ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಗೆ 4-6 ವಾರಗಳಲ್ಲಿ ಡಬ್ಲ್ಯೂಹೆಚ್​ಒ ಅನುಮತಿ ಸಾಧ್ಯತೆ: ತಜ್ಞರು

ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಾಕ್ಸಿನ್ ಲಸಿಕೆಗೆ 4-6 ವಾರಗಳಲ್ಲಿ ಡಬ್ಲ್ಯೂಹೆಚ್ಒ ಅನುಮತಿ ಸಿಗುವ ಸಾಧ್ಯತೆಗಳಿವೆ ಎಂದು ತಜ್ಞರು ಹೇಳಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಾಕ್ಸಿನ್ ಲಸಿಕೆಗೆ 4-6 ವಾರಗಳಲ್ಲಿ ಡಬ್ಲ್ಯೂಎಚ್​ಒ ಅನುಮತಿ ಸಿಗುವ ಸಾಧ್ಯತೆಗಳಿವೆ ಎಂದು ತಜ್ಞರು ಹೇಳಿದ್ದಾರೆ. 

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಕೋವ್ಯಾಕ್ಸಿನ್​ನ ಮೂರನೇ ಹಂತದ ಪ್ರಯೋಗ ಫಲಿತಾಂಶದ ವಿವರಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ಧಾರೆ.

ವಿಜ್ಞಾನ ಮತ್ತು ಪರಿಸರ ಕೇಂದ್ರ (ಸಿಎಸ್‌ಇ) ಶುಕ್ರವಾರ ಆಯೋಜಿಸಿದ್ದ ವೆಬ್‌ನಾರ್'ನಲ್ಲಿ ಮಾತನಾಡಿರುವ ಡಾ.ಸ್ವಾಮಿನಾಥನ್ ಅವರು, ಕಂಪನಿಯು ತನ್ನ ಹಂತ -3 ಪ್ರಯೋಗಗಳನ್ನು ಪೂರ್ಣಗೊಳಿಸಬೇಕಾಗಿದೆ ಮತ್ತು ಲಸಿಕೆಯ ಸಂಪೂರ್ಣ ಡೋಸ್'ನ್ನು ವಿಶ್ವ ಆರೋಗ್ಯ ಸಂಸ್ಥೆ. ನಿಯಂತ್ರಕ ವಿಭಾಗಕ್ಕೆ ಸಲ್ಲಿಸಬೇಕು. ಬಳಿಕ ಇದನ್ನು ತಜ್ಞರ ಸಲಹಾ ತಂಡ ಸುರಕ್ಷತೆ ಮತ್ತು ಪರಿಣಾಮಕಾರಿಯನ್ನು ಪರಿಶೀಲನೆ ನಡೆಸುತ್ತದೆ. ಉತ್ಪಾದನಾ ಗುಣಮಟ್ಟತೆ ಸೇರಿದಂತೆ ಇತರೆ ಮಾನದಂಡಗಳು ಆಧಾರದ ಮೇಲೆ ಲಸಿಕೆಗೆ ಅನುಮೋದನೆಯನ್ನು ನೀಡಲಾಗುತ್ತದೆ. 

ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಲಸಿಕೆಯು ಈ ಪ್ರಕ್ರಿಯೆಯಲ್ಲಿದ್ದು, ಮುಂದಿನ 4-6 ವಾರಗಳಲ್ಲಿ ಲಸಿಕೆಗೆ ಡಬ್ಲ್ಯೂಹೆಚ್ಒ ಅನುಮೋದನೆ ನೀಡುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ. 

ಕೋವ್ಯಾಕ್ಸಿನ್​​ನ ಮೂರನೇ ಹಂತದ ಟ್ರಯಲ್ ಡಾಟಾವನ್ನು ಗಮನಿಸಿದರೆ ಸರಿ ಇದ್ದಂತಿದೆ. ಕೊರೋನಾ ರೂಪಾಂತರಿ ವೈರಸ್​ಗಳನ್ನೂ ಗಮನದಲ್ಲಿಟ್ಟುಕೊಂಡು ಪ್ರಯೋಗ ಮಾಡಿದಂತಿದೆ. ಲಸಿಕೆಯ ಒಟ್ಟಾರೆ ಕ್ಷಮತೆ ಹೆಚ್ಚಿದೆ. ಡೆಲ್ಟಾ ರೂಪಾಂತರಿ ಎದುರು ಇದರ ಕ್ಷಮತೆ ತುಸು ಕಡಿಮೆ ಇದ್ದರೂ ಪರಿಣಾಮಕಾರಿಯಂತೂ ಇದೆ. ಇದರ ಸುರಕ್ಷತೆಯು ಡಬ್ಲ್ಯೂಎಚ್​ಒ ನಿಗದಿಪಡಿಸಿದ ಗುಣಮಟ್ಟಕ್ಕೆ ತಾಳೆಯಾಗುತ್ತದೆ ಎಂದು ಹೇಳಿದ್ದಾರೆ. 

ವಿಟ್ವಾಟರ್ಸ್‌ರಾಂಡ್ ವಿಶ್ವವಿದ್ಯಾಲಯದ ವ್ಯಾಕ್ಸಿನಾಲಜಿ ಪ್ರಾಧ್ಯಾಪಕ ಮತ್ತು ಎಸ್‌ಎಎಂಆರ್‌ಸಿ ಲಸಿಕೆಗಳು ಮತ್ತು ಸಾಂಕ್ರಾಮಿಕ ರೋಗಗಳ ವಿಶ್ಲೇಷಣಾತ್ಮಕ ಸಂಶೋಧನಾ ಘಟಕದ ನಿರ್ದೇಶಕ ಪ್ರೊ. ಶಬೀರ್ ಎ ಮಾಧಿ ಅವರು ಮಾತನಾಡಿ, ದಕ್ಷಿಣ ಆಫ್ರಿಕಾದಂತಹ ರಾಷ್ಟ್ರಗಳಿಗೆ ಅಗತ್ಯವಿದ್ದಷ್ಟು ಸಂಖ್ಯೆಯ ಕೋವಿಡ್ -19 ಲಸಿಕೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ವಿಶ್ವದಾದ್ಯಂತ ಲಸಿಕೆಗಳ ಅಸಮಾನವ ವಿತರಣೆಯೇ ಇದಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಇದೇವೇಳೆ ಮಾತನಾಡಿದ ಸೌಮ್ಯಾ ಸ್ವಾಮಿನಾಥನ್ ಅವರು, ಕೋವಿಡ್ ಸೋಂಕನ್ನು ತಹಬದಿಗೆ ತರಲು ಲಸಿಕೆ ಪ್ರಮುಖ ಅಸ್ತ್ರ ಎಂಬ ಅಂಶವನ್ನು ಒತ್ತಿ ಹೇಳಿದರು.

ಅಮೆರಿಕಾ ಹೊರತುಪಡಿಸಿ ವಿಶ್ವದ ಉಳಿದ ಬಹುತೇಕ ಭಾಗಗಳಲ್ಲಿ ಕೋವಿಡ್-19 ಪ್ರಕರಣಗಳು ಏರುಗತಿಯಲ್ಲಿವೆ. ಇಲ್ಲಿ ಸಾವಿನ ಸಂಖ್ಯೆಯಲ್ಲೂ ಇಳಿಮುಖವಾಗಿಲ್ಲ ಎಂದು ಆತಂಕ ವ್ಯಕ್ತಪಡಿಸಿದ ಡಬ್ಲ್ಯೂ ಎಚ್ ಒ ಮುಖ್ಯ ವಿಜ್ಞಾನಿ, ಭಾರತದ ಶೇ. 60-70 ಜನಸಂಖ್ಯೆಗಾದರೂ ಪ್ರಾಥಮಿಕ ಲಸಿಕೆ ಹಾಕಬೇಕು ಎಂದು ಸಲಹೆ ನೀಡಿದ್ದಾರೆ.

ಆಫ್ರಿಕಾದಲ್ಲಿ ಕೋವಿಡ್ ರೋಗಕ್ಕೆ ಬಲಿಯಾದವರ ಸಂಖ್ಯೆ ಹೆಚ್ಚುತ್ತಿದೆ. ಡೆಲ್ಟಾ ರೂಪಾಂತರಿ ವೈರಸ್ ಇದಕ್ಕೆ ಕಾರಣವಾಗಿದೆ. ಮೂಲ ವೈರಸ್ ಮೂರು ಮಂದಿಗೆ ಸೋಂಕು ತಗುಲಿಸುತ್ತಿತ್ತು. ಆಧರೆ, ಭಾರತದಲ್ಲಿ ಮೊದಲು ಪತ್ತೆಯಾದ ಡೆಲ್ಟಾ ರೂಪಾಂತರಿ ವೈರಸ್ 6-8 ಮಂದಿಗೆ ಸೋಂಕು ತಗುಲಿಸುವ ಸಾಮರ್ಥ್ಯ ಹೊಂದಿದೆ. ಸಾಮಾಜಿಕವಾಗಿ ಜನರು ಸೇರುತ್ತಿರುವುದು ಹೆಚ್ಚುತ್ತಿದೆ. ಕಟ್ಟುನಿಟ್ಟಿನ ಸಾರ್ವಜನಿಕ ಆರೋಗ್ಯ ಕ್ರಮಗಳನ್ನ ಸಡಿಲಗೊಳಿಸಲಾಗುತ್ತಿದೆ. ಇವೂ ಕೂಡ ಜಾಗತಿಕವಾಗಿ ಕೋವಿಡ್ ಸೋಂಕು ಮತ್ತು ಸಾವು ಹೆಚ್ಚಾಗಲು ಕಾರಣವಾಗಿದೆ. ಹಾಗೆಯೇ, ಲಸಿಕಾಕರಣದ ಪ್ರಮಾಣ ಕಡಿಮೆ ಇರುವುದರಿಂದ ಹೆಚ್ಚಿನ ಜನರು ಸೋಂಕಿಗೆ ಬೇಗ ತುತ್ತಾಗುವ ಅಪಾಯದಲ್ಲಿದ್ದಾರೆ. 

ವೈರಸ್ ಇನ್ನಷ್ಟು ರೂಪಾಂತರಗೊಳ್ಳುತ್ತಾ ಹೋದರೆ ಕೋವಿಡ್ ಪ್ರಕರಣಗಳು ವಿಶ್ವಾದ್ಯಂತ ಇನ್ನೂ ಹೆಚ್ಚಾಗುತ್ತದೆ. ರೂಪಾಂತರಗೊಂಡ ವೈರಸ್ ಮತ್ತೆ ಮರುರೂಪಾಂತರಗೊಳ್ಳುತ್ತಿದೆ. ಈ ರೂಪಾಂತರಿ ವೈರಸ್​ಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಜಾಗತಿಕ ಸಹಭಾಗಿತ್ವಗಳ ಮೂಲಕ ಸಂಶೋಧನೆಗಳನ್ನ ನಡೆಸುವ ಅಗತ್ಯತೆ ಇದೆ. 

ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವ ಕ್ರಮಗಳನ್ನ ಜನರು ತಪ್ಪದೇ ಪಾಲಿಸಬೇಕು. ಶೇ. 70 ಜನಸಂಖ್ಯೆಗೆ ಲಸಿಕೆ ಹಾಕಿದರೂ ಉಳಿದ ಶೇ. 30 ಮಂದಿ ಅಪಾಯದಲ್ಲಿರುತ್ತಾರೆ ಎಂಬುದನ್ನು ಅರಿತುಕೊಳ್ಳಬೇಕು. ಸದ್ಯಕ್ಕೆ ಲಸಿಕಾಕರಣವೊಂದರಿಂದಲೇ ಸಮಸ್ಯೆ ಬಗೆಹರಿಯುವುದಿಲ್ಲ. ಟೆಸ್ಟಿಂಗ್ ಮತ್ತು ಟ್ರ್ಯಾಕಿಂಗ್​ನಂಥ ಕ್ರಮಗಳನ್ನ ಸರ್ಕಾರ ಮುಂದುವರಿಸಬೇಕು ಎಂದು ಸೌಮ್ಯಾ ಸ್ವಾಮಿನಾಥನ್ ಅವರು ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com