ಹಾಸನ: ಸ್ನೇಹಿತರೊಂದಿಗೆ ಬೇಟೆಗೆ ತೆರಳಿದ್ದ ಯುವಕ ಸಾವು, ರಕ್ತಸಂಬಂಧಿ ಮೇಲೆ ಕೊಲೆ ಶಂಕೆ
ಹಾಸನ: ಬೇಲೂರು ತಾಲ್ಲೂಕಿನ ಕೋಗಿಲೆಮನೆ ಬಳಿಯ ಕಲ್ಲಹಳ್ಳಿ ಕಾಡಿನಲ್ಲಿ ನಿನ್ನೆ ರಾತ್ರಿ ಬೇಟೆಗೆ ತೆರಳಿದ್ದ 24 ವರ್ಷದ ಯುವಕ ನಿಗೂಢವಾಗಿ ಮೃತಪಟ್ಟಿದ್ದಾನೆ.
ಮೃತನನ್ನು ಬೇಲೂರು ತಾಲ್ಲೂಕಿನ ಕುಶಾವರ ಗ್ರಾಮದ ಮಧು ಎಂದು ಗುರುತಿಸಲಾಗಿದೆ. ಕಾಡುಹಂದಿ, ಮೊಲ ಬೇಟೆಯಾಡಲು ಮಧು ತನ್ನ ಸ್ನೇಹಿತರಾದ ಬಿಕ್ಕೋಡು ಗ್ರಾಮದ ಸಾಂಗ್ಲಿಯಾನ ಮತ್ತು ಮಲ್ಲಿಕಾರ್ಜುನ ಜೊತೆ ಕಾಡಿಗೆ ತೆರಳಿದ್ದಾಗ ಘಟನೆ ಸಂಭವಿಸಿದೆ.
ಪೊಲೀಸರ ಪ್ರಕಾರ, ಕೋಗಿಲೆಮನೆ ಬಳಿ ಕಾಯುತ್ತಿದ್ದ ತನ್ನ ಸ್ನೇಹಿತರನ್ನು ಮಧು ಶಸ್ತ್ರಾಸ್ತ್ರಗಳೊಂದಿಗೆ ಸೇರಿಕೊಂಡಿದ್ದಾನೆ. ಮೂವರು ಸಂಜೆ 7.45ರ ಸುಮಾರಿಗೆ ಅರಣ್ಯವನ್ನು ಪ್ರವೇಶಿಸಿ ಅರ್ಧ ಘಂಟೆಯವರೆಗೆ ಕಾಡು ಪ್ರಾಣಿಗಳನ್ನು ಹುಡುಕ ತೊಡಗಿದ್ದಾರೆ. ಆಕಸ್ಮಿಕವಾಗಿ ತನ್ನ ಬಂದೂಕಿನಿಂದ ಗುಂಡು ಹಾರಿಸಿದ ನಂತರ ಆತ ಕುಸಿದು ಬಿದ್ದಿದ್ದಾನೆ ಎಂದು ಮಧು ಸ್ನೇಹಿತರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಮಧುವನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆತ ಮೃತಪಟ್ಟಿದ್ದಾನೆ. ಮಧು ತನ್ನ ಸ್ನೇಹಿತರೊಂದಿಗೆ ಭೇಟಿಯಾಗಲು ಬೇಲೂರಿಗೆ ಹೋಗುತ್ತಿರುವುದಾಗಿ ಪೋಷಕರಿಗೆ ತಿಳಿಸಿರುವುದಾಗಿ ವರದಿಯಾಗಿದೆ.
ಕೊಲೆ ಎಂದು ಶಂಕಿಸಿರುವ ಮಧು ಪೋಷಕರು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಒತ್ತಾಯಿಸಿ ಹಳೇಬಿಡು ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಸಾಂಗ್ಲಿಯಾನಾ ಮತ್ತು ಮಲ್ಲಿಕಾರ್ಜುನ್ ನನ್ನು ಹೆಚ್ಚಿನ ತನಿಖೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಐಟಿಐ ಪ್ರಮಾಣಪತ್ರ ಹೊಂದಿರುವ ಮಧು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಕಂಪನಿಗೆ ಬೀಗ ಹಾಕಿದ್ದರಿಂದ ತಮ್ಮ ಗ್ರಾಮಕ್ಕೆ ಮರಳಿದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ನಾಲ್ಕು ಎಕರೆ ಭೂಮಿಯಲ್ಲಿ ಶುಂಠಿ ಬೆಲೆ ಬೆಳೆಯುತ್ತಿದ್ದು ಕೃಷಿ ಚಟುವಟಿಕೆಗಳಲ್ಲಿ ಮಧು ತಂದೆಗೆ ಸಹಾಯ ಮಾಡುತ್ತಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ