ಚುನಾವಣೆ ನಡೆಸುವುದಾದರೆ, ನೀಟ್ ಪರೀಕ್ಷೆಯನ್ನೇಕೆ ನಡೆಸಲು ಸಾಧ್ಯವಿಲ್ಲ: ಕೇಂದ್ರಕ್ಕೆ ರಾಜ್ಯ ವೈದ್ಯರ ಪ್ರಶ್ನೆ

ದೇಶದಲ್ಲಿ ಚುನಾವಣೆಗಳು ನಡೆಯಲು ಸಾಧ್ಯವಾಗಿದೆ ಎಂದಾದರೆ, ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ (ನೀಟ್) ಪರೀಕ್ಷೆಯನ್ನೇಕೆ ನಡೆಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯದ ವೈದ್ಯರು ಪ್ರಶ್ನೆ ಮಾಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ದೇಶದಲ್ಲಿ ಚುನಾವಣೆಗಳು ನಡೆಯಲು ಸಾಧ್ಯವಾಗಿದೆ ಎಂದಾದರೆ, ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ (ನೀಟ್) ಪರೀಕ್ಷೆಯನ್ನೇಕೆ ನಡೆಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯದ ವೈದ್ಯರು ಪ್ರಶ್ನೆ ಮಾಡಿದ್ದಾರೆ. 

ಈ ಹಿಂದೆ ಹೇಳಿಕೆ ನೀಡಿದ್ದ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು, ಕೊರೋನಾ ವೈರಸ್ ಹೆಚ್ಚಾಗುತ್ತಿರುವ ಕಾರಣ ಏಪ್ರಿಲ್ 18 ರಂದು ನಡೆಯಬೇಕಿದ್ದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ (ನೀಟ್) ಮುಂದೂಡಲಾಗಿದೆ ಎಂದು ಹೇಳಿದ್ದರು. 

ಕೊರೋನಾ ವೈರಸ್ ಕಾರಣ ವಿದ್ಯಾರ್ಥಿಗಳ ಆರೋಗ್ಯ ಗಮನದಲ್ಲಿಟ್ಟುಕೊಂಡು ಕೇಂದ್ರ ಈ ನಿರ್ಧಾರ ತೆಗೆದುಕೊಂಡಿದೆ. ಕೊರೋನಾ ಪರಿಸ್ಥಿತಿ ನೋಡಿಕೊಂಡು ಮುಂದಿನ ದಿನಾಂಕವನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದ್ದರು. 

ಇದರಂತೆ ಕೊರೋನಾ ಕಾರಣದಿಂದಾಗಿ ನೀಟ್ ಪರೀಕ್ಷೆಯನ್ನು 2ನೇ ಬಾರಿ ಮುಂದೂಡಿದಂತಾಗಿದೆ. ಜನವರಿಯಲ್ಲಿ ನಡೆಯಬೇಕಿದ್ದ ಪರೀಕ್ಷೆಯನ್ನು ಏಪ್ರಿಲ್ 18ಕ್ಕೆ ಮುಂದೂಡಲಾಗಿತ್ತು. ಇದೀಗ 2ನೇ ಬಾರಿ ಮುಂದೂಡಲಾಗಿದೆ,

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿರುವ  ಕರ್ನಾಟಕ ಅಸೋಸಿಯೇಷನ್ ​​ಆಫ್ ರೆಸಿಡೆಂಟ್ ಡಾಕ್ಟರ್ಸ್ (ಕೆಎಆರ್ ಡಿ), ಜನವರಿಯಲ್ಲಿ ನಡೆಯಬೇಕಿದ್ದ ಪರೀಕ್ಷೆಯನ್ನು ಏಪ್ರಿಲ್ 18ಕ್ಕೆ ಮುಂದೂಡಲಾಗಿತ್ತು. ಇದೀಗ ಮತ್ತೆ ಮುಂದೂಡಲಾಗಿದೆ. ಕುಂಭಮೇಳ, ಚುನಾವಣೆಗಳು, ಚುನಾವಣಾ ರ್ಯಾಲಿಗಳನ್ನು ಸರ್ಕಾರ ನಡೆಸುವುದಾದರೆ, ನೀಟ್ ಪರೀಕ್ಷೆಯನ್ನೇಕೆ ನಡೆಸಲು ಸಾಧ್ಯವಿಲ್ಲ ಎಂದು ಪ್ರಶ್ನಿಸಿದೆ. 

ನಮ್ಮ ಸುರಕ್ಷತೆಗಾಗಿ ಈ ರೀತಿಯ ನಿರ್ಧಾರ ತೆಗೆದುಕೊಳ್ಳಲಾಗಿದ ಎಂದು ಸರ್ಕಾರ ಹೇಳುತ್ತಿದೆ. ಪಿಪಿಇ ಕಿಟ್ ಧರಿಸಿ 8-10 ಗಂಟೆಗಳ ಕಾಲ ಕೋವಿಡ್ ವಾರ್ಡ್‌ಗಳಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದೇವೆ ಸುರಕ್ಷತೆ ಬಗ್ಗೆ ನಾವು ಸರ್ಕಾರಕ್ಕೆ ನೆನಪಿಸಬೇಕೇ? 2-3 ಗಂಟೆಗಳ ಕಾಲ ಮಾಸ್ಕ್ ಧರಿಸಿ ಪರೀಕ್ಷೆಗಳನ್ನು ಸುರಕ್ಷಿತವಾಗಿ ಬರೆಯಲು ಸಾಧ್ಯವಿಲ್ಲವೇ? ಎಂದು ಕರ್ನಾಟಕ ಅಸೋಸಿಯೇಷನ್ ​​ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಧ್ಯಕ್ಷ ದಯಾನಂದ್ ಸಾಗರ್ ಎಲ್ ಅವರು ಪ್ರಶ್ನಿಸಿದ್ದಾರೆ. 

ಕಳೆದ ಒಂದೂವರೆ ವರ್ಷಗಳಿಂದ ನೀಟ್‌ಗಾಗಿ ತಯಾರಿ ನಡೆಸುತ್ತಿದ್ದ ಒಂದು ಲಕ್ಷಕ್ಕೂ ಹೆಚ್ಚು ಸ್ಥಳೀಯ ವೈದ್ಯರ ಮಾನಸಿಕ ಒತ್ತಡವನ್ನು ಕೇಂದ್ರ ಸರ್ಕಾರ ಅರ್ಥಮಾಡಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಕೇಂದ್ರ ಸರ್ಕಾರ ಪರೀಕ್ಷೆಗಳನ್ನು ಬರೆಯಲು ಅವಕಾಶ ನೀಡಬೇಕು. ಪರೀಕ್ಷೆಗಳನ್ನು ಮುಂದೂಡುವುದು ನಮಗೆ ಇಷ್ಟವಿಲ್ಲ. ನೀಟ್-ಪಿಜಿ ಸೀಟ್ ಪಡೆದವರು ಮತ್ತೆ ಆರೋಗ್ಯ ಸೇವೆಗೆ ಬರಬಹುದು ಮತ್ತು ಸಾಂಕ್ರಾಮಿಕ ರೋಗ ದೂರಾಗಿಸುವಲ್ಲಿ ಕರ್ತವ್ಯ ನಿರ್ವಹಿಸಬಹುದು. ಪರೀಕ್ಷೆ ಮುಂದೂಡುತ್ತಿರುವುದು ಸರ್ಕಾರದ ಅತ್ಯಂತ ಕೆಟ್ಟ ನಡೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com