ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಜಾಗತಿಕ ಪಾಲುದಾರರಿಗೆ ರಾಜ್ಯ ಎದುರು ನೋಡುತ್ತಿದೆ: ಅಶ್ವತ್ಥ್ ನಾರಾಯಣ್

ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಪರಿಸ್ಥಿತಿ ಕಠೋರಗೊಳ್ಳುತ್ತಿದ್ದು, ಈ ನಡುವಲ್ಲೇ ಪರಿಸ್ಥಿತಿ ನಿಭಾಯಿಸಲು ಸ್ನೇಹಪರ ರಾಷ್ಟ್ರಗಳಿಂದ ಔಷಧಿಗಳು ಹಾಗೂ ಇತರೆ ಉಪಕರಣಗಳ ಖರೀದಿ ಮಾಡಲು ಚಿಂತನೆಗಳನ್ನು ನಡೆಸುತ್ತಿದೆ. 
ಅಶ್ವತ್ಥ್ ನಾರಾಯಣ್
ಅಶ್ವತ್ಥ್ ನಾರಾಯಣ್
Updated on

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಪರಿಸ್ಥಿತಿ ಕಠೋರಗೊಳ್ಳುತ್ತಿದ್ದು, ಈ ನಡುವಲ್ಲೇ ಪರಿಸ್ಥಿತಿ ನಿಭಾಯಿಸಲು ಸ್ನೇಹಪರ ರಾಷ್ಟ್ರಗಳಿಂದ ಔಷಧಿಗಳು ಹಾಗೂ ಇತರೆ ಉಪಕರಣಗಳ ಖರೀದಿ ಮಾಡಲು ಚಿಂತನೆಗಳನ್ನು ನಡೆಸುತ್ತಿದೆ. 

ಕೊವಿಡ್‌-19 ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸುವ ಹಾಗೂ ಪರಸ್ಪರ, ಸಹಕಾರ, ನೆರವು ಇತ್ಯಾದಿಗಳನ್ನು ನೀಡುವ ಬಗ್ಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಅವರು ನಿನ್ನೆಯಷ್ಟೇ ಜಾಗತಿಕ ಆವಿಷ್ಕಾರ ಮೈತ್ರಿಕೂಟ (ಜಿಐಎ) ದೇಶಗಳ ರಾಜತಾಂತ್ರಿಕರ ಜೊತೆ ಮಹತ್ವದ ಮಾತುಕತೆ ನಡೆಸಿದರು.

ಉಪ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ವರ್ಚುಯಲ್‌ ಸಭೆಯಲ್ಲಿ ಕೊವಿಡ್‌ ಎದುರಿಸಲು ಕೈಗೊಳ್ಳಲಾಗಿರುವ ಕಾರ್ಯತಂತ್ರ, ವ್ಯಾಕ್ಸಿನೇಷನ್‌, ವೈದ್ಯಕೀಯ ಸೌಲಭ್ಯ, ಪರಸ್ಪರ ಸಹಕಾರ ಇತ್ಯಾದಿಗಳ ಬಗ್ಗೆ ಚ‌ರ್ಚೆ ನಡೆಸಲಾಯಿತು. 

ಅಮೆರಿಕ, ಕೆನಡಾ, ನೆದರ್‌ಲ್ಯಾಂಡ್ಸ್‌, ಬ್ರಿಟನ್‌, ಜರ್ಮನಿ, ಇಸ್ರೇಲ್‌, ಆಸ್ಟ್ರೇಲಿಯಾ, ಡೆನ್ಮಾರ್ಕ್‌, ದಕ್ಷಿಣ ಕೊರಿಯಾ, ಸ್ವಿಡ್ಜರ್‌ಲ್ಯಾಂಡ್‌, ಜಪಾನ್‌ ಮುಂತಾದ ದೇಶಗಳ ದಕ್ಷಿಣ ಭಾರತ್‌ ಕಾನ್ಸುಲೇಟ್‌ ಜನರಲ್‌ಗಳ ಜೊತೆ ಅಶ್ವತ್ಥ್ ನಾರಾಯಣ್ ಅವರು ಮಾತುಕತೆ ನಡೆಸಿದರು.

ಈ ವೇಳೆ ಮಾತನಾಡಿದ ಅಶ್ವತ್ಥ್ ನಾರಾಯಣ್ ಅವರು, ಕೊವಿಡ್‌ನಂಥ ಸೋಂಕಿನ ವಿರುದ್ಧ ಹೋರಾಟ ನಡೆಸಲು ಜಾಗತಿಕ ಆವಿಷ್ಕಾರ ಮೈತ್ರಿಕೂಟದ ದೇಶಗಳ ಜತೆಗೆ ಎಲ್ಲ ರೀತಿಯ ಸಹಕಾರ ಸಂಬಂಧ ಹೊಂದಲು ಕರ್ನಾಟಕ ಸಿದ್ಧವಿದೆ ಎಂದು ಹೇಳಿದರು. 

3 ವಾರಗಳ ಹಿಂದೆ ರಾಜ್ಯಕ್ಕೆ ಎರಡನೇ ಅಲೆ ಅಪ್ಪಳಿಸಿದೆ. ಸರಕಾರವು ಸೋಂಕು ಹರಡುವುದಕ್ಕಿಂತ ವೇಗವಾಗಿ ಹಾಸಿಗೆ ನಿರ್ವಹಣೆ, ಆಮ್ಲಜನಕ ಪೂರೈಕೆ, ಔಷಧಿ ಲಭ್ಯತೆ, ಹೋಮ್‌ ಐಸೋಲೇಷನ್‌ನಂಥ ಪರಿಹಾರ ಕಾರ್ಯಗಳನ್ನು ಕೈಗೊಂಡು ಆಸ್ಪತ್ರೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಯತ್ನಿಸುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಈಗ ಆಕ್ಸಿಜನ್‌, ಔಷಧಿ, ಬೆಡಗಳ ಕೊರತೆಯನ್ನು ಬಹುತೇಕ ನೀಗಿಸಲಾಗಿದೆ. ಮತ್ತೊಂದೆಡೆ ಸಂಭವನೀಯ 3ನೇ ಅಲೆಯನ್ನು ಎದುರಿಸಲು ಸರಕಾರ ಸಜ್ಜಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸೋಂಕನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಲು ಹೋಮ್‌ ಐಸೋಲೇಷನ್‌ ಅನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಪ್ರತಿಯೊಬ್ಬ ಸೋಂಕಿತರಿಗೂ ಕೊವಿಡ್‌ ಕೇರ್‌ನಲ್ಲಿಯೇ ಚಿಕಿತ್ಸೆ ಕೊಡಲಾಗುತ್ತಿದೆ. ಪ್ರತಿ ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರದ ಮಟ್ಟದಲ್ಲಿ ಒಂದು ಕಾರ್ಯಪಡೆಯನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು

ದಕ್ಷಿಣ ಕೊರಿಯಾದ ಕಾನ್ಸುಲೇಟ್‌ ಜನರಲ್‌ ಯಂಗ್ ಸೀಪ್ ಕ್ವಾನ್ ಅವರು ಮಾತನಾಡಿ, ಈಗಾಗಲೇ 1,500 ಕೊರಿಯನ್‌ ಪ್ರಜೆಗಳು ಕರ್ನಾಟಕದಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಆಸ್ಪತ್ರೆಯ ಹಾಸಿಗೆಗಳನ್ನು ಹುಡುಕುವುದು ತುಂಬಾ ಕಷ್ಟಕರವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ನೆರವಾಗಬೇಕು ಎಂದು ವಿನಂತಿ ಮಾಡಿದರು.

ಜೊತೆಗೆ, ಜಾಗತಿಕ ಮಟ್ಟದಲ್ಲಿರುವ ಲಸಿಕೆಗಳ ಕೊರತೆಯನ್ನು ನೀಗಿಸಲು ವ್ಯಾಕ್ಸಿನ್‌ ತಯಾರಿಕೆ ಘಟಕಗಳನ್ನು ಸ್ಥಾಪನೆ ಮಾಡಲು ದಕ್ಷಿಣ ಕೊರಿಯಾ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಭಾರತವೂ ಸೇರಿ ಜಗತ್ತಿನ ಎಲ್ಲ ದೇಶಗಳ ಜತೆ ನಿಕಟವಾಗಿ ಕೆಲಸ ಮಾಡಲು ಸಿದ್ಧವಿದೆ ಎಂದು ತಿಳಿಸಿದರು. 

ಭಾರತಕ್ಕೆ ಐದು ವಿಮಾನಗಳಲ್ಲಿ ವೈದ್ಯಕೀಯ ಸರಂಜಾಮುಗಳ ಪೂರೈಕೆ, ಆಮ್ಲಜನಕ ಸಿಲಿಂಡರ್‌ಗಳು, ವೈದ್ಯಕೀಯ ತಪಾಸಣೆ ಕಿಟ್‌ಗಳನ್ನು ಒದಗಿಸಲಾಗುತ್ತಿದೆ. ಈಗಾಗಲೇ ಸಾಕಷ್ಟು ವಸ್ತುಗಳು ಭಾರತಕ್ಕೆ ಬಂದಿವೆ. ಅಲ್ಲದೆ, ಇಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿರುವ ಕೊರಿಯಾದ ಎಲ್‌ಜಿ, ಸ್ಯಾಮ್‌ಸಂಗ್‌ ಮುಂತಾದವು ರಾಜ್ಯಕ್ಕೆ ಆರ್ಥಿಕ ನೆರವು ನೀಡುತ್ತಿವೆ ಎಂದರು.

ಆಸ್ಟ್ರೇಲಿಯಾದ ಪ್ರತಿನಿಧಿಗಳು ಮಾತನಾಡಿ, ದೆಹಲಿಯ ವಿದೇಶಾಂಗ ಸಚಿವಾಲಯದ ಮೂಲಕ ವೈದ್ಯಕೀಯ ಸಾಮಗ್ರಿಗಳನ್ನು ಒದಗಿಸುತ್ತಿದ್ದೇವೆಂದು ಹೇಳಿದರು. ಬೆಂಗಳೂರಿನಲ್ಲಿ ಆಮ್ಲಜನಕ ಸ್ಥಾವರವನ್ನು ಸ್ಥಾಪಿಸುವುದರ ಹೊರತಾಗಿ ಹಾಸಿಗೆಗಳು ಮತ್ತು ಇತರ ಸೌಲಭ್ಯಗಳನ್ನು ಸ್ಥಾಪಿಸಲು ರೋಟರಿ ಕ್ಲಬ್ (ಕರ್ನಾಟಕ) ದೊಂದಿಗೆ ಪಾಲುದಾರಿಕೆ ಹೊಂದಿದ್ದೇವೆ ಎಂದು ಜರ್ಮನ್ ಪ್ರತಿನಿಧಿ ತಿಳಿಸಿದರು.

ಭಾರತದಲ್ಲಿ ಮೂರು ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಲು ಇಸ್ರೇಲ್ ಸಹಾಯ ಮಾಡಿದ್ದು, ಅದರಲ್ಲಿ ಎರಡು ಕರ್ನಾಟಕ ರಾಜ್ಯದಲ್ಲಿ ಸ್ಥಾಪನೆಗೊಂಡಿವೆ ಎಂದು ಇಸ್ರೇಲ್ ಕಾನ್ಸುಲ್ ಜನರಲ್ ಜೊನಾಥನ್ ಜಡ್ಕಾ ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com