ಕೋವಿಡ್ ಕ್ಲಸ್ಟರ್ ಗಳನ್ನು ಗುರ್ತಿಸಲು 45 ವಾರ್ಡ್ ಗಳಲ್ಲಿ ಕೊಳಚೆ ನೀರು ಪರೀಕ್ಷೆ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೋವಿಡ್ ಎರಡನೇ ಅಲೆ ನಡುವೆ ಸೋಂಕು ಹರಡದಿರಲು ತೀವ್ರ ನಿಗಾವಹಿಸಿರುವ ರಾಜ್ಯ ಸರ್ಕಾರ, ಇದೀಗ ಒಳಚರಂಡಿ, ಕೊಳಚೆನೀರಿನ ಪರೀಕ್ಷೆಗೂ ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೋವಿಡ್ ಎರಡನೇ ಅಲೆ ನಡುವೆ ಸೋಂಕು ಹರಡದಿರಲು ತೀವ್ರ ನಿಗಾವಹಿಸಿರುವ ರಾಜ್ಯ ಸರ್ಕಾರ, ಇದೀಗ ಒಳಚರಂಡಿ, ಕೊಳಚೆನೀರಿನ ಪರೀಕ್ಷೆಗೂ ಮುಂದಾಗಿದೆ.

ಮಳೆ ಅಥವಾ ಮ್ಯಾನ್ ಹೋಲ್ ಗಳಿಂದ ಮಲಿನಗೊಂಡಿರುವ ನೀರು ರಸ್ತೆ ಮತ್ತು ಮನೆಗಳಿಗೆ ನುಗ್ಗುತ್ತಿದೆ. ಇದರಿಂದ ಸೋಂಕು, ರೋಗಗಳು ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚಿರುವ ಕಾರಣ, ಇದರ ಪರೀಕ್ಷೆ ನಡೆಸಲು ಮುಂದಾಗಿದೆ ಎಂದು ತಿಳಿದುಬಂದಿದೆ. 

ಈ ಬಗ್ಗೆ ಮಾಹಿತಿ ನೀಡಿರುವ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು, ಮುಂದಿನ ದಿನಗಳಲ್ಲಿ ಯಾವ ಪ್ರದೇಶದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗಲಿದೆ ಎಂಬುದನ್ನು ತಿಳಿಯಲು ಆ ಪ್ರದೇಶದ ಕೊಳಚೆ ನೀರನ್ನು ಪರೀಕ್ಷಿಸಲು ನಿರ್ಧರಿಸಲಾಗಿದೆ. ಪ್ರಾರಂಭಿಕ ಹಂತದಲ್ಲಿ ಬಿಬಿಎಂಪಿಯ 45 ವಾರ್ಡ್‌ಗಳಲ್ಲಿ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ನಗರದ ಶೇ.75 ಜನಸಂಖ್ಯೆಯನ್ನು ಈ ಯೋಜನೆ ಒಳಗೊಳ್ಳಲಿದೆ. 45 ವಾರ್ಡ್‌ಗಳ ಸುಮಾರು 90 ಸ್ಥಳಗಳಲ್ಲಿನ ಕೊಳಚೆ ನೀರನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಮಾದರಿ ಕಾರ್ಯ ದೇಶದಲ್ಲಿಯೇ ಮೊದಲು ಎಂದು ತಿಳಿಸಿದ್ದಾರೆ.

ಈ ನೀರಿನ ಪರೀಕ್ಷೆಯಿಂದ ಕೋವಿಡ್‌ನ ಪ್ರಭಾವ ಎಷ್ಟಿದೆ ಎಂಬುದನ್ನು ತಿಳಿಯಬಹುದು. ಅಲ್ಲದೆ, ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇರುವ ಪ್ರದೇಶವನ್ನು ಕೋವಿಡ್ ಕ್ಲಸ್ಟರ್‌ಗಳನ್ನಾಗಿ ರೂಪಿಸಬಹುದು. ಇಡೀ ನಗರಕ್ಕೆ ಲಾಕ್‌ಡೌನ್‌ ಘೋಷಿಸುವ ಬದಲು ಸಣ್ಣ ಸಣ್ಣ ಕಂಟೈನ್‌ಮೆಂಟ್‌ ವಲಯಗಳನ್ನಾಗಿಯೂ ಮಾಡಬಹುದಾಗಿದೆ ಎಂದು  ಮಾಹಿತಿ ನೀಡಿದ್ದಾರೆ.

ತ್ಯಾಜ್ಯ ನೀರು ಪರೀಕ್ಷೆಯನ್ನು ಅತಿ ಕಡಿಮೆ ವೆಚ್ಚದಲ್ಲಿ ಕೈಗೊಳ್ಳಬಹುದಾಗಿದೆ. ಕೋವಿಡ್‌ ಪ್ರಭಾವದ ಮುನ್ನೆಚ್ಚರಿಕೆಯು ಪ್ರಾರಂಭದಲ್ಲಿಯೇ ಸಿಕ್ಕರೆ ಅದಕ್ಕೆ ತಕ್ಕ ಕ್ರಮಗಳನ್ನು ಕೈಗೊಳ್ಳುವುದು ಸುಲಭವಾಗುತ್ತದೆ. ಇದಕ್ಕೆ ನೀತಿಗಳನ್ನು ರೂಪಿಸಲೂ ಅನುಕೂಲವಾಗುತ್ತದೆ. ಪಿಸಿಎಂಎಚ್‌ ರಿಸ್ಟೋರ್‌ ಹೆಲ್ತ್‌ ಅಂಡ್‌ ವೆಲ್‌ನೆಸ್‌, ಅಮೆರಿಕದ ಅಂತರರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ (ಯುಎಸ್‌ಎಐಡಿ) ಹಾಗೂ ಸ್ಕಾಲ್ ಫೌಂಡೇಷನ್‌ ಸಹಯೋಗದಲ್ಲಿ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದಿದ್ದಾರೆ. 

ಜಲ ಚಳುವಳಿಗಾರ ಮತ್ತು ನಗರ ಯೋಜಕ ವಿಶ್ವನಾಥ್ ಎಸ್ ಅವರು ಪ್ರತಿಕ್ರಿಯೆ ನೀಡಿ, ನೀರನ್ನು ಕೃಷಿಗೆ ಸಹ ಬಳಸುವುದರಿಂದ ತ್ಯಾಜ್ಯ ನೀರಿನ ಅಧ್ಯಯನ ಬಹಳ ಮುಖ್ಯವಾಗಿದೆ. ಆದ್ದರಿಂದ, ಈ ಅಧ್ಯಯನವು ಉತ್ತಮ ಆರೋಗ್ಯ ಯೋಜನೆಗೆ ಮಾತ್ರವೇ ಅಲ್ಲದೆ, ಆರ್ಥಿಕ ಬೆಳವಣಿಗೆ ಮತ್ತು ಆಹಾರ ವಲಯಕ್ಕೂ ಸಹಾಯ ಮಾಡಲಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com