ಸಹಾಯಕ್ಕೆ ಬಂದ ಮನೆ ಮನೆ ಸಮೀಕ್ಷೆ: ಅಧಿಕಾರಿಗಳಿಂದ 19 ಸಾವಿರ ಸಾರಿ/ಐಎಲ್ಐ ಪ್ರಕರಣ ಪತ್ತೆ!

ಸಂಭಾವ್ಯ ಕೋವಿಡ್ -19 ಪ್ರಕರಣಗಳನ್ನು ಪತ್ತೆ ಹಚ್ಚುವ ಸಲುವಾಗಿ ಆರೋಗ್ಯ ಇಲಾಖೆ ಹಮ್ಮಿಕೊಂಡಿರುವ ಮನೆ-ಮನೆಗೆ ಸಮೀಕ್ಷೆ ಸಾಕಷ್ಟು ಸಹಾಯ ಮಾಡುತ್ತಿದೆ. ಮನೆ ಮನೆ ಸಮೀಕ್ಷೆಯಿಂದಾಗಿ ಬೆಂಗಳೂರು ನಗರದ ಅಧಿಕಾರಿಗಳು 18,669 ಸಾರಿ/ಐಎಲ್ಐ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಂಭಾವ್ಯ ಕೋವಿಡ್ -19 ಪ್ರಕರಣಗಳನ್ನು ಪತ್ತೆ ಹಚ್ಚುವ ಸಲುವಾಗಿ ಆರೋಗ್ಯ ಇಲಾಖೆ ಹಮ್ಮಿಕೊಂಡಿರುವ ಮನೆ-ಮನೆಗೆ ಸಮೀಕ್ಷೆ ಸಾಕಷ್ಟು ಸಹಾಯ ಮಾಡುತ್ತಿದೆ. ಮನೆ ಮನೆ ಸಮೀಕ್ಷೆಯಿಂದಾಗಿ ಬೆಂಗಳೂರು ನಗರದ ಅಧಿಕಾರಿಗಳು 18,669 ಸಾರಿ/ಐಎಲ್ಐ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆಂದು ತಿಳಿದುಬಂದಿದೆ. 

ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಶಿಕ್ಷಕರು, ಕಂದಾಯ ಇಲಾಖೆ ಅಧಿಕಾರಿ ಮತ್ತು ಗ್ರಾಮೀಣಾಭಿವೃದ್ಧಿ ಅಧಿಕಾರಿಗಳನ್ನೊಳಗೊಂಡ ತಂಡವು ಈ ಮನೆ ಮನೆ ಸಮೀಕ್ಷೆ ನಡೆಸುತ್ತಿದ್ದು, ಸಮೀಕ್ಷೆಯಲ್ಲಿ ಜೂನ್ 1 ಮತ್ತು ಆಗಸ್ಟ್ 15 ರ ನಡುವೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಿತಿಗಳನ್ನು ಹೊರತುಪಡಿಸಿ ಉಳಿದೆಡೆ ಒಟ್ಟಾರೆ 18,669 ಸಾರಿ/ಐಎಲ್ಐ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಈ ಪೈಕಿ 1,909 ಮಂದಿಯ ಪರೀಕ್ಷೆಗಳಲ್ಲಿ ಸೋಂಕು ಇರುವುದು ಧೃಢಪಟ್ಟಿದೆ ಎನ್ನಲಾಗುತ್ತಿದೆ. 

ಇನ್ನು ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಆರೋಗ್ಯ ಸಿಬ್ಬಂದಿಗಳು ಹೋಂ ಐಸೋಷೇನ್ ನಲ್ಲಿರುವ 1,602 ಮಂದಿಗೆ ಚಿಕಿತ್ಸೆ ನೀಡುತ್ತಿದ್ದು, ಕೋವಿಡ್ ಕೇರ್ ಕೇಂದ್ರಗಳಲ್ಲಿ 241 ಮಂದಿ ಹಾಗೂ 66 ಮಂದಿ ಸೋಂಕಿತರು ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆಂದು ವರದಿಗಳು ತಿಳಿಸಿವೆ. 

ಮನೆ ಮನೆ ಸಮೀಕ್ಷೆ ನಡೆಸಿರುವ ಅಧಿಕಾರಿಗಳು ಹಾಗೂ ಆರೋಗ್ಯ ಸಿಬ್ಬಂದಿಗಳು, ಜನರ ಬಳಿ ಕೋವಿಡ್ ರೋಗಲಕ್ಷಣಗಳ ಕುರಿತು ವಿಚಾರಿಸುತ್ತಾರೆ. ಲಕ್ಷಣಗಳಿರುವುದು ಪತ್ತೆಯಾಗಿದ್ದೇ ಆದರೆ, ಸ್ಥಳದಲ್ಲಿಯೇ ಪರೀಕ್ಷೆ ನಡೆಸುವ ಕಾರ್ಯವನ್ನೂ ಮಾಡುತ್ತಾರೆ. ಸೋಂಕು ಪತ್ತೆಯಾಗಿದ್ದೇ ಆದರೆ, ಮನೆಯಲ್ಲಿ ಐಸೋಲೇಷನ್ ನಲ್ಲಿರುವ ವ್ಯವಸ್ಥೆಗಳನ್ನು ಗಮನಿಸಿ ವೈದ್ಯಕೀಯ ಕಿಟ್ ಗಳನ್ನು ನೀಡುತ್ತಾರೆಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರು ಹೇಳಿದ್ದಾರೆ. 

ಸೋಂಕಿತ ವ್ಯಕ್ತಿಗೆ ಮನೆಯಲ್ಲಿ ಐಸೋಲೇಷನ್ ನಲ್ಲಿರುವ ವ್ಯವಸ್ಥೆಗಳು ಇದ್ದೇ ಹೋದಲ್ಲಿ ಹತ್ತಿರದ ಕೋವಿಡ್ ಕೇರ್ ಕೇಂದ್ರ ಅಥವಾ ಸರ್ಕಾರಿ ಆಸ್ಪತ್ರೆಗೆ ಶಿಫಾರಸು ಮಾಡುತ್ತಾರೆ. ಪರಿಸ್ಥಿತಿ ನಿಭಾಯಿಸಲು ಈಗಾಗಲೇ ಗ್ರಾಮೀಣ ಮಟ್ಟದ ಟಾಸ್ಕ್ ಫೋರ್ಸ್ ಹಾಗೂ ವಾರ್ಡ್ ಮಟ್ಟದ ಟಾಸ್ಕ್ ಫೋರ್ಸ್'ನ್ನೂ ರಚಿಸಲಾಗಿದೆ  ಎಂದು ತಿಳಿದುಬಂದಿದೆ. 

ಬಿದರಹಳ್ಳಿಯಲ್ಲಿ 195, ರಾಜಾನುಕುಂಟೆ 145, ಕೊಡತಿ 139, ಹಾಲನಾಯಕನಹಳ್ಳಿ 138 ಮತ್ತು ಕಗ್ಗಲಿಪುರದಲ್ಲಿ 127 ಸೋಂಕಿತರಿದ್ದು, ಇವು ಗರಿಷ್ಟ ಸೋಂಕಿತರನ್ನು ಹೊಂದಿರುವ ಪ್ರದೇಶಗಳಾಗಿವೆ. ಇನ್ನು ಸೊನ್ನೆಹಳ್ಳಿಯಲ್ಲಿ ಗರಿಷ್ಠ ಸಂಖ್ಯೆಯ ಸಾರಿ/ಐಎಲ್ಐ ಪ್ರಕರಣಗಳು ಪತ್ತೆಯಾಗಿವೆ ಎಂದು ವರದಿಗಳು ತಿಳಿಸಿವೆ. 

ಸೊನ್ನೆಹಳ್ಳಿಯಲ್ಲಿ 2,630 ಪ್ರಕರಣಗಳಿದ್ದರೆ, ತಾವರೆಕೆರೆ 1,789, ಮಂಡೂರು 1,367, ಹೆಸರಘಟ್ಟ 1,004, ಸುಲಿಕೆರೆ 963 ಮತ್ತು ಹೆಬ್ಬಗೋಡಿ 914 ಪ್ರಕರಣಗಳು ಪತ್ತೆಯಾಗಿವೆ. ಆರೋಗ್ಯ ಸಿಬ್ಬಂದಿಗಳು ದಿನಕ್ಕೆ 5,000 ಪರೀಕ್ಷೆಗಳನ್ನು ನಡೆಸುವ ಗುರಿಯನ್ನು ಹೊಂದಿದ್ದು, ಆದರೆ, ಗುರಿಗೂ ಮೀರಿ ಪ್ರತೀನಿತ್ಯ 7,500 ಪರೀಕ್ಷೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com