ಆರೋಗ್ಯ ವಲಯದ ಮೂಲಸೌಕರ್ಯ ಮೇಲ್ದರ್ಜೆಗೇರಿಕೆಗೆ ಕ್ರಮ: ಡಿಸಿಎಂ ಅಶ್ವತ್ಥನಾರಾಯಣ

ವೈದ್ಯ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ. ಅದರಲ್ಲೂ ಇಷ್ಟು ಜನ ವೈದ್ಯರ ಜತೆ ನಾನೂ ವೈದ್ಯನಾಗಿ ಇರುವುದು ಸಂತೋಷ ಹೆಚ್ಚಿಸಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಭಾವುಕರಾಗಿ ಹೇಳಿದರು.
ಡಿಸಿಎಂ ಅಶ್ವಥ್ ನಾರಾಯಣ
ಡಿಸಿಎಂ ಅಶ್ವಥ್ ನಾರಾಯಣ
Updated on

ಬೆಂಗಳೂರು: ವೈದ್ಯ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ. ಅದರಲ್ಲೂ ಇಷ್ಟು ಜನ ವೈದ್ಯರ ಜತೆ ನಾನೂ ವೈದ್ಯನಾಗಿ ಇರುವುದು ಸಂತೋಷ ಹೆಚ್ಚಿಸಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಭಾವುಕರಾಗಿ ಹೇಳಿದರು.

ಸ್ವತಃ ವೈದ್ಯರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ವೈದ್ಯರ ದಿನಾಚರಣೆ ನಿಮಿತ್ತ ವೈದ್ಯರಲ್ಲಿ ವೈದ್ಯರಾಗಿಯೇ ಶುಭ ಕೋರಿ ಸಂಭ್ರಮಿಸಿದ ಪ್ರಸಂಗ ನಗರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಜರುಗಿತು. 'ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ವೈದ್ಯರು ಒತ್ತಡದಲ್ಲಿದ್ದಾರೆಂಬುದು ನಿಜ. ಹಗಲಿರುಳೆನ್ನದೆ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಸೋಂಕಿಗೆ ಎದೆಯೊಡ್ಡಿ ಪ್ರಾಣಗಳನ್ನು ಕಾಪಾಡುತ್ತಿದ್ದಾರೆ. "ವೈದ್ಯೋ ನಾರಾಯಣ ಹರಿ" ಎಂಬ ಮಾತು ಸಾಕ್ಷಾತ್ಕಾರವಾಗಿದೆ ಎಂದು ಅವರು ಹೇಳಿದರು.

ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಅವರ ಕಷ್ಟ-ಸುಖಗಳನ್ನು ಆಲಿಸಿದರು. ಯಾವುದೇ ಶಿಷ್ಟಾಚಾರಕ್ಕೆ ಅವಕಾಶವಿಲ್ಲದೆ, ಉಪ ಮುಖ್ಯಮಂತ್ರಿ ಎಂಬ ಸಂಗತಿಯನ್ನು ಬದಿಗಿಟ್ಟು ವೈದ್ಯರೊಂದಿಗೆ ಮುಕ್ತವಾಗಿ ಬೆರೆತ ಅವರು, ಪ್ರತಿಯೊಬ್ಬರನ್ನೂ ಮಾತನಾಡಿಸಿ ಆತ್ಮೀಯತೆಯಿಂದ ಅವರ ವಿಚಾರಗಳನ್ನು,  ಮನವಿಗಳನ್ನು ಕೇಳಿಸಿಕೊಂಡರು. ಸಿಬ್ಬಂದಿ ಮತ್ತು ವೈದ್ಯರ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ವೈದ್ಯರು ಮತ್ತು ಜನರಿಗೆ ಅನುಕೂಲವಾಗುವಂತೆ ರಾಜ್ಯದ ಆರೋಗ್ಯ ಮೂಲಸೌಕರ್ಯಗಳನ್ನು ಆಮೂಲಾಗ್ರವಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಹೆಚ್ಚುವರಿಯಾಗಿ ಸುಮಾರು 1,500 ಕೋಟಿ ರೂ. ವೆಚ್ಚದಲ್ಲಿ  ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಿಂದ ಮೊದಲುಗೊಂಡು ತಾಲೂಕು-ಜಿಲ್ಲಾಸ್ಪತ್ರೆಗಳ ಸೌಲಭ್ಯಗಳನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದೆ ಎಂದರು.

ತಂತ್ರಜ್ಞಾನ ಅಭಿವೃದ್ಧಿ, ಮೂಲಸೌಕರ್ಯ, ವೈದ್ಯರು ಮತ್ತು ಸಿಬ್ಬಂದಿ ನೇಮಕ ಮತ್ತಿತರೆ ಉದ್ದೇಶಕ್ಕಾಗಿ ಈ ಮೊತ್ತವನ್ನು ವಿನಿಯೋಗ ಮಾಡಲಾಗುತ್ತಿದೆ. ಪ್ರತೀ ತಾಲೂಕು ಆಸ್ಪತ್ರೆಯ್ಲಿ ಕೊನೆಪಕ್ಷ 25 ಐಸಿಯು ಬೆಡ್ಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ಇದರ ಜತೆಗೆ ಪ್ರತಿ ವಿಧಾನಸಭಾ  ಕ್ಷೇತ್ರದಲ್ಲೂ 100 ಹಾಸಿಗೆಗಳ ಆಸ್ಪತ್ರೆಯನ್ನು ಹಾಗೂ ಪ್ರತೀ ನಾಲ್ಕು ಕ್ಷೇತ್ರಗಳಿಗೊಂದು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಆರಂಭಿಸಲಾಗುವುದು. ಎಲ್ಲರಿಗೂ ಸುಲಭವಾಗಿ, ಕಡಿಮೆ ದರದಲ್ಲಿ ಆರೋಗ್ಯ ಸೌಲಭ್ಯ ಸಿಗಬೇಕು. ಈ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಂಡಿದೆ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.

ಕಳೆದ ಮೇ 5ರಂದು ರಾತ್ರಿ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾದಾಗ ಇಡೀ ರಾತ್ರಿ ಇಡೀ ವೈದ್ಯರ ತಂಡ, ಸಿಬ್ಬಂದಿ ಸೋಂಕಿತರ ಕಾಳಜಿ ವಹಿಸಿದ್ದ ಘಟನೆಯನ್ನು ಸ್ಮರಿಸಿದ ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರು, ಅಂದು ಕರ್ತವ್ಯದಲ್ಲಿದ್ದು ಸೋಂಕಿತರ ಪ್ರಾಣ ರಕ್ಷಣೆ ಮಾಡಿದ ಎಲ್ಲರಿಗೂ  ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೆ.ಸಿ ಜನರಲ್ ಆಸ್ಪತ್ರೆ ಅಧೀಕ್ಷಕ ಡಾ.ವೆಂಕಟೇಶಯ್ಯ, ಡಾ. ಮೋಹನ್ ಸೇರಿದಂತೆ ಎಲ್ಲ ವೈದ್ಯರು, ಸಿಬ್ಬಂದಿ ಹಾಜರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com