಾಗದಲ್ಲಿರುವ ಜೆಸಿ ರಸ್ತೆಯ ಮಧ್ಯದಲ್ಲಿ ಬೃಹತ್ ಪ್ರಮಾಣ ಗುಂಡಿಯೊಂದು ಕಂಡು ಬಂದಿತು. ಇದರಿಂದ ಸಾರ್ವಜನಿಕರು ಮತ್ತು ವಾಹನ ಸವಾರರು ಕಕ್ಕಾಬಿಕ್ಕಿಯಾಗುವಂತೆ ಮಾಡಿತು. ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಅಪಾಯಗಳೂ ಸಂಭವಿಸಲಿಲ್ಲ.

ಜಯನಗರ, ಬಸವನಗುಡಿ ಕಡೆಯಿಂದ ಕಾರ್ಪೋರೇಷನ್ ಮಾರ್ಗವಾಗಿ ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ, ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಜೆಸಿ ರಸ್ತೆ ವಾಹನ ದಟ್ಟಣೆಯ ರಸ್ತೆಯಾಗಿದೆ. ಏಕಾಏಕಿ ಭೂಕುಸಿತದಿಂದ ಸಾರ್ವಜನಿಕರು ಮತ್ತು ವಾಹನ ಸವಾರರಲ್ಲಿ ಆತಂಕ ಮೂಡಿಸಿತ್ತು. ಅಲ್ಲದೇ, ಮಧ್ಯಾಹ್ನದಿಂದ ಸಂಜೆಯವರೆಗೆ ವಾಹನ ದಟ್ಟಣೆಯಿಂದ ಸಂಚಾರಿ ಪೊಲೀಸರು ಪರದಾಡುವಂತಾಗಿತ್ತು. ಬ್ಯಾರಿಕೇಡ್ ಗಳನ್ನು ಹಾಕಿ ವಾಹನಗಳು ಘಟನಾ ಸ್ಥಳದಿಂದ ದೂರದಲ್ಲಿ ಸಾಗಲು ಅವಕಾಶ ಮಾಡಿಕೊಟ್ಟಿದ್ದರು.

ವಿಚಾರ ತಿಳಿಯುತ್ತಿದ್ದಂತೆಯೇ ಬೆಂಗಳೂರು ಜಲಮಂಡಳಿ ಮತ್ತು ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದರು. ನೀರಿನ ಸೋರಿಕೆಯಿಂದಾಗಿ ಭೂಮಿ ಕುಸಿದಿದೆ, ಆದರೆ ನೀರು ಎಲ್ಲಿಂದ ಬರುತ್ತಿದೆ ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ. ಆಸುಪಾಸಿನಲ್ಲಿ ಚರಂಡಿ, ನೀರಿನ ಪೈಪ್ ಲೈನ್ ಗಳಿಲ್ಲದಿದ್ದರೂ ಮಣ್ಣು ತೇವವಾಗಿದ್ದು, ಜೆಸಿಬಿ ಬಳಸಿ ಮಣ್ಣು ಅಗೆದು ಸಮತಟ್ಟುಗೊಳಿಸಿದಾಗ ನೀರು ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ನಡುವೆ ತಡರಾತ್ರಿ ಬಿಬಿಎಂಪಿ ಅಧಿಕಾರಿಗಳು ಗುಂಡಿಯನ್ನು ಮುಚ್ಚುವ ಕಾರ್ಯದಲ್ಲಿ ನಿರತರಾಗಿದ್ದರು. ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿದ್ದ ಹಿನ್ನೆಯಲ್ಲಿ ಕೆಲ ಕಾಲ ಸಂಚಾರ ದಟ್ಟಣೆ ಎದುರಾಗಿತ್ತು.

ಬಿಬಿಎಂಪಿ ದಕ್ಷಿಣ ವಲಯದ ಮುಖ್ಯ ಇಂಜಿನಿಯರ್ ಪಿ ರಾಜೀವ್ ಮಾತನಾಡಿ, ನೀರು ಸೋರಿಕೆಯಿಂದ ರಸ್ತೆಯಲ್ಲಿ ಗುಂಡಿ ಬಿದ್ದಿದೆ. ದುರಸ್ತಿ ಕಾರ್ಯ ಮಾಡುವ ಮೊದಲು ಬಿಡಬ್ಲ್ಯುಎಸ್‌ಎಸ್‌ಬಿ ಸಮಸ್ಯೆಯನ್ನು ಪರಿಹರಿಸಬೇಕಿದೆ ಎಂದು ಹೇಳಿದ್ದಾರೆ.

ಕುಡಿಯುವ ನೀರಿನ ಪೈಪ್‌ಲೈನ್‌ನಂತೆ ಚರಂಡಿಯು 500-600 ಮೀಟರ್ ದೂರದಲ್ಲಿದೆ. ಗುಂಡಿ ಬಿದ್ದ ಭೂಮಿಯನ್ನು ತುಂಬಿಸಿ, ನೆಲವನ್ನು ಸಮತಟ್ಟು ಮಾಡಿ ಡಾಂಬರು ಹಾಕುವುದು ಆರಂಭಿಕ ಯೋಜನೆಯಾಗಿತ್ತು. ಶುಕ್ರವಾರ ಬೆಳಗಿನ ಜಾವದ ವೇಳೆಗೆ ಗುಂಡಿ ಮುಚ್ಚುವ ಕಾರ್ಯ ಪೂರ್ಣಗೊಳ್ಳಬೇಕಿತ್ತು. ದುರಸ್ತಿ ಕಾರ್ಯ ನಡೆಸುವ ವೇಳೆ ಸ್ಥಳವನ್ನು ಜೆಸಿಬಿ ಮೂಲಕ ಅಗೆದು ನೋಡಿದಾಗ ನೀರು ಪತ್ತೆಯಾಗಿತ್ತು. ಸ್ಥಳ ಇದೀಗ ಬಾವಿಯಂತಾಗಿದೆ. ನೀರು ಸೋರಿಕೆಯನ್ನು ಸರಿಪಡಿಸುವವರೆಗೆ ದುರಸ್ತಿ ಕಾರ್ಯ ನಡೆಸಲಾಗದಲು ಎಂದು ಬಿಬಿಎಂಪಿ ಎಂಜಿನಿಯರ್ ತಿಳಿಸಿದರು.

ಒಂದು ವರ್ಷದ ಹಿಂದೆ ಈ ರಸ್ತೆಯಲ್ಲಿ ಡಾಂಬರೀಕರಣ ನಡೆಸಲಾಗಿತ್ತು. ಡಾಂಬರೀಕರಣ ಬಳಿಕ ಇಂತಹ ಘಟನೆ ನಡೆದಿರುವುದು ಇದೇ ಮೊದಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com