ಕಮಲ್ ಪಂತ್
ಕಮಲ್ ಪಂತ್

ಒತ್ತಾಯದ ಬಂದ್‌ಗೆ ಅವಕಾಶವಿಲ್ಲ: ಬೆಂಗಳೂರು ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಎಚ್ಚರಿಕೆ

ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಡಿಸೆಂಬರ್ 31ರ ಕರ್ನಾಟಕ ಬಂದ್ ವೇಳೆ ಒತ್ತಾಯದ ಬಂದ್‌ಗೆ ಅವಕಾಶ ನೀಡುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.
Published on

ಬೆಂಗಳೂರು: ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಡಿಸೆಂಬರ್ 31ರ ಕರ್ನಾಟಕ ಬಂದ್ ವೇಳೆ ಒತ್ತಾಯದ ಬಂದ್‌ಗೆ ಅವಕಾಶ ನೀಡುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ ಬಂದ್‌ ಬಗ್ಗೆ ನಮಗೆ ಮಾಹಿತಿ ಇಲ್ಲ. ಈ ವಿಚಾರವಾಗಿ ಈವರೆಗೂ ಯಾರೊಬ್ಬರೂ ನಮ್ಮನ್ನು ಸಂಪರ್ಕಿಸಿಲ್ಲ. ನಾಗರಿಕರು ಸ್ವ ಇಚ್ಛೆಯಿಂದ ಬಂದ್‌ಗೆ ಸಹಕರಿಸಿದರೆ ನಮ್ಮ ಅಭ್ಯಂತರವಿಲ್ಲ. ಆದರೆ ಬಂದ್ ಮಾಡುವಂತೆ ಬಲವಂತಪಡಿಸಿದರೆ, ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸಿದರೆ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯ. ಇದಕ್ಕೆ ಅಗತ್ಯ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಅಂತೆಯೇ ‘ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಗೆ ಅವಕಾಶ ಇಲ್ಲ ಎಂದ ಅವರು,  'ಸರ್ಕಾರದ ಆದೇಶದಲ್ಲೇ ಇದನ್ನು ಸ್ಪಷ್ಟಪಡಿಸಲಾಗಿದೆ. ಪಬ್‌ ಹಾಗೂ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳಲ್ಲಿ ಒಟ್ಟು ಆಸನ ಸಾಮರ್ಥ್ಯದ ಶೇ 50 ರಷ್ಟು ಮಂದಿಗೆ ಮಾತ್ರ ಅವಕಾಶವಿದೆ. ಅಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ಹೋದ ವರ್ಷದ ಹಾಗೆ ಅದಕ್ಕೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಾಗುತ್ತದೆ. ಕೆಲ ಷರತ್ತುಗಳನ್ನೂ ವಿಧಿಸಲಾಗುತ್ತದೆ. ನಿಷೇಧಾಜ್ಞೆಯನ್ನೂ ಜಾರಿಗೊಳಿಸಲಾಗುತ್ತದೆ. ಹೋಟೆಲ್‌, ಪಬ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳಲ್ಲಿ ನಿಗದಿಯಾಗಿರುವ ಪಾರ್ಟಿಗಳಿಗೆ ಮುಂಗಡ ಬುಕ್ಕಿಂಗ್‌ ಮಾಡಿರುವವರಿಗೆ ಪಾರ್ಟಿಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೆ. ಅವರು ಅಗತ್ಯ ದಾಖಲೆಗಳನ್ನು ತೋರಿಸಬೇಕಾಗುತ್ತದೆ. ನಮ್ಮ ಅಧಿಕಾರಿಗಳು ಈಗಾಗಲೇ ಕ್ಲಬ್‌ ಹಾಗೂ ಪಬ್‌ ಮಾಲೀಕರ ಜೊತೆ ಮಾತುಕತೆ ನಡೆಸಿದ್ದಾರೆ. ಸೋಮವಾರ ಅಥವಾ ಮಂಗಳವಾರ ಹೊಸ ಆದೇಶ ಹೊರಡಿಸಲಾಗುತ್ತದೆ’ ಎಂದು ವಿವರಿಸಿದರು.

ಹಾಟ್ ಸ್ಪಾಟ್ ಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಇನ್ನು ಹೊಸ ವರ್ಷಾಚರಣೆಯ ಹಾಟ್ ಸ್ಪಾಟ್ ಗಳಾಗಿರುವ ಚರ್ಚ್‌ಸ್ಟ್ರೀಟ್‌ ಹಾಗೂ ಬ್ರಿಗೇಡ್‌ ರಸ್ತೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಇರಲಿದೆ. ಕಚೇರಿ, ವಿಮಾನ ನಿಲ್ದಾಣ, ರೈಲ್ವೆ ಹಾಗೂ ಬಸ್‌ ನಿಲ್ದಾಣಗಳಿಗೆ ಹೋಗುವವರು ಅಗತ್ಯ ದಾಖಲೆಗಳನ್ನು ತೋರಿಸಬೇಕಾಗುತ್ತದೆ’ ಎಂದು ತಿಳಿಸಿದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com