ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಪಠ್ಯಕ್ರಮದಲ್ಲಿ ಯೋಗ ಶಿಕ್ಷಣ ಅಳವಡಿಕೆ ಎಂದ ಡಿಸಿಎಂ ಡಾ. ಅಶ್ವತ್ಥನಾರಾಯಣ

ರಾಜ್ಯದ ಪಠ್ಯಕ್ರಮದಲ್ಲಿ ಯೋಗ ಶಿಕ್ಷಣವನ್ನು ಸೇರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಹೇಳಿದ್ದಾರೆ.
ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಡಿಸಿಎಂ ಸಿಎನ್ ಡಾ. ಅಶ್ವತ್ಥನಾರಾಯಣ
ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಡಿಸಿಎಂ ಸಿಎನ್ ಡಾ. ಅಶ್ವತ್ಥನಾರಾಯಣ
Updated on

ಬೆಂಗಳೂರು: ರಾಜ್ಯದ ಪಠ್ಯಕ್ರಮದಲ್ಲಿ ಯೋಗ ಶಿಕ್ಷಣವನ್ನು ಸೇರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಹೇಳಿದ್ದಾರೆ.

ಉನ್ನತ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ,  ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ ಹಾಗೂ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಸಹಯೋಗದಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ನಡೆದ 7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು  ಮಾತನಾಡಿದ ಅವರು, 'ಮನುಕುಲದ ಮಾನಸಿಕ-ದೈಹಿಕ ಸದೃಢತೆಗಾಗಿ ಹಿರಿಯರು ಕೊಟ್ಟು ಹೋಗಿರುವ ಯೋಗಕ್ಕೆ ಈಗ ವಿಶ್ವ ಮನ್ನಣೆ ದೊರೆತಿದೆ. ಮಕ್ಕಳ ಏಕಾಗ್ರತೆ ಮತ್ತು ಬೆಳವಣಿಗೆಗೆ ಇದು ಹೆಚ್ಚು ಪರಿಣಾಮಕಾರಿ" ಎಂದರು. 

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಯೋಗ
ಇದೇ ವೇಳೆ ಈ ವರ್ಷದಿಂದಲೇ ಜಾರಿಗೆ ಬರುತ್ತಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಯೋಗವನ್ನು ಪಠ್ಯವನ್ನಾಗಿ ಅಳವಡಿಸುವ ಅಂಶವಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕ್ರಮ ವಹಿಸಿದೆ. ಮಕ್ಕಳು ಆರಂಭದಿಂದಲೇ ಶೈಕ್ಷಣಿಕವಾಗಿ ಬೆಳವಣಿಗೆ ಸಾಧಿಸುವುದರ ಜತೆಗೆ, ಯೋಗದ ಮೂಲಕ  ದೈಹಿಕ-ಮಾನಸಿಕವಾಗಿ ಸದೃಢರಾಗಲಿದ್ದಾರೆ ಎಂದು ಅಶ್ವಥ್ ನಾರಾಯಣ ಹೇಳಿದರು. 

ಇದಕ್ಕೂ ಮುನ್ನ ಮಾತನಾಡಿದ ರಾಜ್ಯ ಒಲಿಂಪಿಕ್‌ ಸಂಸ್ಥೆ ಅಧ್ಯಕ್ಷರೂ ಆದ ಶಾಸಕ ಗೋವಿಂದರಾಜು ಅವರು ಯೋಗವನ್ನು ಶಿಕ್ಷಣದ ಪಠ್ಯದಲ್ಲಿ ಸೇರಿಸಬೇಕೆಂದು ಮನವಿ ಮಾಡಿದರು.

ಯೋಗ ಸೀಮಿತವಾದುದಲ್ಲ: ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ
ಇನ್ನು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿಗಳು, 'ಯೋಗವು ಯಾವುದೇ ದೇಶ, ಜಾತಿ, ಧರ್ಮಕ್ಕೆ ಸೀಮಿತವಾದುದ್ದಲ್ಲ. ಇದು ಮನುಷ್ಯನ ಅಸ್ತಿತ್ವಕ್ಕೆ ಸೇರಿರುವಂಥದ್ದು. ಮನುಷ್ಯನನ್ನು ಉನ್ನತಿಗೆ ಕೊಂಡೊಯ್ಯಲು ನಮ್ಮ ಹಿರಿಯರು  ಸಂಶೋಧಿಸಿದ ವಿಜ್ಞಾನವೇ ಯೋಗ. ಯೋಗ ಭಾರತಕ್ಕೆ ಸೇರಿದ್ದು ಎಂದು ಜಗತ್ತು ಅದನ್ನು ಬಳಸದೇ ಇರಬಾರದು. ಹಾಗೆ ಮಾಡಿದರೆ ಜಗತ್ತಿಗೇ ನಷ್ಟ. ಯುರೋಪಿಯನ್‌ ವಿಜ್ಞಾನಿ ಲಾವಾಶಿಯರ್‌ ಅವರು ಆಮ್ಲಜನಕವನ್ನು ಸಂಶೋಧಿಸಿದರು ಎಂಬ ಕಾರಣಕ್ಕೆ ನಾವು ಅದನ್ನು ಬಳಸದೇ ಇದ್ದರೆ ನಮಗೇ ನಷ್ಟ.  ಹಾಗೆಯೇ ಯೋಗವೂ ಕೂಡ. ಯೋಗ ಜಗತ್ತಿನ ಪ್ರತಿಯೊಬ್ಬರ ಜೀವನ ಶೈಲಿ ಆಗಬೇಕು ಎಂದು ಹೇಳಿದರು.

ಹರಿಹರದ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಅವರು ಈ ಸಂದರ್ಭದಲ್ಲಿ ಯೋಗ ಮಾರ್ಗದರ್ಶನ ನೀಡಿದರು. ಕ್ರೀಡಾ ಮತ್ತು ಯವಜನ ಸಬಲೀಕರಣ ಖಾತೆ ಸಚಿವ ಡಾ.ಕೆ.ಸಿ.ನಾರಾಯಣ ಗೌಡ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ  ಆಯುಕ್ತ ಪ್ರದೀಪ್‌ ಪ್ರಭಾಕರ್, ಯುವಜನ ಸೇವೆ ಇಲಾಖೆ ಆಯುಕ್ತ ಗೋಪಾಲಕೃಷ್ಣ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com