ಉದ್ಯಮಿಗಳಿಗೂ ಪ್ಯಾಕೇಜ್ ನೀಡಿ: ಸರ್ಕಾರಕ್ಕೆ ಎಫ್‌ಕೆಸಿಸಿಐ ಮನವಿ
ಬೆಂಗಳೂರು: ಕೋವಿಡ್ ನಿಂದ ಸಂಕಷ್ಟಕ್ಕೊಳಗಾಗಿರುವ ವ್ಯಾಪಾರ ಕ್ಷೇತ್ರದವರಿಗೆ ಪರಿಹಾರ ಪ್ಯಾಕೇಜ್ ನೀಡಬೇಕೆಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.
ನಿನ್ನೆಯಷ್ಟೇ ಎಫ್‌ಕೆಸಿಸಿಐನ ಅಧ್ಯಕ್ಷ ಪೆರಿಕಲ್ ಸುಂದರಂ ಹಾಗೂ ಉಪಾಧ್ಯಕ್ಷ ಗೋಪಾಲ ರೆಡ್ಡಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಹಲವಾರು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಈ ವೇಳೆ ಲಾಕ್ಡೌನ್ ಸಂದರ್ಭದಲ್ಲಿ ವ್ಯಾಪಾರೋದ್ಯಮ ಮತ್ತು ಕೈಗಾರಿಕೆಗಳಿಗೆ ಆರ್ಥಿಕ ನೆರವಿನ ಪ್ಯಾಕೇಜ್ ಘೋಷಣೆ ಮಾಡುವಂತೆ ಮನವಿ ಮಾಡಿದ್ದಾರೆ.
ಎಲ್ಲಾ ಕೈಗಾರಿಕೆಗಳು ಮತ್ತು ವಾಣಿಜ್ಯೋದ್ಯಮಿಗಳ ವಿದ್ಯುತ್ ಶುಲ್ಕದ ಮೂರು ತಿಂಗಳವರೆಗಿನ ಫಿಕ್ಸೆಡ್ ಚಾರ್ಚ್ ನ್ನು ಮನ್ನಾ ಮಾಡಬೇಕು. 3 ತಿಂಗಳ ವರೆಗಿನ ವಿದ್ಯುತ್ ಶುಲ್ಕ ವಸೂಲಿಯನ್ನು ಮುಂದೂಡಬೇಕು. ವ್ಯಾಪಾರ, ವಹಿವಾಟು ಹಾಗೂ ಉತ್ಪಾದನಾ ಚಟುವಟಿಕೆಗಳಿಗೆ ಪಡೆಯಬೇಕಿರುವ ಎಲ್ಲಾ ರೀತಿಯ ಪರವಾನಗಿ ಹಾಗೂ ನವೀಕರಣವನ್ನು ಒಂದು ವರ್ಷಗಳವರೆಗೆ ಮುಂದೂಡಬೇಕು ಅಥವಾ ಅಮಾನತಿನಲ್ಲಿಡಬೇಕು.
ವಾಣಿಜ್ಯ ಚಟುವಟಿಕೆಗಳ ಉದ್ದೇಶದ ಕಟ್ಟಡಗಳಿಗೆ ಬಿಬಿಎಂಪಿ ಸೇರಿದಂತೆ ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳು ಸಂಗ್ರಹಿಸುವ ಆಸ್ತಿ ತೆರಿಗೆಯಲ್ಲಿ ಶೇ.50ರಷ್ಟು ವಿನಾಯಿತಿ ನೀಡಬೇಕು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ, ಸಣ್ಣ ವ್ಯಾಪಾರೋದ್ಯಮದ ಸಿಬ್ಬಂದಿ ಕಾರ್ಮಿಕರ ಮೂರು ತಿಂಗಳ ವೇತನವನ್ನು ಸರ್ಕಾರ ಪಾವತಿಸಬೇಕು, ಲಾಕ್ ಡೌನ್ ಹೊರತಾಗಿ ಬೆಂಗಳೂರು ಸುತ್ತ ಮುತ್ತಲಿನ ಕೈಗಾರಿಕೆಗಳು ಜೂನ್ 1ರಿಂದ ಕೋವಿಡ್ ನಿಯಮಾವಳಿಗಳನ್ನು ಪಾಲನೆಯೊಂದಿಗೆ ಪುನರಾರಂಭಗೊಳಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ