

ಬೆಂಗಳೂರು: ರಾಜ್ಯ ಸರ್ಕಾರ ಉದ್ದೇಶಿತ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ಅತಿ ಶೀಘ್ರದಲ್ಲಿ ಕಾರ್ಯಾರಂಭ ಮಾಡಲು ಕ್ರಿಯಾಯೋಜನೆ ಸಿದ್ಧಪಡಿಸುವ ಕುರಿತಂತೆ ಕಾನೂನು ತಜ್ಞರು ಮತ್ತು ತಾಂತ್ರಿಕ ಪರಿಣಿತರ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಾರಾಂತ್ಯದಲ್ಲಿ ಚರ್ಚೆ ನಡೆಸಲಿದ್ದಾರೆಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಅವರು ಬುಧವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ರಾಜ್ಯದ ಪಾಲಿಗೆ ಮೇಕೆದಾಟು ಯೋಜನೆ ಮಹತ್ವದ್ದಾಗಿದೆ. ಯೋಜನೆಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟಿನಲ್ಲಿ ಮಿಸಲೇನಿಯಸ್ ಅರ್ಜಿ ಮಾತ್ರ ಬಾಕಿ ಇದೆ’ ಎಂದು ಹೇಳಿದ್ದಾರೆ.
ಯೋಜನೆಯ ಅನುಷ್ಠಾನಕ್ಕೆ ಯಾವ ಯಾವ ಒಪ್ಪಿಗೆ ಪಡೆಯಬೇಕು, ಮುಂದೆ ಯಾವ ರೀತಿ ಹೋಗಬೇಕು ಎಂಬ ಬಗ್ಗೆ ಕಾನೂನು ಪರಿಣಿತರ ಜೊತೆ ಚರ್ಚಿಸಿ, ಮುಖ್ಯಮಂತ್ರಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ‘ಕಾವೇರಿ ನೀರು ನಿರ್ವಹಣೆಯಲ್ಲಿ ಮುಖ್ಯ ಪಾತ್ರವಹಿಸುವ ಭವಿಷ್ಯದ ಯೋಜನೆ ಮತ್ತು ಸಂಕಷ್ಟದ ಸಂದರ್ಭದಲ್ಲಿ ನೀರು ಹಂಚಿಕೆಯಲ್ಲಿ ಮಹತ್ವದ ಪಾತ್ರವಹಿಸುವ ಸಮಾನಾಂತರ ಅಣೆಕಟ್ಟು ಇದಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಮುಂಗಾರು ಅಧಿವೇಶನ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಇದೂವರೆಗೂ ಯಾವುದೇ ರೀತಿಯ ನಿರ್ಧಾರವಾಗಿಲ್ಲ. ಮುಖ್ಯಮಂತ್ರಿಗಳ ಜತೆ ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಬಳಿಕ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಕೇಂದ್ರ ಸಚಿವ ಸಂಪುಟದಲ್ಲಿ ಯಾರು ಇರುತ್ತಾರೆ, ಯಾರು ಇರುವುದಿಲ್ಲ ಎಂಬ ಮಾಹಿತಿ ನನ್ನ ಬಳಿ ಇಲ್ಲ. ಆದರೆ, ಕರ್ನಾಟಕಕ್ಕೆ ಒಳ್ಳೆಯ ಪ್ರಾತಿನಿಧ್ಯತೆ ಸಿಗುವ ವಿಶ್ವಾಸ ಇದೆ ಎಂದಿದ್ದಾರೆ.