ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೊರೋನಾ 3ನೇ ಅಲೆ ಎದುರಿಸಲು ಸಿದ್ಧತೆ: ಜಿಲ್ಲೆಗಳಲ್ಲೂ ತಜ್ಞರ ಸಮಿತಿ ರಚನೆಗೆ ಸರ್ಕಾರ ನಿರ್ಧಾರ

ಗ್ರಾಮೀಣ ಭಾಗಗಳಲ್ಲೂ ಕೊರೋನಾ 3ನೇ ಅಲೆ ಎದುರಿಸಲು ಸಿದ್ಧತೆ ನಡೆಸುತ್ತಿರುವ ರಾಜ್ಯ ಸರ್ಕಾರ, ಜಿಲ್ಲೆಗಳಲ್ಲೂ ಕೋವಿಡ್ ತಾಂತ್ರಿಕ ತಜ್ಞರ ಸಮಿತಿ ರಚನೆ ಮಾಡಲು ನಿರ್ಧರಿಸಿದೆ. 

ಬೆಂಗಳೂರು: ಗ್ರಾಮೀಣ ಭಾಗಗಳಲ್ಲೂ ಕೊರೋನಾ 3ನೇ ಅಲೆ ಎದುರಿಸಲು ಸಿದ್ಧತೆ ನಡೆಸುತ್ತಿರುವ ರಾಜ್ಯ ಸರ್ಕಾರ, ಜಿಲ್ಲೆಗಳಲ್ಲೂ ಕೋವಿಡ್ ತಾಂತ್ರಿಕ ತಜ್ಞರ ಸಮಿತಿ ರಚನೆ ಮಾಡಲು ನಿರ್ಧರಿಸಿದೆ. 

ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಡಾ.ಸುಧಾಕರ್ ಅವರು, ಪ್ರತೀ ಸಮಿತಿಯಲ್ಲೂ 5 ಮಂದಿ ತಜ್ಞರು ಇರಲಿದ್ದು, ಈ ತಂಡವು ರಾಜ್ಯ ತಾಂತ್ರಿಕ ಸಲಹಾ ಸಮಿತಿ ಜೊತೆಗೆ ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ. 

ಜಿಲ್ಲಾ ಸಮಿತಿಯಲ್ಲಿ ಸಾರ್ವಜನಿಕ ಆರೋಗ್ಯದ ಹಿರಿಯ ತಜ್ಞರು, ಜಿಲ್ಲಾ ಅಧಿಕಾರಿಗಳು, ಶ್ವಾಸಕೋಶಶಾಸ್ತ್ರಜ್ಞರು, ಮಕ್ಕಳ ವೈದ್ಯರು, ತೀವ್ರನಿಗಾ ಘಟಕದ ತಜ್ಞರು, ಪ್ರಸೂತಿ ತಜ್ಞರು, ಸೂಕ್ಷ್ಮ ಜೀವಶಾಸ್ತ್ರಜ್ಞರು ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತು ಇತರ ಸಂಸ್ಥೆಗಳ ವೈದ್ಯಕೀಯ ಅಧಿಕಾರಿಗಳು ಇರಲಿದ್ದಾರೆ. ಅಲ್ಲದೆ, ಆಯುಷ್'ನ ಹಿರಿಯ ವೈದ್ಯರೂ ಕೂಡ ಇರಲಿದ್ದಾರೆ. ಇಷ್ಟೂ ಮಂದಿಯಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ವಿಶೇಷ ಆಹ್ವಾನಿತರಾಗಿರುತ್ತಾರೆ. 

ಸಮಿತಿಯ ಸದಸ್ಯರು ಪ್ರತೀ 15 ದಿನಗಳಿಗೊಮ್ಮೆ ಸಭೆ ಸೇರಲಿದ್ದಾರೆ. ಅಗತ್ಯಬಿದ್ದರೆ, ಆಗಾಗ ಕೂಡ ಸಭೆ ನಡೆಸುವ ಸಾಧ್ಯತೆಗಳಿರುತ್ತವೆ. ತಾಲೂಕು ಮತ್ತು ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣ ಕಡಿಮೆ ಮಾಡುವುದರ ಕುರಿತು ಸಮಿತಿ ನಿರ್ಧಾರ ಕೈಗೊಳ್ಳಲಿದೆ. ಇದರಿಂದ ಹೆಚ್ಚು ಸಾವುಗಳು ಸಂಭವಿಸದಂತೆ ನೋಡಿಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. 

ಈಗಾಗಲೇ ನಾವು ಕೊರೋನಾದ 2 ಅಲೆಗಳ ಅನುಭವವನ್ನು ಪಡೆದಿದ್ದೇವೆ. ಅಕ್ಟೋಬರ್ ಮತ್ತು ನವೆಂಬರ್ ನಡುವೆ ನಿರೀಕ್ಷಿಸಲಾದ ಮೂರನೇ ಅಲೆಯು ನಿಜವಾಗಿಯೂ ಅಲೆಯಲ್ಲ, ಆದರೆ ಕೆಲವೇ ಪ್ರಕರಣಗಳ ಏರಿಳಿತವನ್ನು ಖಚಿತಪಡಿಸಿಕೊಳ್ಳಲು ಮೈಕ್ರೊ-ಪ್ಲ್ಯಾನಿಂಗ್ ಪ್ರಮುಖವಾಗಿದೆ ಎಂಬುದು ತಿಳಿದಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್), ಏಮ್ಸ್, ಡಬ್ಲ್ಯುಎಚ್‌ಒ ಮತ್ತು ಇತರ ಸಂಸ್ಥೆಗಳು ಹೊರಡಿಸಿದ ಮಾರ್ಗಸೂಚಿಗಳನ್ನು ಕೋವಿಡ್-19 ತಾಂತ್ರಿಕ ತಜ್ಞರ ಸಮಿತಿ (ಟಿಇಸಿ) ಅನುಸರಿಸಲಿದೆ. ಇದು ಜಿಲ್ಲಾ ಮಟ್ಟದ ಅಂಕಿ ಅಂಶಗಳನ್ನು ಪರಿಶೀಲಿಸುತ್ತದೆ ಮತ್ತು ಅದನ್ನು ಇತರ ಜಿಲ್ಲೆಗಳು, ರಾಜ್ಯ ಮತ್ತು ದೇಶಗಳೊಂದಿಗೆ ಹೋಲಿಕೆ ಮಾಡುವ ಕೆಲಸವನ್ನು ನಿರಂತರವಾಗಿ ಮಾಡುತ್ತಿರುತ್ತದೆ. 

ಈ ಸಮಿತಿಯು ಸ್ಥಳೀಯವಾಗಿ ಪಡೆದ ಮಾಹಿತಿಯನ್ನು ಬಳಸಿಕೊಳ್ಳುವ ಮೂಲಕ ಜಿಲ್ಲಾಡಳಿತಕ್ಕೆ ಸಹಾಯ ಮಾಡುತ್ತದೆ ಮತ್ತು ಸಾರ್ವಜನಿಕ ಆರೋಗ್ಯ ಕ್ರಮಗಳು ಮತ್ತು ಕಂಟೈನ್ಮೆಂಟ್ ಕ್ರಮಗಳನ್ನು ಸುಗಮಗೊಳಿಸುತ್ತದೆ. ನಂತರ ರಾಜ್ಯ ಮತ್ತು ರಾಷ್ಟ್ರೀಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಜಿಲ್ಲಾಡಳಿತಕ್ಕೆ ಮಾರ್ಗದರ್ಶನ ನೀಡಲಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com