ಅನಿವಾರ್ಯ ಪರಿಸ್ಥಿತಿ ಉಂಟಾದರೆ ಶಾಲೆ ಬಂದ್, ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುವುದಿಲ್ಲ: ಶಿಕ್ಷಣ ಸಚಿವ ಬಿ ಸಿ ನಾಗೇಶ್
ಬೆಂಗಳೂರು: ರಾಜ್ಯದ ಕೆಲವು ಶಾಲಾ-ಕಾಲೇಜುಗಳಲ್ಲಿ ಅದರಲ್ಲೂ ವಸತಿ ಶಾಲೆಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಮಕ್ಕಳ ಪೋಷಕರು ಆತಂಕಗೊಳ್ಳುವುದು ಸಹಜ. ಆದರೆ ಮಕ್ಕಳ ಜೀವದ ಜೊತೆ ನಾವು ಚೆಲ್ಲಾಟವಾಡುವುದಿಲ್ಲ, ಕಾಳಜಿ ವಹಿಸುತ್ತೇವೆ. ಆತಂಕಗೊಳ್ಳುವುದಿಲ್ಲ ಬೇಡ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅಭಯ ನೀಡಿದ್ದಾರೆ.
ಕೊರೋನಾ ಎರಡನೇ ಅಲೆ ಕಡಿಮೆಯಾಗಿ ಎಲ್ಲವೂ ಸಹಜ ಸ್ಥಿತಿಗೆ ಬರುತ್ತಿರುವಾಗ ಇತ್ತೀಚೆಗಷ್ಟೇ ಶಾಲೆಗಳು ಆರಂಭವಾಗಿದ್ದವು. ಈಗ ಮತ್ತೆ ಅಲ್ಲಲ್ಲಿ ಶಾಲಾ-ಕಾಲೇಜು ಮಕ್ಕಳಲ್ಲಿ ಸೋಂಕು ಉಲ್ಭಣವಾಗುತ್ತಿದೆ. ಈ ಬಗ್ಗೆ ಇಂದು ವಿಧಾನ ಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕೊರೋನಾ ಸೋಂಕು ಹೆಚ್ಚಳವಾದರೆ ಬದಲಿ ಕ್ರಮ ಏನು ತೆಗೆದುಕೊಳ್ಳಬೇಕೆಂದು ಯೋಚಿಸುತ್ತೇವೆ. ಅಕಸ್ಮಾತ್ ಪರೀಕ್ಷೆ ಮತ್ತು ಭೌತಿಕ ತರಗತಿಗಳನ್ನು ನಿಲ್ಲಿಸಬೇಕೆಂದರೆ ಆ ಕ್ರಮಕ್ಕೂ ಸಿದ್ಧರಿದ್ದೇವೆ ಎಂದರು. ಅಂದರೆ ಅಗತ್ಯಬಿದ್ದರೆ ಶಾಲೆಗಳನ್ನು ನಿಲ್ಲಿಸುವ ನಿರ್ಧಾರ ಕೈಗೊಳ್ಳುವ ಸೂಚನೆಯನ್ನು ಶಿಕ್ಷಣ ಸಚಿವರು ಇಂದು ನೀಡಿದ್ದಾರೆ.
ಕೊನೆಯ ದಿನದವರೆಗೂ ಬೆಳವಣಿಗೆಗಳನ್ನು ಗಮನಿಸುತ್ತೇವೆ, ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದಾದರೆ ಶಿಕ್ಷಣ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ. ಶಾಲೆಗಳನ್ನು, ಪರೀಕ್ಷೆಗಳನ್ನು ನಿಲ್ಲಿಸಬೇಕಾದ ಅನಿವಾರ್ಯತೆ ಎದುರಾದರೆ ಹಿಂದೇಟು ಹಾಕುವುದಿಲ್ಲ, ಇವತ್ತಿನ ತಜ್ಞರ ವರದಿಯಲ್ಲಿ ಯಾವುದೇ ಗಾಬರಿಪಡುವ ಅಗತ್ಯವಿಲ್ಲ ಎಂದು ಹೇಳುತ್ತಿದ್ದಾರೆ ಎಂದರು.
ಚಿಕ್ಕಮಗಳೂರಿನ ಜವಾಹರ್ ನವೋದಯ ವಸತಿ ಶಾಲೆಯ ಮಕ್ಕಳಿಗೆ ಸೋಂಕು ತಗುಲಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ನಿನ್ನೆ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಹೋಗಿ ಆರೋಗ್ಯ ಮತ್ತು ಇತರ ಮೂಲಭೂತ ವ್ಯವಸ್ಥೆಯ ಉಸ್ತುವಾರಿ ನೋಡಿಕೊಂಡಿದ್ದಾರೆ. ವಸತಿ ಶಾಲೆಯ ಮಕ್ಕಳಿಗೆ ವೈದ್ಯರು, ಹಗಲು-ರಾತ್ರಿ ಶುಶ್ರೂಷಕಿಯರ ಸೇವೆಯನ್ನು ಇರಿಸಿದ್ದಾರೆ. ಸೋಂಕಿತ ಮಕ್ಕಳು, ಶಿಕ್ಷಕರು ಮತ್ತು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ ಎಂದರು.
ಕಳೆದ ವಾರ ಕೊರೋನಾ ಪಾಸಿಟಿವ್ ಬಂದ ಶಾಲೆಗಳ ಮಕ್ಕಳ ಬಗ್ಗೆ ವರದಿ ತರಿಸಿಕೊಂಡಿದ್ದೇವೆ. ಇದುವರೆಗೆ ಯಾರಿಗೂ ತೊಂದರೆಯಾಗಿಲ್ಲ. ಸಕಾಲಕ್ಕೆ ಚಿಕಿತ್ಸೆ ಸಿಕ್ಕಿ ಗುಣಮುಖರಾಗುತ್ತಿದ್ದಾರೆ. ಆದರೂ ಇತ್ತೀಚೆಗೆ ಹಲವು ಶಾಲೆಗಳಲ್ಲಿ ಹತ್ತಾರು ಮಕ್ಕಳಿಗೆ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಶಾಲೆಗಳಲ್ಲಿ ಕೋವಿಡ್ ಶಿಷ್ಠಾಚಾರಗಳನ್ನು ಕಠಿಣವಾಗಿ ಜಾರಿಗೆ ತರುವ ಬಗ್ಗೆ ಚರ್ಚೆ ನಡೆಸಿ ಮುಂದಿನ ದಿನಗಳಲ್ಲಿ ಜಾರಿಗೆ ತರಲಾಗುವುದು ಎಂದರು.
ವಸತಿ ಶಾಲೆಗಳಲ್ಲಿ ತೀವ್ರ ಎಚ್ಚರಿಕೆ: ವಸತಿ ಶಾಲೆಗಳಲ್ಲಿ ಇತ್ತೀಚೆಗೆ ಕೊರೋನಾ ಸೋಂಕು ಹೆಚ್ಚು ವಕ್ಕರಿಸುತ್ತಿದೆ. ಈ ನಿಟ್ಟಿನಲ್ಲಿ ಕೊರೋನಾ SOP(ಶಿಷ್ಠಾಚಾರ)ಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಆದೇಶ ಹೊರಡಿಸಲಾಗುವುದು. ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸೋಂಕು ಕಾಣಿಸಿಕೊಂಡಿರುವ ಶಾಲೆಗಳಿಗೆ ಭೇಟಿ ನೀಡಿಲ್ಲ. ವಿಧಾನ ಪರಿಷತ್ ಚುನಾವಣೆ ಮುಗಿದ ಕೂಡಲೇ ಹೋಗುತ್ತೇನೆ ಎಂದರು.
ಕಳೆದೊಂದು ವಾರದಿಂದ ಕೊರೋನಾ ರೂಪಾಂತರಿ ಓಮಿಕ್ರಾನ್ ಆತಂಕ ಹೆಚ್ಚಾಗಿದೆ. ಆದರೆ ತಜ್ಞರು ಈಗಲೂ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದಿಲ್ಲ ಎಂದು ಹೇಳುತ್ತಿದ್ದಾರೆ. ಫೆಬ್ರವರಿಯಲ್ಲಿ ಸೋಂಕು ಉಲ್ಬಣವಾಗಬಹುದು ಎನ್ನುತ್ತಿದ್ದಾರೆ. ಅಷ್ಟರೊಳಗೆ ಮಕ್ಕಳಿಗೆ ಸಹ ಕೊರೋನಾ ಲಸಿಕೆ ಬರಬಹುದು, ವ್ಯಾಕ್ಸಿನೇಷನ್ ಆದರೆ ಅಷ್ಟೊಂದು ಆತಂಕವಿಲ್ಲ ಎಂದು ಶಿಕ್ಷಣ ಸಚಿವರು ಹೇಳಿದರು.

