ಕಾಳಸಂತೆಯಲ್ಲಿ ರೆಮಿಡಿಸಿವರ್ 8-10 ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ: ಐವರ ಬಂಧನ

ಸರ್ಕಾರ ನಿಗದಿ ಮಾಡಿದ ದರಕ್ಕಿಂತ 8-10 ಪಟ್ಟು ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ರೆಮ್ ಡಿಸಿವಿರ್ ಮಾರಾಟ ಮಾಡುತ್ತಿದ್ದ ಐವರನ್ನು ಉತ್ತರ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ರೆಮಿಡಿಸಿವಿರ್ ಇಂಜೆಕ್ಷನ್
ರೆಮಿಡಿಸಿವಿರ್ ಇಂಜೆಕ್ಷನ್
Updated on

ಬೆಂಗಳೂರು: ಸರ್ಕಾರ ನಿಗದಿ ಮಾಡಿದ ದರಕ್ಕಿಂತ 8-10 ಪಟ್ಟು ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ರೆಮ್ ಡಿಸಿವಿರ್ ಮಾರಾಟ ಮಾಡುತ್ತಿದ್ದ ಐವರನ್ನು ಉತ್ತರ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಜನಾ ಬ್ಯಾಂಕ್‍ನ ಮಾನ್ಯೇಜರ್ ಶಿವಕುಮಾರ್ (32), ಕಾರ್ಡಿಯಾ ಡಯಾಬಿಟಿಸ್ ನಲ್ಲಿ ಮೆಡಿಕಲ್ ರೆಫ್ರಜೇಂಟಿವ್ ಆಗಿದ್ದ ದರ್ಶನ್ (29) , ಲ್ಯಾಬ್ ಟೆಕ್ನಿಷನ್ ಗಿರೀಶ್ (30) ಹಾಗೂ ತರಕಾರಿ ವ್ಯಾಪಾರಿ ನಾಗೇಶ್( 43) ಹಾಗೂ ಫಾರ್ಮಾ ಹಬ್‍ನ ಡೆಲಿವರಿ ಬಾಯ್ ನಯಾಜ್ ಅಹಮ್ಮದ್ (30) ಬಂಧಿತ ಆರೋಪಿಗಳು.

ಶುಕ್ರವಾರ ಮಹಾಲಕ್ಷ್ಮೀಲೇಔಟ್ ಬಸ್ ನಿಲ್ದಾಣದ ಸಂಜೀವಿನಿ ಆಸ್ಪತ್ರೆ ಹತ್ತಿರ ಇಬ್ಬರೂ ವ್ಯಕ್ತಿಗಳು ಕೊರೊನಾ ಸೋಂಕಿತರಿಗೆ ನೀಡುವ ರೆಮ್ ಡಿಸಿವಿರ್ ಔಷಧಿಯನ್ನು ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೆ ಇಟ್ಟುಕೊಂಡು ಸರ್ಕಾರ ನಿಗದಿ ಮಾಡಿದ ಬೆಲೆಗಿಂತ 8-10 ಪಟ್ಟು ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಭಾತ್ಮೀದಾರಾರಿಂದ ಬಂದ ಖಚಿತ ಮಾಹಿತಿ ಮೇರೆಗೆ ಪಿಎಸ್‍ಐ ವಿನಾಯಕ ದಾಳಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳ ವಶದಿಂದ 5 ರೆಮ್ ಡಿಸಿವಿರ್ ಔಷಧಿಗಳನ್ನು ಹಾಗೂ 2-ಮೊಬೈಲ್ ಫೋನ್‍ಗಳನ್ನು, 1- ದ್ವಿಚಕ್ರವಾಹನ ಹಾಗೂ 6,000 ರೂ.ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಹಾಲಕ್ಷ್ಮೀ ಲೇಔಟ್ ಪೊಲೀಸರು ತಿಳಿಸಿದ್ದಾರೆ.

ಆರೋಪಿ ನಾಗೇಶ್ ತನ್ನ ಸ್ನೇಹಿತನ ತಂದೆ ಕೊರೊನಾದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಆತನ ಬಳಿ ಉಳಿದಿರುವ ಔಷಧಿಯನ್ನು ತಂದು ಮೂವರ ಮೂಲಕ ಹೆಚ್ಚಿನ ಬೆಲೆ ಮಾರಾಟ ಮಾಡಲು ಬಂದಿರುವುದಾಗಿ ವಿಚಾರಣೆವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರೀರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಡಿರೆಡ್ಡಿ ಸರ್ಕಲ್, ಆರ್ಶೀವಾದ್ ನರ್ಸಿಂಗ್ ಹೋಮ್ ಹತ್ತಿರ ವ್ಯಕ್ತಿ ಓರ್ವ ದ್ವಿಚಕ್ರವಾಹನದಲ್ಲಿ ಬಂದು ಕಾಳ ಸಂತೆಯಲ್ಲಿ ರೆಮ್ ಡಿಸಿವಿರ್ ಔಷಧಿಯನ್ನು ಕಾಳಸಂತೆಯಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಭಾತ್ಮೀದಾರಾರಿಂದ ಬಂದ ಖಚಿತ ಮಾಹಿತಿ ಮೇರೆಗೆ ಪಿಎಸ್‍ಐ ವಿನೋದ್ ನಾಯ್ಕ್ ದಾಳಿ ಆರೋಪಿ ನಯಾಜ್ ಅಹಮ್ಮದ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ನಯಾಜ್ ಅಹಮ್ಮದ್, ಚಾಮರಾಜಪೇಟೆಯ ಫಾರ್ಮಾ ಹಬ್‍ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದನು. ಬಂಧಿತನಿಂದ 2 ರೆಮಿಡಿಸಿವೀರ್ ಔಷಧಿ ಹಾಗೂ 1 ದ್ವಿಚಕ್ರವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ತಮ್ಮ ಫಾರ್ಮಾದಲ್ಲಿ ಮಾಲೀಕರಿಗೆ ತನ್ನ ಸ್ವಂತ ತಮ್ಮನಿಗೆ ಕೊರೊನಾ ಇದೆ ಎಂದು ಹೇಳಿ ತಾನೇ ಬಿಲ್ ಮಾಡಿಕೊಂಡು ಬಂದು ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಅವಶ್ಯಕವಿರುವವರಿಗೆ ಒಂದ ರೆಮ್ ಡಿಸಿವಿರ್ ಅನ್ನು 30 ರಿಂದ 40 ಸಾವಿರ ರೂ.ಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಮಹಾಲಕ್ಷ್ಮೀಲೇಔಟ್ ಹಾಗೂ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

ಬಳ್ಳಾರಿಯಲ್ಲಿ ಓರ್ವನ ಬಂಧನ
ಅಕ್ರಮವಾಗಿ ಸಂಗ್ರಹಿಸಿದ್ದ ರೆಮ್‍ಡಿಸಿವಿರ್ ಲಸಿಕೆಗಳನ್ನು ವಶಕ್ಕೆ ಪಡೆದು, ಓರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೆಮ್‍ಡಿಸಿವಿರ್ ಬ್ಲಾಕ್ ದಂಧೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ದಾಳಿ ನಡೆಸಿ, ಕಿಶೋರ್ ಕುಮಾರ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಬಂಧಿತನಿಂದ ಆರು ಡೋಸ್ ರೆಮ್‍ಡಿಸಿವಿರ್ ಲಸಿಕೆ ವಶಪಡಿಸಿಕೊಳ್ಳಲಾಗಿದೆ. ಆರೋಪಿ 3ರಿಂದ 4ಸಾವಿರ ಇರುವ ಲಸಿಕೆಯ ಒಂದು ಡೋಸ್ ಅನ್ನು 25ರಿಂದ 30 ಸಾವಿರದಂತೆ ಮಾರಾಟ ಮಾಡುತ್ತಿದ್ದನು ಎಂದರು.

ಆರು ಡೋಸ್ ಲಸಿಕೆಗೆ ಒಂದೂವರೆ ಲಕ್ಷದವರೆಗೂ ಹಣ ಪಡೆದು ಲಸಿಕೆ ನೀಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ಕೈಗೊಳ್ಳಲಾಗಿತ್ತು. ಬಂಧಿತ ವ್ಯಕ್ತಿಯ ಹಿಂದೆ ಹಲವರು ಇರುವ ಶಂಕೆ ಇದ್ದು, ಉಳಿದವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com