ರಾಜ್ಯದಲ್ಲಿ ರಕ್ತಹೀನತೆ ಎದುರಿಸುತ್ತಿರುವ ಮಕ್ಕಳು, ಮಹಿಳೆಯರ ಸಂಖ್ಯೆ 5 ವರ್ಷದಲ್ಲಿ ಗಣನೀಯ ಏರಿಕೆ

ಸರ್ಕಾರದ ಹಲವು ಕ್ರಮಗಳ ಹೊರತಾಗಿಯೂ ಕರ್ನಾಟಕದಲ್ಲಿ ರಕ್ತ ಹೀನತೆ ಹಾಗೂ ಅದರಿಂದ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಮಕ್ಕಳು, ಮಹಿಳೆಯರ ಸಂಖ್ಯೆ 5 ವರ್ಷಗಳಲ್ಲಿ ಗಣನೀಯ ಏರಿಕೆ ಕಂಡಿದೆ.
(ಸಾಂಕೇತಿಕ ಚಿತ್ರ)
(ಸಾಂಕೇತಿಕ ಚಿತ್ರ)

ಬೆಂಗಳೂರು: ಪೊಷ್ಟಿಕಾಂಶದ ಆಹಾರ ಪೂರೈಕೆ ಮಾಡಲು ಸರ್ಕಾರದ ಹಲವು ಕ್ರಮಗಳ ಹೊರತಾಗಿಯೂ ಕರ್ನಾಟಕದಲ್ಲಿ ರಕ್ತ ಹೀನತೆ ಹಾಗೂ ಅದರಿಂದ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಮಕ್ಕಳು, ಮಹಿಳೆಯರ ಸಂಖ್ಯೆ 5 ವರ್ಷಗಳಲ್ಲಿ ಗಣನೀಯ ಏರಿಕೆ ಕಂಡಿದೆ. 

ರಕ್ತ ಹೀನತೆ ಸಮಸ್ಯೆ ಮಹಿಳೆಯರಲ್ಲಿ ಶೇ.48 ರಷ್ಟು ಏರಿಕೆಯಾಗಿದ್ದರೆ, 6 ತಿಂಗಳಿನಿಂದ 59 ತಿಂಗಳವರೆಗಿನ ಮಕ್ಕಳಲ್ಲಿ ಈ ಪ್ರಮಾಣ ಶೇ.66 ರಷ್ಟು ಹೆಚ್ಚಾಗಿದೆ. 

ಇದನ್ನೂ ಓದಿ: ಪೌಷ್ಟಿಕಾಂಶದ ಕೊರತೆ, ಬಡತನದಿಂದ ರಾಜ್ಯದಲ್ಲಿ ಮಕ್ಕಳ ಅಂಧತ್ವ ಹೆಚ್ಚಳ

ಇತ್ತೀಚೆಗೆ ನಡೆದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್ಎಫ್ ಹೆಚ್ಎಸ್)-5ಯಲ್ಲಿ 2015-16 ಕ್ಕೆ ಹೋಲಿಕೆ ಮಾಡಿದರೆ ರಕ್ತ ಹೀನತೆ ಎದುರಿಸುತ್ತಿರುವ ಮಕ್ಕಳ ಸಂಖ್ಯೆ ಶೇ.5 ಕ್ಕೆ ಹಾಗೂ ಮಹಿಳೆಯರ ಸಂಖ್ಯೆ ಶೇ.3 ಕ್ಕೆ ಏರಿಕೆಯಾಗಿದೆ. 

ವೈದ್ಯರ ಪ್ರಕಾರ ಆರೋಗ್ಯ ಸೌಲಭ್ಯಗಳ ಕೊರತೆ ರಕ್ತಹೀನತೆ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಇರುವ ಒಂದು ಕಾರಣವಾಗಿದ್ದು ಆತಂಕ ಮೂಡಿಸುತ್ತಿದೆ. ಮಕ್ಕಳಲ್ಲಿನ ಏಕಾಗ್ರತೆ ಮೇಲೆ ಈ ಸಮಸ್ಯೆ ದುಷ್ಪರಿಣಾಮ ಬೀರಬಹುದು, ಬೇರೆ ರೀತಿಯ ಸೋಂಕುಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದ್ದು  ಬೆಳವಣಿಗೆಯನ್ನು ಕುಂಠಿತಗೊಳಿಸಬಹುದೆಂದು ಸಾರ್ವಜನಿಕ ಆರೋಗ್ಯ ವೈದ್ಯರು ಮತ್ತು ಸಂಶೋಧಕರಾದ ಡಾ.ಸಿಲ್ವಿಯಾ ಕರ್ಪಗಮ್ ಹೇಳಿದ್ದಾರೆ.

ದಲಿತರು, ಆದಿವಾಸಿ ಮಂದಿಯ ಮಕ್ಕಳು ನಿಧಾನಗತಿಯ ಕಲಿಕೆಯನ್ನು ಹೊಂದಿರುತ್ತಾರೆ. ಈ ವರ್ಗದವರಲ್ಲಿನ ಮಕ್ಕಳನ್ನು ರಕ್ತ ಹೀನತೆ ಕಾಡಿದರೆ ಮತ್ತಷ್ಟು ಸಮಸ್ಯೆಯನ್ನು ಆ ಮಕ್ಕಳು ಎದುರಿಸಬೇಕಾಗುತ್ತದೆ ಎನ್ನುತ್ತಾರೆ ಡಾ.ಸಿಲ್ವಿಯಾ ಕರ್ಪಗಮ್.

ನಗರಪ್ರದೇಶದಲ್ಲಿ ಶೇ.62.8 ರಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಶೇ.67.1 ರಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದು ಸಮಗ್ರವಾದ ವಿಧಾನದೊಂದಿಗೆ ಚಿಕಿತ್ಸೆ ನೀಡಿದರಷ್ಟೇ ಈ ಸಮಸ್ಯೆಯಿಂದ ಮುಕ್ತಿಪಡೆಯುವುದು ಸಾಧ್ಯ ಎಂಬುದು ವೈದ್ಯರ ಅಭಿಪ್ರಾಯವಾಗಿದೆ.

ಇದನ್ನೂ ನೋಡಿ: ಆಪಲ್ ನ ಆರೋಗ್ಯಕಾರಿ ಉಪಯೋಗಗಳು: ದಿನಕ್ಕೊಂದು ಸೇಬು ತಿನ್ನುವುದರಿಂದ ಹೃದಯದ ಕಾಯಿಲೆ ದೂರ...!
 
ರಕ್ತಹೀನತೆ ಪ್ರಸವಪೂರ್ವ ಹಾಗೂ ಪ್ರಸವದ ನಂತರದಲ್ಲಿ ತಾಯಂದಿರ ಸಾವಿನ ಪ್ರಕರಣಗಳಿಗೆ ಕಾರಣವಾಗಬಹುದಾಗಿದ್ದು, ನಿಶ್ಶಕ್ತಿ, ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಕುಸಿತ, ಅವಧಿಗೂ ಮುನ್ನ ಪ್ರಸವ, ಕಡಿಮೆ ತೂಕದ ಶಿಶುಗಳ ಜನನಕ್ಕೂ ಕಾರಣವಾಗಬಹುದಾಗಿದೆ. 

ಜಾಗತಿಕ ಮಟ್ಟದಲ್ಲಿ ರಕ್ತ ಹೀನತೆಗೆ ಕಬ್ಬಿಣಾಂಶ ಕಡಿಮೆ ಇರುವುದು ಕಾರಣ ಎಂದು ಅಂದಾಜಿಸಲಾಗಿದೆ. ಆದರೆ ಮಲೇರಿಯಾ, ಕೊಕ್ಕೆ ಹುಳುಗಳು, ಲಾಡಿಹುಳು ಇತರ ಪೌಷ್ಟಿಕಾಂಶ ಕೊರತೆ, ದೀರ್ಘಕಾಲದ ತೀವ್ರವಾದ ಸೋಂಕುಗಳು ಮತ್ತು ಆನುವಂಶಿಕ ಪರಿಸ್ಥಿತಿಗಳೂ ಸಹ ಕಾರಣವಾಗಬಹುದಾಗಿದೆ. 

ಕೇವಲ ಕಬ್ಬಿಣಾಂಶದ ಕೊರತೆಯೊಂದನ್ನೇ ಆಧಾರವಾಗಿಟ್ಟುಕೊಂಡು ರಕ್ತಹೀನದ ಸಮಸ್ಯೆಗೆ ಚಿಕಿತ್ಸೆ ಕೊಡಲಾಗುವುದಿಲ್ಲ, ಸಮಗ್ರವಾದ ವಿಧಾನದಲ್ಲಿ ರೋಗ ನಿರ್ಣಯ ಮಾಡಿ ರಕ್ತ ಹೀನತೆಗೆ ಚಿಕಿತ್ಸೆ ನೀಡಬೇಕಾಗುತ್ತದೆ ಎನ್ನುತ್ತಾರೆ , ದಿವಾಕರ್ ಸ್ಪೆಷಾಲಿಟಿ ಆಸ್ಪತ್ರೆ, ಬೆಂಗಳೂರಿನ  ವೈದ್ಯಕೀಯ ನಿರ್ದೇಶಕರು, ವೆಲ್ ವುಮೆನ್ ಹೆಲ್ತ್‌ಕೇರ್ ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಗೈನಕಾಲಜಿ ಮತ್ತು ಪ್ರಸೂತಿಶಾಸ್ತ್ರ (FIGO) ದ ಅಧ್ಯಕ್ಷರಾದ ಡಾ.ಹೇಮಾ ದಿವಾಕರ್.

ಇನ್ನು ಸ್ಥೂಲಕಾಯದ ಸಮಸ್ಯೆಯ ಬಗ್ಗೆಯೂ ಎನ್ಎಫ್ ಹೆಚ್ಎಸ್-5 ವರದಿ ಮಾಹಿತಿ ನೀಡಿದ್ದು, ನಗರ ಭಾಗದ ಮಹಿಳೆಯರಲ್ಲಿ ಸ್ಥೂಲಕಾಯದ ಸಮಸ್ಯೆ ಶೇ.23.3 ರಿಂದ ಶೇ.37.1 ಕ್ಕೆ ಏರಿಕೆಯಾಗಿದ್ದರೆ ಗ್ರಾಮೀಣ ಭಾಗದಲ್ಲಿ ಶೇ.22.1 ರಿಂದ ಶೇ.25 ಕ್ಕೆ ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com