ರಾಜ್ಯದಲ್ಲಿ ಕೊರೋನಾ ಔಷಧ, ಆಕ್ಸಿಜನ್ ಕೊರತೆಯಿಲ್ಲ, ಮತ್ತಷ್ಟು ಕಟ್ಟುನಿಟ್ಟಿನ ನಿಯಮ ಜಾರಿ, ಪರೀಕ್ಷಾ ಕೇಂದ್ರ ಹೆಚ್ಚಳ: ಡಾ. ಕೆ ಸುಧಾಕರ್ 

ಶೇಕಡಾ 95ರಷ್ಟು ಜನರಿಗೆ ಇವತ್ತಿಗೂ ಕೊರೋನಾ ಸೋಂಕಿತರಿಗೆ ಆಸ್ಪತ್ರೆಯ ಅಗತ್ಯವಿಲ್ಲ. ಆತಂಕದಿಂದ ಆಸ್ಪತ್ರೆಗೆ ಹೋಗಿ ದಾಖಲಾಗಬೇಡಿ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.
ಡಾ ಕೆ ಸುಧಾಕರ್
ಡಾ ಕೆ ಸುಧಾಕರ್

ಬೆಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ಜಿಲ್ಲೆಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ನಿಯಂತ್ರಣ ಮಾಡಲು, ಕೊರೋನಾ ಸೋಂಕಿನ ತಪಾಸಣೆಯನ್ನು ಹೆಚ್ಚಿಸುವುದು, ಚಿಕಿತ್ಸೆ ನೀಡುವುದು, ಕಂಟೈನ್ ಮೆಂಟ್ ವಲಯಗಳನ್ನು ಹೆಚ್ಚು ಮಾಡುವುದು, ಐಸೊಲೇಷನ್ ನಲ್ಲಿರುವವರ ಮೇಲೆ ನಿಗಾ ಇಡಲು, ಮನೆಯಲ್ಲಿ ಕ್ವಾರಂಟೈನ್ ನಲ್ಲಿರುವವರಿಗೆ ಮುದ್ರೆ ಹಾಕುವುದು, ಇದೆಲ್ಲದರ ಬಗ್ಗೆ ಇಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಅತಿ ಹೆಚ್ಚು ಹಾಸಿಗೆಗಳು ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚಾಗಬೇಕಿದೆ. ಹಾಗಾಗಿ ಈಗಿರುವ ಖಾಸಗಿ ಕಾರ್ಪೊರೇಟ್ ಬೃಹತ್ ಆಸ್ಪತ್ರೆಗಳು ಖಾಸಗಿ 3 ಸ್ಟಾರ್, 4 ಸ್ಟಾರ್ ಮತ್ತು 5 ಸ್ಟಾರ್ ಹೊಟೇಲ್ ಗಳನ್ನು ಕನಿಷ್ಠ 10 ಹೊಟೇಲ್ ಗಳನ್ನು ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅವರ ಜೊತೆ ಒಡಂಬಡಿಕೆ ಮಾಡಿಕೊಂಡು ಹೊಟೇಲ್ ಗಳನ್ನೇ ತಾತ್ಕಾಲಿಕ ಆಸ್ಪತ್ರೆಗಳನ್ನಾಗಿ ಅಭಿವೃದ್ಧಿ ಮಾಡಿ ಅಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ಸೋಂಕಿನ ಲಕ್ಷಣವಿರುವವರಿಗೆ ಚಿಕಿತ್ಸೆ ನೀಡಲಾಗುತ್ತದೆ.

ಶೇಕಡಾ 95ರಷ್ಟು ಜನರಿಗೆ ಇವತ್ತಿಗೂ ಕೊರೋನಾ ಸೋಂಕಿತರಿಗೆ ಆಸ್ಪತ್ರೆಯ ಅಗತ್ಯವಿಲ್ಲ. ಆತಂಕದಿಂದ ಆಸ್ಪತ್ರೆಗೆ ಹೋಗಿ ದಾಖಲಾಗಬೇಡಿ, ಯಾರಿಗೆ ಮತ್ತು ಸಣ್ಣ ಮತ್ತು ಮಧ್ಯಮ ಪ್ರಮಾಣದ ಸೋಂಕಿನ ಲಕ್ಷಣ ಹೊಂದಿರುವವರು ತಾತ್ಕಾಲಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಿರಿ, ಅಲ್ಲಿ ಕೂಡ ಆಸ್ಪತ್ರೆಗಳ ವೈದ್ಯರು ಕರ್ತವ್ಯ ನಿರ್ವಹಿಸುತ್ತಾರೆ, ತಾತ್ಕಾಲಿಕ ಆಸ್ಪತ್ರೆಗಳಲ್ಲಿ 3 ಸಾವಿರ ಆಸ್ಪತ್ರೆಗಳನ್ನು ಹೊಟೇಲ್ ಗಳಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಹೆಚ್ಚು ರೋಗದ ಲಕ್ಷಣವಿರುವವರು ಮಾತ್ರ ಪ್ರಮುಖ ಆಸ್ಪತ್ರೆಗಳಲ್ಲಿ ದಾಖಲಿಸಬೇಕು, ಸರ್ಕಾರಿ ವೈದ್ಯಕೀಯ ಆಸ್ಪತ್ರೆಗಳಲ್ಲಿ 1 ಸಾವಿರ ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡಬೇಕೆಂದು ಆದೇಶ ಹೊರಡಿಸಲು ಇಂದಿನ ಸಭೆಯಲ್ಲಿ ತೀರ್ಮಾನಿಸಿದ್ದೇವೆ. ಅದೇ ರೀತಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಈ ವರ್ಷ ಒಟ್ಟು 5 ಸಾವಿರ ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಡಬೇಕು ಎಂದು ಹೇಳಲು ತೀರ್ಮಾನ ಕೈಗೊಂಡಿದ್ದೇವೆ. 

ಎಲ್ಲ ಖಾಸಗಿ ಆಸ್ಪತ್ರೆಗಳು ಶೇಕಡಾ 50ರಷ್ಟು ಹಾಸಿಗೆಗಳನ್ನು ಸರ್ಕಾರದಿಂದ ದಾಖಲಿಸುವ ಕೋವಿಡ್ ರೋಗಿಗಳಿಗೆ ಕಾಯ್ದಿರಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ದಾಖಲಾತಿ ಮತ್ತು ಚಿಕಿತ್ಸೆ ಮೇಲೆ ನಿಗಾ ಇಡಲು ಐಎಎಸ್, ಐಪಿಎಸ್ ಜಲಮಂಡಳಿ, ಬೆಸ್ಕಾಂ ಮತ್ತು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಬೇಕು ಎಂದು ಆದೇಶ ನೀಡಲಾಗುತ್ತದೆ ಎಂದರು.

ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚು ಹಾಸಿಗೆಗಳನ್ನು ಕೊರೋನಾಗೆ ಮೀಸಲಿಡಲು ಸೂಚಿಸಲಾಗಿದೆ. ಖಾಸಗಿ ಆಸ್ಪತ್ರೆಗಳು ಕೂಡ ಹಾಸಿಗೆ ಮೀಸಲಿಡದಿದ್ದರೆ ಗಂಭೀರ ಕ್ರಮ ಕೈಗೊಳ್ಳಬೇಕಾಗುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಖಾಸಗಿ ಆಂಬುಲೆನ್ಸ್‌ಗಳು ಜನರಿಂದ ಹೆಚ್ಚು ದುಡ್ಡು ವಸೂಲಿ ಮಾಡಿದರೆ ಶಿಸ್ತು ಕ್ರಮ ಜರುಗಿಸಲಾಗುವುದು, ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ರೆಮೆಡೆಸಿವಿರ್ ಕೊರತೆಯಿಲ್ಲ: ಆಸ್ಪತ್ರೆಗಳಲ್ಲಿ ಕೊರೋನಾ ರೋಗಿಗಳಿಗೆ ನೀಡುವ ರೆಮೆಡೆಸಿವಿರ್ ಸೇರಿದಂತೆ ಆಮ್ಲಜನಕದ ಕೊರತೆಯಿಲ್ಲ.30 ಸಾವಿರ ಸಿಲಿಂಡರ್ ಇದ್ದು, ಇನ್ನೂ ತುರ್ತಾಗಿ 5 ಸಾವಿರ ಆಮ್ಲಜನಕ ಸಿಲಿಂಡರ್ ಖರೀದಿ ಮಾಡಬೇಕು. 80 ಸಾವಿರ ಆಕ್ಸಿಜನ್ ಘಟಕಗಳ ಸ್ಥಾಪನೆಗೆ ಹೊಸದಾಗಿ ಟೆಂಡರ್ ಕರೆದಿದ್ದೇವೆ. ರೆಮೆಡಿಸಿವಿರ್ ಸಾಕಷ್ಟು ದಾಸ್ತಾನು ಇದೆ, ಆದರೂ ಹೆಚ್ಚುವರಿ ಔಷಧಿ ಖರೀದಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೋವಿಡ್ ಪರೀಕ್ಷೆ ವರದಿಯನ್ನು 24 ಗಂಟೆಗಳ ಒಳಗಾಗಿ ನೀಡುವ ವ್ಯವಸ್ಥೆ ಮಾಡಬೇಕಾಗಿದೆ. ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲು ಬೆಂಗಳೂರಿನಲ್ಲಿ 400 ಆಂಬ್ಯುಲೆನ್ಸ್ ಒದಗಿಸಬೇಕು, ಎಲ್ಲ ಜಿಲ್ಲೆಗಳಿಗೂ ಅಗತ್ಯ ಆಂಬ್ಯುಲೆನ್ಸ್ ಒದಗಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು. 


ಏಪ್ರಿಲ್ 18ಕ್ಕೆ ಸರ್ವಪಕ್ಷ ಸಭೆ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಏಪ್ರಿಲ್ 18ರಂದು ಸರ್ವಪಕ್ಷ ಸಭೆ ನಡೆಯಲಿದ್ದು ಲಾಕ್ ಡೌನ್, ನಿರ್ಬಂಧ ಮತ್ತು ಕರ್ಫ್ಯೂ ವಿಸ್ತರಣೆ ಬಗ್ಗೆ ಅದರಲ್ಲಿ ತೀರ್ಮಾನಿಸಲಾಗುವುದು ಎಂದು ಸಚಿವ ಸುಧಾಕರ್ ತಿಳಿಸಿದರು.

ಸಭೆ, ಕಾರ್ಯಕ್ರಮಕ್ಕೆ ನಿರ್ಬಂಧ: ಒಳಾಂಗಣ ಸಮಾರಂಭಗಳಲ್ಲಿ 100ಕ್ಕೂ ಹೆಚ್ಚು ಜನರನ್ನು ಸೇರಿಸಬಾರದು, ಹೊರಾಂಗಣ ಕಾರ್ಯಕ್ರಮದಲ್ಲಿ 200 ಜನರಿಗಿಂತ ಹೆಚ್ಚು ಸೇರುವಂತಿಲ್ಲ. ಕೋವಿಡ್-9ನಿಂದ ಮೃತಪಟ್ಟ ಕುಟುಂಬಸ್ಥರಿಗೆ ಶವಾಗಾರ ಮತ್ತು ವಾಹನ ವ್ಯವಸ್ಥೆ ಮಾಡಲಾಗುವುದು ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com