ರಾಜ್ಯದಲ್ಲಿ ಮತ್ತೊಮ್ಮೆ ಸಿಎಂ ಬದಲಾವಣೆ?: ಹುದ್ದೆ, ಪದವಿ ಶಾಶ್ವತವಲ್ಲ; ಕ್ಷೇತ್ರದ ಜನತೆ ಎದುರು ಗದ್ಗದಿತರಾದ ಬೊಮ್ಮಾಯಿ

ರಾಜ್ಯದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಗಳ ಬದಲಾವಣೆಗೆ ವೇದಿಕೆ ಸಜ್ಜುಗೊಳ್ಳುತ್ತಿದೆಯೇ? ಇಂಥಹದ್ದೊಂದು ಊಹಾಪೋಹಗಳಿಗೆ ಸ್ವತಃ ಸಿಎಂ ಬೊಮ್ಮಾಯಿ ಅವರ ಹೇಳಿಕೆ ದಾರಿ ಮಾಡಿಕೊಟ್ಟಿದೆ. 
ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
Updated on

ಹಾವೇರಿ: ರಾಜ್ಯದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಗಳ ಬದಲಾವಣೆಗೆ ವೇದಿಕೆ ಸಜ್ಜುಗೊಳ್ಳುತ್ತಿದೆಯೇ? ಇಂಥಹದ್ದೊಂದು ಊಹಾಪೋಹಗಳಿಗೆ ಸ್ವತಃ ಸಿಎಂ ಬೊಮ್ಮಾಯಿ ಅವರ ಹೇಳಿಕೆ ದಾರಿ ಮಾಡಿಕೊಟ್ಟಿದೆ. 

ತಮ್ಮ ಕ್ಷೇತ್ರ ಶಿಗ್ಗಾಂವ್ ನ ಜನತೆಯನ್ನುದ್ದೇಶಿಸಿ ಭಾವುಕರಾಗಿ ಮಾತನಾಡಿರುವ ಸಿಎಂ ಬೊಮ್ಮಾಯಿ, ಈ ಪ್ರಪಂಚದಲ್ಲಿ ಹುದ್ದೆಗಳು, ಸ್ಥಾನಗಳು ಸೇರಿದಂತೆ ಯಾವುದೂ ಶಾಶ್ವತವಲ್ಲ ಎಂಬ ಮಾತನ್ನು ಹೇಳಿದ್ದಾರೆ. ಇದು ಹಲವಾರು ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದೆ.
 
ಈ ಪ್ರಪಂಚದಲ್ಲಿ ಯಾವುದೂ ಶಾಶ್ವತವಲ್ಲ. ಈ ಜೀವನವೇ ಶಾಶ್ವತವಲ್ಲ. ಈ ಸ್ಥಿತಿಯಲ್ಲಿ ಎಷ್ಟು ಕಾಲ ಹೀಗೆಯೇ ಇರುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ಈ ಹುದ್ದೆ, ಸ್ಥಾನಮಾನಗಳೆಲ್ಲವೂ ಖಾಯಂ ಅಲ್ಲ. ಈ ಸತ್ಯ ನನಗೆ ಪ್ರತಿ ಕ್ಷಣದಲ್ಲೂ ಅರಿವಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ. 

ತಮ್ಮ ಕ್ಷೇತ್ರದ ಜನತೆಗೆ ಕೃತಜ್ಞತೆ ತಿಳಿಸಿರುವ ಬೊಮ್ಮಾಯಿ, ಕ್ಷೇತ್ರದ ಜನತೆಗೆ ನಾನು ಬಸವರಾಜ್ ಅಷ್ಟೇ, ಸಿಎಂ ಅಲ್ಲ ಎಂದು ಹೇಳಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಅವರ ಪುತ್ಥಳಿ ಉದ್ಘಾಟನೆಯ ನಂತರ ಸಿಎಂ ಜನತೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. 

"ಶಿಗ್ಗಾಂವ್ ನಿಂದ ಹೊರಭಾಗದಲ್ಲಿ ಈ ಹಿಂದೆ ನಾನು ಗೃಹ ಸಚಿವ, ನೀರಾವರಿ ಸಚಿವನಾಗಿದ್ದೆ ಆದರೆ ಕ್ಷೇತ್ರದಲ್ಲಿ ನಿಮ್ಮೆಲ್ಲರಿಗೂ ಕೇವಲ ಬಸವರಾಜನಾಗಿದ್ದೆ. ಇಂದು ಸಿಎಂ ಆಗಿದ್ದುಕೊಂಡು ಹೇಳುತ್ತಿದ್ದೇನೆ. ಹೊರಗಡೆ ತೆರಳಿದಾಗ ನಾನು ಮುಖ್ಯಮಂತ್ರಿ ಇರಬಹುದು, ಕ್ಷೇತ್ರದಲ್ಲಿ ನಿಮ್ಮ ನಡುವೆ ನಾನು ಬಸವರಾಜ ಬೊಮ್ಮಾಯಿ, ಬಸವರಾಜ್ ಎಂಬ ಹೆಸರು ಶಾಶ್ವತ ಅದರ ಮುಂದೆ ಇರುವ ಪದವಿ ಶಾಶ್ವತವಲ್ಲ ಎಂದು ಬೊಮ್ಮಾಯಿ ತಿಳಿಸಿದ್ದಾರೆ. ಕೆಲವು ಊಹಾಪೋಹಗಳ ಪ್ರಕಾರ ಸಿಎಂ ಬಸವರಾಜ ಬೊಮ್ಮಾಯಿ ಬದಲಾವಣೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. 

ಮಂಡಿ ನೋವಿನಿಂದ ಬಳಲುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲಿದ್ದಾರೆ ಎಂಬ ಸುದ್ದಿಯೂ ಇದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯೂ ಲಭ್ಯವಾಗಿಲ್ಲ.

ಎರಡು ಬಾರಿ ಭಾವುಕರಾದ ಸಿಎಂ ಬೊಮ್ಮಾಯಿ ಕ್ಷೇತ್ರದಲ್ಲಿ ಮಂದಿ ತಮಗೆ ವಿಶ್ವಾಸದಿಂದ ರೊಟ್ಟಿ (ಜೋಳದ ರೊಟ್ಟಿ) ನವಣೆ ಬಡಿಸುತ್ತಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ. 

ನನಗೆ ಹೇಳುವುದಕ್ಕೆ ದೊಡ್ಡ ದೊಡ್ಡ ಅಂಶಗಳಿಲ್ಲ. ನಿಮ್ಮ ನಿರೀಕ್ಷೆಗೆ ತಕ್ಕಂತೆ ಜೀವಿಸಿದರೆ ಅಷ್ಟು ಸಾಕು, ನಿಮ್ಮ ಪ್ರೀತಿ, ವಿಶ್ವಾಸಗಳಿಗಿಂತಲೂ ಹೆಚ್ಚಿನ, ದೊಡ್ಡ ಅಧಿಕಾರ ಇಲ್ಲ ಎಂದು ನಂಬಿರುವವನು ನಾನು. ಭಾವುಕನಾಗಿ ಮಾತನಾಡಬಾರದು ಎಂದು ಸಾಧ್ಯವಾದಷ್ಟೂ ಯತ್ನಿಸುತ್ತೇನೆ, ಕೆಲವೊಮ್ಮೆ ನಿಮ್ಮನ್ನೆಲ್ಲಾ ನೋಡಿ ಭಾವುಕನಾಗುತ್ತೇನೆ ಎಂದು ಸಿಎಂ ಗದ್ಗದಿತರಾಗಿ ನುಡಿದಿದ್ದಾರೆ. 

ತಮ್ಮ ಹೆಗಲ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಬೇಕಿದೆ. ತಮ್ಮ ಪ್ರತಿ ಕೆಲಸಗಳಲ್ಲಿಯೂ ತಮ್ಮ ಆತ್ಮಸಾಕ್ಷಿಯು ಜಾಗೃತವಾಗಿರುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com