ಗದಗ: ನಮ್ಮೊಂದಿಗೆ ದೇವರಿದ್ದಾನೆ, ನಮಗೆ ಲಸಿಕೆ ಬೇಡ; ಕೊರೋನಾ ಲಸಿಕೆ ಪಡೆಯಲು ಗ್ರಾಮಸ್ಥರ ಹಿಂದೇಟು!

ಗಾಢ ನಂಬಿಕೆಗಳು ಕೂಡ ಕೆಲವೊಮ್ಮೆ ಜನರನ್ನು ಅಪಾಯಕ್ಕೆ ಸಿಲುಕಿಸಿಬಿಡುತ್ತವೆ. ದೇವರ ಮೇಲೆ ಗಾಢ ನಂಬಿಕೆ ಇಟ್ಟಿರುವ ಗದಗ ಜಿಲ್ಲೆಯ ದಾವಲ್ ಮಲ್ಲಿಕ್ ಗ್ರಾಮಸ್ಥರು ಕೊರೋನಾ ಲಸಿಕೆ ಪಡೆಯಲು ವಿರೋಧ ವ್ಯಕ್ತಪಡಿಸಿದ್ದಾರೆ. 
ದಾವಲ್ ಮಲಿಕ್ ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ಮಾಡುತ್ತಿರುವ ಆರೋಗ್ಯಾಧಿಕಾರಿಗಳು
ದಾವಲ್ ಮಲಿಕ್ ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ಮಾಡುತ್ತಿರುವ ಆರೋಗ್ಯಾಧಿಕಾರಿಗಳು
Updated on

ಗದಗ: ಗಾಢ ನಂಬಿಕೆಗಳು ಕೂಡ ಕೆಲವೊಮ್ಮೆ ಜನರನ್ನು ಅಪಾಯಕ್ಕೆ ಸಿಲುಕಿಸಿಬಿಡುತ್ತವೆ. ದೇವರ ಮೇಲೆ ಗಾಢ ನಂಬಿಕೆ ಇಟ್ಟಿರುವ ಗದಗ ಜಿಲ್ಲೆಯ ದಾವಲ್ ಮಲ್ಲಿಕ್ ಗ್ರಾಮಸ್ಥರು ಕೊರೋನಾ ಲಸಿಕೆ ಪಡೆಯಲು ವಿರೋಧ ವ್ಯಕ್ತಪಡಿಸಿದ್ದಾರೆ. 

ಲಸಿಕೆ ಬಗ್ಗೆ ಅನುಮಾನ ಬೇಡ. ಧೈರ್ಯವಾಗಿ ಲಸಿಕೆಯನ್ನು ಪಡೆಯಬಹುದು ಎಂದು ವೈದ್ಯರು ಈ ಬಗ್ಗೆ ಸ್ಪಷ್ಟಪಡಿಸಿದ್ದರೂ ಗ್ರಾಮಸ್ಥರು ಈ ಬಗ್ಗೆ ನಂಬಿಕೆ ಇಲ್ಲದಂತೆ ವರ್ತಿಸುತ್ತಿದ್ದಾರೆ. ಗದಗ ತಾಲೂಕಿನ ಮುಳಗುಂದದ ದಾವಲ್ ಮಲ್ಲಿಕ್ ದರ್ಗಾ ಬಳಿಯ ವ್ಯಾಪಾರಿಗಳು ಲಸಿಕೆ ಪಡೆಯಲು ತೀರಾ ವಿರೋಧ ವ್ಯಕ್ತಪಡಿಸಿರುವುದು ತಿಳಿದುಬಂದಿದೆ.

ಲಸಿಕೆ ಪಡೆದರೆ ಸಾವನ್ನಪ್ಪುತ್ತಾರೆ ಎನ್ನುವ ಭಯವಿದೆ. ನಮ್ಮೊಂದಿಗೆ ದೇವರಿದ್ದಾನೆ, ನಮಗೆ ಏನು ಆಗೋದಿಲ್ಲ. 25 ಸಾವಿರ ರೂಪಾಯಿ ಬಾಂಡ್ ನೀಡಿ ಆಗ ಲಸಿಕೆ ಹಾಕಿಸಿಕೊಳ್ಳುತ್ತೇವೆಂದು ಅಲ್ಲಿನ ವ್ಯಾಪಾರಿಗಳು ಹೇಳುತ್ತಿದ್ದು, ವ್ಯಾಪಾರಿಗಳ ಮನವೊಲಿಸಲು ಆರೋಗ್ಯ ಇಲಾಖೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಅಧಿಕಾರಿಗಳು ಮೂರು ಬಾರಿ ಹೋದರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜನರು ಮುಂದೆ ಬರುತ್ತಿಲ್ಲ. ಒಟ್ಟು 70 ಬೀದಿ ವ್ಯಾಪಾರಸ್ಥರಿಗೆ ಲಸಿಕೆ ಹಾಕಲು ಹರಸಾಹಸ ಪಡುತ್ತಿದ್ದಾರೆ. ಬೇರೆ ಬೇರೆ ಕುಂಟುನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಈ ರೀತಿಯ ವರ್ತನೆಯಿಂದ ಅಧಿಕಾರಿಗಳಿಗೆ ತಲೆ ನೋವಾಗಿದೆ.

ನಮ್ಮ ಗ್ರಾಮಕ್ಕೆ ಕೊರೋನಾ ಪ್ರವೇಶ ಮಾಡಿಲ್ಲ. ಒಂದು ವೇಳೆ ಬಂದರೂ ಕೂಡ ನಮ್ಮನ್ನು ಸಾಯಿಸಲು ಅದಕ್ಕೆ ಸಾಧ್ಯವಿಲ್ಲ. ಏಕೆಂದರೆ, ಸಾವಿರಾರು ಜನರನ್ನು ನಂಬಿಕೆಯನ್ನು ಗಳಿಸಿರುವ ದೇವರಿರುವ ಸ್ಥಳದಲ್ಲಿ ನಾವಿದ್ದೇವೆ. ಎಲ್ಲಾ ರೋಗಗಳಿಂದ ದೇವರೇ ನಮ್ಮನ್ನು ರಕ್ಷಣೆ ಮಾಡುತ್ತಾನೆ. ಹೀಗಾಗಿ ನಾವು ಯಾವುದೇ ಲಸಿಕೆಯನ್ನೂ ಪಡೆದುಕೊಳ್ಳುವುದಿಲ್ಲ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ. 

ಮುಳಗುಂಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಕೀಯ ಅಧಿಕಾರಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಲಸಿಕೆ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇವೆ.ಆದರೆ, ದಾವಲ್ ಮಲಿಕ್ ಗ್ರಾಮಸ್ಥರು ಮಾತ್ರ ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ. ಲಸಿಕೆ ಕುರಿತು ಅವರಲ್ಲಿ ತಪ್ಪು ಕಲ್ಪನೆಗಳಿವೆ. ಇನ್ನು ಕೆಲವೇ ದಿನಗಳಲ್ಲಿ ಅವರ ಮನವೊಲಿಸುವ ಕೆಲಸ ಮಾಡುತ್ತೇವೆಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com