ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸಲು ಸಕ್ಕರೆ ಕಾರ್ಖಾನೆಗಳಿಗೆ ಗಡುವು ನೀಡಿದ ರಾಜ್ಯ ಸರ್ಕಾರ!

ಪ್ರಸಕ್ತ ಸಾಲಿನಲ್ಲಿ ಕಬ್ಬು ಪೂರೈಸಿರುವ ರೈತರಿಗೆ ಅಕ್ಟೋಬರ್ 03 ರೊಳಗೆ ಸಕ್ಕರೆ ಕಾರ್ಖಾನೆ ಮಾಲೀಕರು ಬಾಕಿ ಪಾವತಿ ಮಾಡಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಮೂಲಕ ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಕಬ್ಬು ಪೂರೈಸಿರುವ ರೈತರಿಗೆ ಅಕ್ಟೋಬರ್ 03 ರೊಳಗೆ ಸಕ್ಕರೆ ಕಾರ್ಖಾನೆ ಮಾಲೀಕರು ಬಾಕಿ ಪಾವತಿ ಮಾಡಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಮೂಲಕ ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ. 

ಕಬ್ಬು ಬೆಳೆಗಾರರ ಬಾಕಿ ಪಾವತಿ ಮಾಡುವ ಸಂಬಂಧ ಕೈಮಗ್ಗ ಮತ್ತು ಜವಳಿ ಇಲಾಖೆ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅಧ್ಯಕ್ಷತೆಯಲ್ಲಿ ನಿನ್ನೆಯಷ್ಟೇ ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಯಿತು. 

ಸಭೆಯಲ್ಲಿ ಸುದೀರ್ಘ ಚರ್ಚೆ ಬಳಿಕ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಬಾಕಿ ಹಣ ಬಿಡುಗಡೆಗೆ ಸಚಿವರು ಎರಡು ದಿನಗಳ ಗಡುವು ನೀಡಿದರು.

ಪ್ರಸ್ತಕ ಸಾಲಿನಲ್ಲಿ ರೈತರ ಕಬ್ಬಿನ ಹಣ ಪಾವತಿ ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳು ಇನ್ನೆರಡು ದಿನಗಳಲ್ಲಿ(ಅಕ್ಟೋಬರ್ 03 ) ಹಣ ಪಾವತಿ ಮಾಡಬೇಕು. ತಪ್ಪಿದಲ್ಲಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮ ಕೈಗೊಳ್ಳಲಿದೆ. ಈಗಾಗಲೇ ವಿಜಯಪುರ ಜಿಲ್ಲೆ ಕಾರಜೋಳದ ಬಸವೇಶ್ವರ ಶುಗರ್ ಹಾಗೂ ಯಾದಗಿರಿ ಜಿಲ್ಲೆಯ ಕೋರ್ ಗ್ರೀನ್ ಶುಗರ್ ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಬಾಕಿ ವಸೂಲಾತಿಗೆ ನೊಟೀಸ್ ಜಾರಿಗೊಳಿಸಲಾಗಿದೆ. ಉಳಿದ ಕಾರ್ಖಾನೆಗಳು ಇನ್ನೆರಡು ದಿನಗಳಲ್ಲಿ ಬಾಕಿ ಹಣ ಪಾವತಿಸಿದ್ದರೆ ಅವರೂ ಸಹ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಸಚಿವರು ತಾಕೀತು ಮಾಡಿದರು.

ಸಕ್ಕರೆ ಉದ್ಯಮವನ್ನು ಸಂರಕ್ಷಿಸಲು ಸರ್ಕಾರ ಬದ್ಧವಾಗಿದೆ. ಆದರೆ ರೈತ ಹಿತರಕ್ಷಣೆ ಸರ್ಕಾರದ ಮೊದಲ ಆದ್ಯತೆ ನೀಡುತ್ತದೆ. ಸರ್ಕಾರದ ನೀತಿ ನಿಯಮಗಳನ್ನು ಪಾಲನೆ ಮಾಡಿ ಉದ್ಯಮ ನಡೆಸುವಂತೆ ಸಚಿವರು ಕಾರ್ಖಾನೆಗಳಿಗೆ ತಾಕೀತು ಮಾಡಿದರು. 

ಸಭೆಯಲ್ಲಿ 2020-21 ಹಂಗಾಮಿನ ಮತ್ತು ಹಿಂದಿನ ಸಾಲುಗಳ ಕಬ್ಬು ಬಿಲ್ಲು ಬಾಕಿ ಪಾವತಿಯ ಬಗ್ಗೆ. 2021-22 ನೇ ಕಬ್ಬು ಅರೆಯುವ ಹಂಗಾಮನ್ನು ಪ್ರಾರಂಭಿಸಲು ಪೂರ್ವಸಿದ್ಧತಾ ಯೋಜನೆಗಳು, ಕಾರ್ಖಾನೆಗಳ ಕಾರ್ಯ ವ್ಯಾಪ್ತಿಯಲ್ಲಿ ಪ್ರಸಕ್ತ ಹಂಗಾಮಿನಲ್ಲಿ ದೊರೆಯಬಹುದಾದ ಕಬ್ಬಿನ ಲಭ್ಯತೆಯ ಬಗ್ಗೆ ಹಾಗೂ ಕಾರ್ಖಾನೆಗಳು 2021-22ರ ಹಂಗಾಮಿಗೆ ಕಬ್ಬು ಸರಬರಾಜು ಸಂಬಂಧ ರೈತರೊಂದಿಗೆ ಮಾಡಿಕೊಂಡಿರುವ ದ್ವಿಪಕ್ಷೀಯ ಒಪ್ಪಂದ ಕುರಿತು, ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚ, ಎಥನಾಲ್ ಹಾಗೂ ಕಬ್ಬಿನ ಉಪ-ಉತ್ಪಾದಕಗಳ ಉತ್ಪಾದನಾ ಯೋಜನೆಯ ಪ್ರಗತಿ ಬಗ್ಗೆ ಪರಿಶೀಲಿಸಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com