ಮೈಸೂರು: ಚಿನ್ನಾಭರಣ ಅಂಗಡಿಯಲ್ಲಿ ದರೋಡೆ ಮಾಡಿ ಪರಾರಿಯಾಗುತ್ತಿದ್ದ ನಾಲ್ವರು ದರೋಡೆಕೋರರು ನಡೆಸಿದ ಗುಂಡಿನ ದಾಳಿಗೆ ಅಮಾಯಕ ಯುವಕನೊಬ್ಬ ಬಲಿಯಾಗಿರುವ ಘಟನೆ ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ಸೋಮವಾರ ಸಂಜೆ ನಡೆದಿದೆ.
ಮೈಸೂರು ತಾಲೂಕು ದಡದಹಳ್ಳಿ ನಿವಾಸಿ ಗಾರೆಕೆಲಸ ಮಾಡಿಕೊಂಡಿರುವ ಚಂದ್ರು (23) ಎಂಬುವವರೇ ಗುಂಡೇಟಿಗೆ ಬಲಿಯಾದವರಾಗಿದ್ದಾರೆ.
ನಿನ್ನೆ ಸಂಜೆ 4.45ರ ಸುಮಾರಿಗೆ ಎರಡು ಬೈಕ್ ನಲ್ಲಿ ಬಂದಿರುವ ನಾಲ್ವರು ದರೋಡೆಕೋರರು ಮೈಸೂರಿನ ವಿದ್ಯಾರಣ್ಯಪುರಂ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಚಿನ್ನಾಭರಣ ಅಂಗಡಿಗೆ ನುಗ್ಗಿದ್ದಾರೆ. ಬಳಿಕ ಅಂಗಡಿಯ ಬಾಗಿಲು ಹಾಕಿದ್ದು, ಅಂಗಡಿಯನ್ನು ನೋಡಿಕೊಳ್ಳುತ್ತಿದ್ದ ಧರ್ಮೇಂದ್ರ ಎಂಬುವವರನ್ನು ಬೆದರಿಸಿ ಆಭರಣಗಳೆಲ್ಲವನ್ನೂ ಬ್ಯಾಗ್'ಗೆ ಹಾಕಿಕೊಂಡಿದ್ದಾರೆ.
5.15ರ ಸುಮಾರಿಗೆ ಧರ್ಮೇಂದ್ರ ಅವರ ಚಿಕ್ಕಪ್ಪ ಅಂಗಡಿ ಬಳಿ ಬಂದಿದ್ದು, ಈ ವೇಳೆ ದರೋಡೆಕೋರರು ಅಂಗಡಿಯಿಂದ ಹೊರಗೆ ಬರುತ್ತಿರುವುದನ್ನು ನೋಡಿದ್ದಾರೆ. ಯಾರೊಬ್ಬರೊಂದಿಗೂ ಶತ್ರುತ್ವವನ್ನು ಹೊಂದಿಲ್ಲ. ಇಂತಹ ಘಟನೆ ನೋಡುತ್ತಿರುವುದು ಇದೇ ಮೊದಲು, ಅಂಗಡಿಯಿಂದ ದರೋಡೆಕೋರರು ಹೊರ ಬರುತ್ತಿದ್ದಂತೆಯೇ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಸ್ಥಳೀಯ ನಿವಾಸಿ ಚಂದ್ರು ಎಂಬುವವರು ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ಸಾಗಿಸುವಾಗ ಮಾರ್ಗದ ಮಧ್ಯೆಯೇ ಕೊನೆಯುಸಿರೆಳೆದರು ಎಂದು ಧರ್ಮೇಂದ್ರ ಅವರ ಚಿಕ್ಕಪ್ಪ ಹೇಳಿದ್ದಾರೆ.
ಆಭರಣ ಖರೀದಿಗಾಗಿ ಚಂದ್ರು ಅಂಗಡಿಗೆ ಹೋಗುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದು, ಪೊಲೀಸರು ಪಾದಚಾರಿ ವ್ಯಕ್ತಿ ಎಂದು ಹೇಳಿದ್ದಾರೆ.
ಇನ್ನೂ ಕೆಲವರು ದರೋಡೆಕೋರರನ್ನು ಹಿಡಿಯಲು ಚಂದ್ರು ಯತ್ನಿಸಿದ್ದರು. ಈ ವೇಳೆ ಗುಂಡಿನ ದಾಳಿ ನಡೆಸಿದ್ದರು ಎಂದು ಹೇಳುತ್ತಿದ್ದಾರೆ.
ಈ ನಡುವೆ ವಿದ್ಯಾರಣ್ಯಪುರ ಪೊಲೀಸರು ಶ್ವಾನದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ದರೋಡೆಕೋರರು ಎಷ್ಟು ಮೌಲ್ಯದ ಆಭರಣಗಳನ್ನು ದರೋಡೆ ಮಾಡಿದ್ದಾರೆಂಬುದು ಇನ್ನು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಧರ್ಮೇಂದ್ರ ಅವರ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಗುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೆ, ಸಾರ್ವಜನಿಕೆ ದರೋಡೆಕೋರರ ಬಗ್ಗೆ ಮಾಹಿತಿ ತಿಳಿದಿದ್ದೇ ಆದರೆ, ಕೂಡಲೇ ತಿಳಿಸುವಂತೆಯೂ ಮನವಿ ಮಾಡಿಕೊಂಡಿದ್ದಾರೆ.
Advertisement