ನಗರದಲ್ಲಿ 1,100 ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ: ಸಚಿವ ಆರ್. ಅಶೋಕ್
ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು ಇರುವ 1751 ಕೆರೆಗಳ ಪೈಕಿ 1500 ಕೆರೆಗಳು ಒತ್ತುವರಿಯಾಗಿದ್ದು, ಈ ಪೈಕಿ 1100 ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಹೇಳಿದ್ದಾರೆ.
ವಿಧಾನಪರಿಷತ್ ನಲ್ಲಿ ಜೆಡಿಎಸ್ ಸದಸ್ಯ ಅಪ್ಪಾಜಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಿನ ಹಲವು ಕೆರೆ ಜಾಗಗಳಲ್ಲಿ ಬಸ್ ನಿಲ್ದಾಣ, ಬಿಡಿಎ ಲೇಔಟ್‌ಗಳು ತಲೆ ಎತ್ತಿವೆ. ಬಿಡಿಎ ಭೂ ಕಬಳಿಕೆ ಮಾಡಿಕೊಂಡಿದೆ. ಕೆರೆಗಳ ಒತ್ತುವರಿಯಲ್ಲಿ ಬಿಡಿಎಗೆ ಮೊದಲ ಸ್ಥಾನವಾಗಿದ್ದು, ಖಾಸಗಿಯವರೂ ಒತ್ತುವರಿ ಮಾಡಿದ್ದಾರೆ.ಇದೆಲ್ಲವೂ ಈ ಹಿಂದೆ ಆಗಿದೆ, ಈಗ ಆಗಲು ಬಿಡುವುದಿಲ್ಲ. ಹಾಗಾಗಿಯೇ ಪ್ರತಿ ಶನಿವಾರ ಡಿಸಿಗಳು ಕೆರೆಗಳ ಒತ್ತುವರಿ ತೆರವು ಮಾಡಲು ಸೂಚನೆ ನೀಡಲಾಗಿದೆ. ಇರುವ ಕೆರೆ ಉಳಿಸಬೇಕಿದೆ, ಆ ದೃಷ್ಟಿಯಿಂದ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದರು.
ಕೆರೆ ಸಂರಕ್ಷಣೆ ವಿಚಾರದಲ್ಲಿ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕೆರೆ ಒತ್ತುವರಿ ತೆರವುಗೊಳಿಸಲು ಕಟಿಬದ್ಧವಾಗಿದೆ. ಆದರೆ, ಈ ವಿಚಾರದಲ್ಲಿ ಯಾರೂ ಕೂಡ ರಾಜಕಾರಣ ಮಾಡದೆ ಸಹಕರಿಸಬೇಕು. ಆಗ ಮಾತ್ರ ಕೆರೆಗಳನ್ನು ರಕ್ಷಣೆ ಮಾಡಲು ಸಾಧ್ಯ. ರಾಜ ಮಹಾರಾಜರು, ಆಡಳಿತಗಾರರು ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ಕಟ್ಟಿದ ಸಾವಿರಾರು ಕೆರೆಗಳ ಪೈಕಿ ನೂರಾರು ಕೆರೆಗಳನ್ನು ಒತ್ತುವರಿ ಮಾಡಲಾಗಿದೆ.
ಸರ್ಕಾರಿ ಸಂಸ್ಥೆಯಾಗಿರುವ ಬಿಡಿಎ ಕೂಡ ಕೆರೆಗಳನ್ನು ಒತ್ತುವರಿ ಮಾಡಿ ಬಡಾವಣೆ ನಿರ್ಮಾಣ ಮಾಡಿದೆ. ಯಾವುದೇ ಸರ್ಕಾರ ಈ ವರೆಗೆ ಒಂದೇ ಒಂದೂ ಕೆರೆಯನ್ನೂ ಕಟ್ಟಲಿಲ್ಲ. ಹೀಗಿರುವಾಗ ಹಿಂದಿನವರು ಕಟ್ಟಿದ ಕೆರೆಗಳನ್ನಾದರೂ ನಾವು ಉಳಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ನ್ಯಾಯಾಲಯ ಸ್ಪಷ್ಟವಾಗಿ ಕೆರೆ ಒತ್ತುವರಿಗಳನ್ನು ತೆರವುಗೊಳಿಸುವಂತೆ ಆದೇಶಿಸಿದೆ. ನ್ಯಾಯಾಲಯದ ಆದೇಶ ಪಾಲಿಸಲು ಒತ್ತುವರಿ ತೆರವು ಮಾಡಲು ಸರ್ಕಾರ ಮುಂದಾದರೆ, ವಿರೋಧ ಪಕ್ಷಗಳು ತೆರವು ವಿರೋಧಿಸಿ ಪ್ರತಿಭಟನೆ ಮಾಡಲು ಮುಂದಾಗುತ್ತಿವೆ. ಇದು ಎಲ್ಲಾ ಸರ್ಕಾರಗಳ ಅವಧಿಯಲ್ಲಿ ನಡೆದಿದೆ. ಜೊತೆಗೆ ಒತ್ತುವರಿ ತೆರವಿಗೆ ಮುಂದಾದರೆ, ಕೆಲವು ಮಾಧ್ಯಮಗಳು ಬಡವರನ್ನು ಬೀದಿಗೆ ತಳ್ಳುತ್ತಿವೆ ಎಂದು ಟೀಕಿಸುತ್ತವೆ. ಒತ್ತುವರಿ ತೆರವು ಮಾಡಿದ್ದರೆ, ಸರ್ಕಾರಕ್ಕೆ ಕಣ್ಣು ಇಲ್ಲವೇ ಎಂದು ಆರೋಪ ಮಾಡುತ್ತಾರೆ. ಇಂತಹ ಪರಿಸ್ಥಿತಿ ಎಲ್ಲಾ ಸರ್ಕಾರಗಳು ಎದುರಿಸಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪಕ್ಷಗಳು ರಾಜಕಾರಣವನ್ನು ಬದಿಗೊತ್ತಿ ಸಹಕರಿಸಿದರೆ ಮಾತ್ರ ಕೆರೆ ಉಳಿಸಲು ಸಾಧ್ಯ ಎಂದು ಹೇಳಿದರು.
ಇದೇ ವೇಳೆ ಒತ್ತುವರಿಯಾಗಿರುವ ಕೆರೆಗಳ ಕುರಿತು ಅಂಕಿಅಂಶಗಳೊಂದಿಗೆ ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ 39,179 ಇದರ ವಿಸ್ತೀರ್ಣ 7 ಲಕ್ಷ ಎಕರೆಯಷ್ಟಿದೆ. ಇನ್ನು ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 705 , ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ 710, ಬಿಬಿಎಂಪಿಯಲ್ಲಿ 204, ಬಿಡಿಎ ವ್ಯಾಪ್ತಿಯಲ್ಲಿ 5 ಕೆರೆಗಳಿವೆ. ಬೆಂಗಳೂರಿನಲ್ಲಿರುವ, ಅಸ್ತಿತ್ವದಲ್ಲಿರುವ ಕೆರೆಗಳು ಸೇರಿದಂತೆ 837 ಕೆರೆಗಳ ಪೈಕಿ 774 ಕೆರೆಗಳು ಒತ್ತುವರಿಯಾಗಿದ್ದು, 360 ಕೆರೆಗಳನ್ನು ತೆರವುಗೊಳಿಸಲಾಗಿದ್ದು, 384 ಇನ್ನು ಬಾಕಿ ಇದೆ. ಗ್ರಾಮಾಂತರ ಜಿಲ್ಲೆಯಲ್ಲಿನ 710 ಕೆರೆಗಳ ಪೈಕಿ 643 ಕೆರೆಗಳು ಒತ್ತುವರಿಯಾಗಿದ್ದು, 544 ಕೆರೆ ತೆರವುಗೊಳಿಸಲಾಗಿದೆ. ಇನ್ನು 99 ಬಾಕಿ ಇವೆ ಎಂದರು.
ಬಿಬಿಎಂಪಿ ವ್ಯಾಪ್ತಿಯಲ್ಲಿನ 204 ಕೆರೆಗಳ ಪೈಕಿ 460 ಕೆರೆಗಳ ಸಮೀಕ್ಷೆ ಮಾಡಿದ್ದು, 148 ಕೆರೆಗಳ ಒತ್ತುವರಿಯಾಗಿದೆ. 20 ಕೆರೆಗಳನ್ನು ತೆರವುಗೊಳಿಸಲಾಗಿದ್ದು, 128 ಬಾಕಿ ಇವೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ