ಕಚ್ಚಾ ವಸ್ತುಗಳ ಬೆಲೆ ಏರಿಕೆ: ಡಿ.20 ರಂದು ಪೀಣ್ಯ ಕೈಗಾರಿಕಾ ಸಂಘದಿಂದ ಪ್ರತಿಭಟನೆ

ಕಿರು, ಸಣ್ಣ ಮತ್ತು ಮಧ್ಯಮ ವಲಯದ ಕಚ್ಚಾ ವಸ್ತುಗಳ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದ್ದು, ಇದರ ವಿರುದ್ಧ ಡಿಸೆಂಬರ್ 20 ರಂದು ಕೈಗಾರಿಕೆಗಳನ್ನು ಬಂದ್ ಮಾಡಿ, ಪ್ರತಿಭಟನೆ ನಡೆಸಲು ಪೀಣ್ಯ ಕೈಗಾರಿಕಾ ಸಂಘ ನಿರ್ಧರಿಸಿದೆ. 
ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಮುರುಳಿ ಕೃಷ್ಣಾ ಮತ್ತಿತರರು
ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಮುರುಳಿ ಕೃಷ್ಣಾ ಮತ್ತಿತರರು

ಬೆಂಗಳೂರು: ಕಿರು, ಸಣ್ಣ ಮತ್ತು ಮಧ್ಯಮ ವಲಯದ ಕಚ್ಚಾ ವಸ್ತುಗಳ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದ್ದು, ಇದರ ವಿರುದ್ಧ ಡಿಸೆಂಬರ್ 20 ರಂದು ಕೈಗಾರಿಕೆಗಳನ್ನು ಬಂದ್ ಮಾಡಿ, ಪ್ರತಿಭಟನೆ ನಡೆಸಲು ಪೀಣ್ಯ ಕೈಗಾರಿಕಾ ಸಂಘ ನಿರ್ಧರಿಸಿದೆ. 

ಪೀಣ್ಯ ಕೈಗಾರಿಕಾ ಸಂಘದ ಜೊತೆಗೆ ರಾಜಾಜಿನಗರ ಇಂಡಸ್ಟ್ರೀಸ್ ಅಸೋಸಿಯೇಷನ್ , ಬೊಮ್ಮ ಸಂದ್ರ ಇಂಡಸ್ಟ್ರೀಸ್ ಅಸೋಸಿಯೇಷನ್, ಮೈಸೂರು ಇಂಡಸ್ಟ್ರೀಸ್ ಅಸೋಸಿಯೇಷನ್ ತಮ್ಮ ಉದ್ಯಮಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡಲು ತೀರ್ಮಾನಿಸಿವೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಬಿ. ಮುರುಳಿ ಕೃಷ್ಣಾ, ಆರ್ಥಿಕ ಹಿನ್ನೆಡೆ, ಕೋವಿಡ್ ಸಾಂಕ್ರಾಮಿಕದಿಂದ ನೆಲ ಕಚ್ಚಿರುವ ಎಂ.ಎಸ್. ಎಂ. ಇ ವಲಯಕ್ಕೆ ಇದೀಗ ಕಚ್ಚಾ ವಸ್ತುಗಳ ಬೆಲೆ ಏರಿಕೆ ಭಾರೀ ಹೊಡೆತ ನೀಡಿದೆ. ಉಕ್ಕು ತಯಾರಕರು ಮತ್ತು ವರ್ತಕರ ಲಾಬಿಯಿಂದ  ಕಚ್ಚಾ ವಸ್ತುಗಳ ಬೆಲೆ ಗಗನ ಮುಖಿಯಾಗಿದೆ. ಉಕ್ಕು ಕಂಪನಿಗಳ ಹಗಲು ದರೋಡೆ ವಿರೋಧಿಸಿ ಸೋಮವಾರ ಸಣ್ಣ ಉದ್ಯಮಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.

ಕಚ್ಚಾ ವಸ್ತುಗಳ ಬೆಲೆ ಗಗನಮುಖಿಯಾಗಿದ್ದು, ಶೇ. 40 ರಿಂದ ಶೇ 70 ರಷ್ಟು ಹೆಚ್ಚಾಗಿವೆ. ಗಗನ ಮುಖಿಯಾಗಿರುವ ಏರಿಕೆಯಾಗುತ್ತಿರುವ ಬೆಲೆಯನ್ನು ತಗ್ಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕಚ್ಚಾ ವಸ್ತುಗಳ ಬೆಲೆ ಏರಿಕೆ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಒಂದು ದಿನ ಕೈಗಾರಿಕೆ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ. ಪೀಣ್ಯ ಕೈಗಾರಿಕಾ ಪ್ರದೇಶ ದಕ್ಷಿಣ ಏಷ್ಯಾದಲ್ಲೇ ಅತ್ಯಂತ ದೊಡ್ಡ ಎಂಎಸ್ ಎಂಇ ವಲಯವಾಗಿದ್ದು, 6,500 ಸದಸ್ಯರು ನೋಂದಣಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

ದೇಶಾದ್ಯಂತ ಕಚ್ಚಾ ವಸ್ತುಗಳು ಅಸಹಜ ರೀತಿಯಲ್ಲಿ ಏರಿಕೆಯಾಗುತ್ತಿದ್ದು, ದೇಶದ ಆರ್ಥಿಕ ಭದ್ರತೆಗೆ ಬುನಾದಿಯಾಗಿರುವ , ಉದ್ಯೋಗ ನೀಡುವ, ಜೀವನಕ್ಕೆ ಆಧಾರವಾಗಿರುವ ಸಣ್ಣ ಮತ್ತು ಮಧ್ಯಮ ಉದ್ಯಮ ವಲಯವನ್ನು ರಕ್ಷಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ತಕ್ಷಣವೇ ಕಾರ್ಯೋನ್ಮುಖವಾಗಬೇಕು ಎಂದು ಅವರು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com