ಪಿಡಬ್ಲ್ಯುಡಿ ಎಂಜಿನಿಯರ್ ನೇಮಕಾತಿ ಪರೀಕ್ಷೆ: 'ಬ್ಲೂ ಟೂತ್' ಬಳಸುತ್ತಿದ್ದ ಅಭ್ಯರ್ಥಿ ಬಂಧನ
ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಸಹಾಯಕ ಎಂಜಿನಿಯರ್‌ಗಳ ನೇಮಕಾತಿಗಾಗಿ ನಡೆದ ಪರೀಕ್ಷೆಯಲ್ಲಿ ಎಲೆಕ್ಟ್ರಾನಿಕ್ ಸಾಧನ ಬ್ಲೂ ಟೂತ್ ಬಳಸಿ ಅವ್ಯವಹಾರ ನಡೆಸಿದ ಆರೋಪದ ಮೇಲೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು 30 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ.
Published: 16th December 2021 09:08 AM | Last Updated: 16th December 2021 01:45 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಸಹಾಯಕ ಎಂಜಿನಿಯರ್‌ಗಳ ನೇಮಕಾತಿಗಾಗಿ ನಡೆದ ಪರೀಕ್ಷೆಯಲ್ಲಿ ಎಲೆಕ್ಟ್ರಾನಿಕ್ ಸಾಧನ ಬ್ಲೂ ಟೂತ್ ಬಳಸಿ ಅವ್ಯವಹಾರ ನಡೆಸಿದ ಆರೋಪದ ಮೇಲೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು 30 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಕಲಬುರಗಿ ಜಿಲ್ಲೆ ಜೆವರ್ಗಿ ನಿವಾಸಿ ವೀರಣ್ಣಗೌಡ ದೇವಿಂದ್ರ ಚಿಕ್ಕೇಗೌಡ ಬಂಧಿತ ಆರೋಪಿ. ಪಿಡಬ್ಲ್ಯೂಡಿ ಸಹಾಯಕ ಎಂಜಿನಿಯರ್ ಗಳ ನೇಮಕಾತಿಗಾಗಿ ಮಂಗಳವಾರ ಕೆಪಿಎಸ್ ಸಿ ನಡೆಸಿದ ಪರೀಕ್ಷೆಯಲ್ಲಿ ಚಿಕ್ಕೇಗೌಡ ಹಾಜರಿದ್ದಾಗಿ ಪೊಲೀಸರು ಹೇಳಿದ್ದಾರೆ.
ನಾಗರಬಾವಿಯ ಪಾಪರೆಡ್ಡಿ ಪಾಳ್ಯದ ಸೆಂಟ್ ಜಾನ್ ಹೈ ಸ್ಕೂಲ್ ನಲ್ಲಿ ಆರೋಪಿ ಪರೀಕ್ಷೆ ಬರೆಯುತ್ತಿದ್ದಾಗ ಮೇಲ್ವಿಚಾರಕರಿಗೆ ಶಬ್ದವೊಂದು ಕೇಳಿಬಂದಿದೆ. ನಂತರ ಪರಿಶೀಲಿಸಿದಾಗ ಆತನ ಬಟ್ಟೆಯಲ್ಲಿ ಎಲೆಕ್ಟ್ರಾನಿಕ್ ಸಾಧನವೊಂದು ಕಂಡುಬಂದಿದೆ. ಪ್ರತಿ 30 ನಿಮಿಷಕ್ಕೊಮ್ಮೆ ಅದನ್ನು ಆನ್ ಮಾಡುತ್ತಿದ್ದ ಅಭ್ಯರ್ಥಿ ಹೊರಗಿನ ವ್ಯಕ್ತಿಯೊಬ್ಬರೊಂದಿಗೆ ಸಂಪರ್ಕ ಸಾಧಿಸುತ್ತಿದ್ದ. ಆ ಸಾಧನಕ್ಕೆ ಸಂಪರ್ಕಗೊಂಡಿರುವ ಇಯರ್‌ಫೋನ್‌ನಿಂದ ಧ್ವನಿಯನ್ನು ಕೇಳಬಹುದು, ಆದರೆ ಅದರ ಮೂಲಕ ಮಾತನಾಡಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ.
ಪರೀಕ್ಷಾ ಕೇಂದ್ರದ ಉಸ್ತುವಾರಿ ನೀಡಿದ ಮಾಹಿತಿ ಆಧಾರದ ಮೇಲೆ ಚಿಕ್ಕೇಗೌಡನನ್ನು ಬಂಧಿಸಲಾಗಿದ್ದು, ಎಲೆಕ್ಟ್ರಾನಿಕ್ ಡಿವೈಸ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜ್ಯ ಶಿಕ್ಷಣ ಕಾಯ್ದೆ, ಐಟಿ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ ಅನ್ವಯ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.