ಬೆಂಗಳೂರು: ಖಾಸಗಿ ವಿಡಿಯೋ ಬಹಿರಂಗಗೊಳಿಸುವ ಬೆದರಿಕೆಯೊಡ್ಡಿ ಹಣ ಪೀಕಿದ್ದ ಎಫ್ಬಿ ಸ್ನೇಹಿತೆ ವಿರುದ್ದ ಬಿಪಿಒ ಉದ್ಯೋಗಿ ದೂರು

ಫೇಸ್ ಬುಕ್ ಮೂಲಕ ಪರಿಚಯವಾಗಿ ನಂತರ ಖಾಸಗಿ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡು ಬೆದರಿಸಿ 51 ಸಾವಿರ ರೂಪಾಯಿ ಹಣ ಪೀಕಿದ್ದ ಮಹಿಳೆ ವಿರುದ್ಧ 26 ವರ್ಷದ ಯುವಕನೋರ್ವ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. 
ಫೇಸ್ ಬುಕ್
ಫೇಸ್ ಬುಕ್

ಬೆಂಗಳೂರು: ಫೇಸ್ ಬುಕ್ ಮೂಲಕ ಪರಿಚಯವಾಗಿ ನಂತರ ಖಾಸಗಿ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡು ಬೆದರಿಸಿ 51 ಸಾವಿರ ರೂಪಾಯಿ ಹಣ ಪೀಕಿದ್ದ ಮಹಿಳೆ ವಿರುದ್ಧ 26 ವರ್ಷದ ಯುವಕನೋರ್ವ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. 

ಮುನೇಕೊಳಲು ನಿವಾಸಿ ಕಿರಣ್ ಕುಮಾರ್(ಹೆಸರು ಬದಲಿಸಲಾಗಿದೆ) ದೂರಿನ ಆಧಾರದ ಮೇಲೆ ಆತನೊಂದಿಗೆ ಸ್ನೇಹ ಬೆಳೆಸಿದ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಈ ವರ್ಷ ಮೇ ತಿಂಗಳಿನಿಂದ ಈ ಜೋಡಿ ಸಂಪರ್ಕದಲ್ಲಿದ್ದು, ಮೊಬೈಲ್ ಸಂಖ್ಯೆಗಳನ್ನು ಹಂಚಿಕೊಂಡಿದ್ದರು. ನಂತರ ಖಾಸಗಿಯಾಗಿ ಚಾಟ್ ಮಾಡಲು ಪ್ರಾರಂಭಿಸಿದರು. ನಂತರ ವಿಡಿಯೋ ಕಾಲ್ ಮಾಡಿ ಬಟ್ಟೆ ಬಿಚ್ಚುವಂತೆ ಹೇಳಿದ ಮಹಿಳೆ ನಂತರ ಅವುಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಾಳೆ. 

ಈ ವಿಡಿಯೋಗಳನ್ನು ತೋರಿಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದಾಳೆ. ಅಲ್ಲದೆ ಹಣ ನೀಡದಿದ್ದರೆ ಈ ವಿಡಿಯೋಗಳನ್ನು  ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಮತ್ತು ಆತನ ಸ್ನೇಹಿತರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾಳೆ. 

ನಂತರ ಮಹಿಳೆಯ ಬ್ಯಾಂಕ್ ಖಾತೆಗೆ ಡಿಜಿಟಲ್ ಪಾವತಿಯ ಮೂಲಕ 51,000 ರೂ. ಹಾಕಿದ್ದಾನೆ. ಅಷ್ಟಕ್ಕೆ ನಿಲ್ಲದೆ ಇನ್ನಷ್ಟು ಹಣ ಕಳುಹಿಸುವಂತೆ ಬೆದರಿಕೆ ಹಾಕುತ್ತಿದ್ದರಿಂದ ಮನನೊಂದ ಯುವಕ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾನೆ. ಸದ್ಯ ಯುವಕನ ದೂರಿನನ್ವಯ ಹಣವನ್ನು ಎಲ್ಲಿಗೆ ವರ್ಗಾಯಿಸಲಾಗಿದೆ ಎಂಬ ವಿವರಗಳನ್ನು ಆಧರಿಸಿ, ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುತ್ತಿದ್ದಾರೆ ಮತ್ತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಕೆಆರ್ ಪುರಂನಲ್ಲಿ ವಾಸವಾಗಿದ್ದ 26 ವರ್ಷದ ಎಂಬಿಎ ಪದವೀಧರ ಇದೇ ರೀತಿಯ ಪ್ರಕರಣದಲ್ಲಿ ಸಿಲುಕಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದನು. ಈ ಪ್ರಕರಣ ಸಂಬಂಧ ವೈಟ್ ಫೀಲ್ಡ್ ಪೊಲೀಸರು ರಾಜಸ್ಥಾನದ ರಸೂಲ್ ಪುರ ಗ್ರಾಮದ ರಾಬಿನ್ ಭಾರತ್(22) ಮತ್ತು ಜಾವೇದ್ ರೆಹಮಾನ್ (25) ಅವರನ್ನು ಬಂಧಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com