ಬೆಂಗಳೂರು: ದೇಶದಲ್ಲಿ ಮಾರಕ ಕೊರೋನಾ ಸಾಂಕ್ರಾಮಿಕದ ಎರಡನೇ ಅಲೆಯಿಂದಾಗಿ ಜನ ಸಂಕಷ್ಟಕ್ಕೆ ಸಿಲುಕಿದ್ದು, ಈ ಬಿಕ್ಕಿಟ್ಟಿನ ಸಂದರ್ಭದಲ್ಲಿ ಜನರಿಗೆ ನೆರವಾಗಲು ಹವ್ಯಾಸಿ ಬೈಕ್ ರೈಡರ್ಸ್ ಸಹೋದರರು ಇದೀಗ ಆ್ಯಂಬುಲೆನ್ಸ್ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹೌದು.. ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೋವಿಡ್ 2ನೇ ಅಲೆ ವೇಳೆ ಜನ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಸೂಕ್ತ ಸಂದರ್ಭದಲ್ಲಿ ಆ್ಯಂಬುಲೆನ್ಸ್ ಸಿಗದೇ ಪರದಾಡುತ್ತಿದ್ದಾರೆ. ಜನರ ಸಂಕಷ್ಟಕ್ಕೆ ಇದೀಗ ಸಾಕಷ್ಟು ಮಂದಿ ಸ್ಪಂದಿಸುತ್ತಿದ್ದು, ಈ ಪಟ್ಟಿಗೆ ಇದೀಗ ಖ್ಯಾತ ಹವ್ಯಾಸಿ ಬೈಕ್ ರೈಡರ್ಸ್ ಸಹೋದರರಾದ ಮುರ್ತಾಜಾ ಜುನೈದ್ ಮತ್ತು ಮುತೀಬ್ ಜೊಹೆಬ್ ಕೂಡ ಸೇರ್ಪಡೆಯಾಗಿದ್ದಾರೆ. ಇಬ್ಬರೂ ಇದೀಗ ಆ್ಯಂಬುಲೆನ್ಸ್ ಚಾಲಕರಾಗಿ ಸೇವೆ ಸಲ್ಲಿಸಿತ್ತಿದ್ದು, ಜನರಿಗೆ ನೆರವಾಗುತ್ತಿದ್ದಾರೆ.
ಬೆಂಗಳೂರಿನ ಸಹೋದರರಾದ ಮುರ್ತಾಜಾ ಜುನೈದ್ ಮತ್ತು ಮುತೀಬ್ ಜೊಹೆಬ್ ಹವ್ಯಾಸಿ ಬೈಕ್ ರೈಡರ್ಸ್ ಆಗಿದ್ದು, ಈ ಹಿಂದೆ ಬೈಕ್ ನಲ್ಲಿ ಹಲವು ಊರುಗಳನ್ನು ಸುತ್ತುತ್ತಿದ್ದರು. ಆದರೆ ಇದೀಗ ಕೊರೊನಾ ಎರಡನೇ ಅಲೆಯಿಂದ ಜನ ಅನುಭವಿಸುತ್ತಿರುವ ಕಷ್ಟವನ್ನು ನೋಡಿ ಜನರ ಸೇವೆ ಮಾಡಲು ಅಂಬುಲೆನ್ಸ್ ಒಂದರಲ್ಲಿ ಡ್ರೈವರ್‍ಗಳಾಗಿ ಕೊರೊನಾ ಸೋಂಕಿತರಿಗೆ ನೆರವಾಗುತ್ತಿದ್ದಾರೆ.
ಈ ಕುರಿತು ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಮುರ್ತಾಜಾ ಜುನೈದ್, ಕೊರೊನಾ ಎರಡನೇ ಅಲೆಯಿಂದಾಗಿ ಜನ ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಾರೆ. ನಾನು ನೋಡಿದಂತೆ ಜನ ಆಕ್ಸಿಜನ್, ಬೆಡ್ ಮತ್ತು ಅಂಬುಲೆನ್ಸ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹಲವು ಜನ ಆಟೋ, ಬೈಕ್‍ಗಳಲ್ಲಿ ಆಸ್ಪತ್ರೆಗೆ ಹೋಗುವುದನ್ನು ನೋಡಿದ್ದೇನೆ. ಇಂತಹ ಸಂಕಷ್ಟ ಸಮಯದಲ್ಲಿ ನಾವು ಸುಮ್ಮನೇ ಕೈ ಕಟ್ಟಿ ಕುಳಿತುಕೊಳ್ಳುವುದು ಸರಿಯಲ್ಲ. ಹೀಗಾಗಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲು ನಿರ್ಧರಿಸಿದೆವು. ಹಾಗಾಗಿ ಅಂತಹವರ ನೆರವಿಗೆ ಬರಲು ಕಳೆದ ಮೂರು ವಾರಗಳಿಂದ ಅಂಬುಲೆನ್ಸ್ ಒಂದರಲ್ಲಿ ಡ್ರೈವರ್ ಗಳಾಗಿ ಸೇವೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಅಂತೆಯೇ ಈ ಸಾಂಕ್ರಾಮಿಕ ಸಂದರ್ಭದಲ್ಲಿ ಜನರ ಕಷ್ಟ ಕಾಲದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯು ಇತರರಿಗೆ ನೆರವಾಗಬೇಕು. ಇದೀಗ ನಾವು ಅಂಬುಲೆನ್ಸ್ ಡ್ರೈವರ್ಸ್ ಆಗುವ ಮೂಲಕ ಜನರ ನೆರವಿಗೆ ಮುಂದಾಗಿರುವುದು ಖುಷಿ ಕೊಡುತ್ತಿದೆ ಎಂದು ತಿಳಿಸಿದ್ದಾರೆ.
ನಾವು ಬೈಕ್ ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ನಾವು ರಕ್ಷಣಾ ಕಾರ್ಯಾಚರಣೆ ಮಾಡುವ ಕುರಿತು ತರಬೇತಿ ಪಡೆದೆವು. ದೇಶದ ಅತ್ಯಂತ ಎತ್ತರದ ಪ್ರದೇಶ ಲಡಾಖ್ ನಲ್ಲಿ ಪ್ರಯಾಣಿಸುವಾಗ ಅಲ್ಲಿ ಆಕ್ಸಿಜನ್ ಪ್ರಮಾಣ ಕಡಿಮೆ ಇರುತ್ತದೆ. ಆಗ ನಾವು ಅಲ್ಲಿ ಆಕ್ಸಿ ಮೀಟರ್ ಗಳನ್ನು ಬಳಕೆ ಮಾಡುತ್ತಿದ್ದೆವು. ಅಲ್ಲದೆ ನಮ್ಮ ಸಹ ಬೈಕ್ ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದೆವು. ಇದೀಗ ಈ ತರಬೇತಿ ಇದೀಗ ನಮ್ಮ ಕಾರ್ಯಕ್ಕೆ ನೆರವಾಗುತ್ತಿದೆ. ಸೋಂಕಿತರಿಗೂ ನಾವು ಇದೇ ರೀತಿಯ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸುತ್ತಿದ್ದೇವೆ. ಇದರಿಂದ ಸಾಕಷ್ಟು ಜೀವಗಳು ಉಳಿಯುತ್ತಿವೆ. ಇದು ನಿಜಕ್ಕೂ ನಮಗೆ ಖುಷಿಯ ವಿಚಾರವಾಗಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಆ್ಯಂಬುಲೆನ್ಸ್ ಗಳಲ್ಲಿ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ ಚಾಲಕರು ದುಬಾರಿ ಹಣ ಕೇಳುತ್ತಿದ್ದರು. ಆದರೆ ಅಷ್ಟು ದೊಡ್ಡ ಮೊತ್ತದ ಹಣ ಪಾವತಿ ಮಾಡಲಾಗದೇ ಜನ ಆಟೋಗಳಲ್ಲಿ, ಬೈಕ್ ಗಳಲ್ಲಿ ಸೋಂಕಿತರನ್ನು ಆಸ್ಪತ್ರೆ ಕರೆತರುತ್ತಿದ್ದರು. ಇಂತಹ ಸನ್ನಿವೇಶಗಳು ನಮ್ಮನ್ನು ಆ್ಯಂಬುಲೆನ್ಸ್ ಚಾಲಕರಾಗಲು ಪ್ರೇರೇಪಿಸಿತು ಎಂದು ಜೊಹೆಬ್ ಹೇಳಿದ್ದಾರೆ.
ಇದೇ ವಿತಾರವಾಗಿ ಮಾತನಾಡಿದ ಜುನೈದ್, ಇದು ನಿಜವಾದ ನೆರವು ನೀಡಲು ಸೂಕ್ತ ಸಂದರ್ಭವಾಗಿದೆ. ಈ ಅವಕಾಶವನ್ನು ನಾವು ನಮ್ಮ ಜವಾಬ್ದಾರಿಯಾಗಿ ಸ್ವೀಕರಿಸಿದ್ದೇವೆ. ನಾವು ಏನು ಮಾಡಬಹುದು ಎಂದು ಯೋಚಿಸುತ್ತಾ ಕುಳಿತುಕೊಳ್ಳುವುದಕ್ಕಿಂತ ಏನಾದರೂ ಮಾಡುತ್ತಾ ಜನರಿಗೆ ನೆರವಾಗುವುದು ಮುಖ್ಯ ಎಂದೆನಿಸಿತು ಎಂದು ಹೇಳಿದ್ದಾರೆ.
Advertisement