ಅತಿವೃಷ್ಟಿ ಹಾನಿ: ರೈತರಿಗೆ ಹೆಚ್ಚುವರಿ ಬೆಳೆ ಪರಿಹಾರ, ಶೀಘ್ರ ಬಾಕಿ ಹಣ ಜಮೆ- ಮುಖ್ಯಮಂತ್ರಿ ಬೊಮ್ಮಾಯಿ

ರಾಜ್ಯದಲ್ಲಿ ಅತಿವೃಷ್ಟಿಯಿಂದಾದ ರೈತರ ಬೆಳೆ ಹಾನಿಗೆ ಹೆಚ್ಚುವರಿ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಈಗಾಗಲೇ ಪರಿಹಾರ ಪಡೆದಿರುವ ರೈತರ ಖಾತೆಗೆ ಶೀಘ್ರವಾಗಿ ಬಾಕಿ ಹಣವನ್ನು ಜಮೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಳಗಾವಿ: ರಾಜ್ಯದಲ್ಲಿ ಅತಿವೃಷ್ಟಿಯಿಂದಾದ ರೈತರ ಬೆಳೆ ಹಾನಿಗೆ ಹೆಚ್ಚುವರಿ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಈಗಾಗಲೇ ಪರಿಹಾರ ಪಡೆದಿರುವ ರೈತರ ಖಾತೆಗೆ ಶೀಘ್ರವಾಗಿ ಬಾಕಿ ಹಣವನ್ನು ಜಮೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿಂದು ಅತಿವೃಷ್ಟಿ ಪರಿಹಾರ ಕುರಿತು ಮಾತನಾಡಿದ ಮುಖ್ಯಮಂತ್ರಿ, ಈ ಬಾರಿ ಯಾವುದೇ ರೀತಿಯ ಬೆಳೆ ಹಾನಿ, ಮನೆ ಹಾನಿಗೆ ಸಂಬಂಧಿಸಿದಂತೆ ಯಾವುದೇ ಅಡ್ಡಿ ಇಲ್ಲದೆ ಪರಿಹಾರ ನೀಡಿದ್ದೇವೆ, ಮಳೆಯಿಂದ ಹಾನಿ ಸಂಭವಿಸಿದ ಕೂಡಲೇ  ಜಂಟಿ ಸರ್ವೇ ಕೈಗೊಳ್ಳುವಂತೆ ಸೂಚಿಸಲಾಗಿದೆ. ಅಧಿಕಾರಿಗಳು ಪರಿಹಾರ ಅಪ್ ಗೆ 24 ಗಂಟೆಯಲ್ಲಿ ಮಳೆ ಹಾನಿ ಬಗ್ಗೆ ವರದಿಯನ್ನು ಅಪ್ ಲೋಡ್ ಮಾಡಬೇಕು ಎಂದರು.

 ಜಂಟಿ ಸಮೀಕ್ಷೆ ವರದಿ ಬಂದ ತಕ್ಷಣ ಈಗಾಗಲೇ 969 ಕೋಟಿ ರೂ. ಹಣವನ್ನು ಸುಮಾರು 10 ಲಕ್ಷ ರೈತರಿಗೆ ಪರಿಹಾರ ನೀಡಲಾಗಿದೆ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ಪರಿಹಾರ ನೀಡಲಾಗಿದೆ ಎಂದ ಸಿಎಂ, ಮನೆ ಬಿದ್ದ ತಕ್ಷಣ  1 ಲಕ್ಷ ರೂಪಾಯಿ ಪರಿಹಾರ ಕೊಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು. 

ಇದೇ ವೇಳೆ ರಾಜ್ಯದ ರೈತರಿಗೆ ಕಡಿಮೆ ಪ್ರಮಾಣದಲ್ಲಿ ಬೆಳೆ ಹಾನಿ ಪರಿಹಾರ ನೀಡಲಾಗುತ್ತಿದೆ ಎಂದು ಸದಸ್ಯರು ಆಗ್ರಹಿಸಿದರು. ಶಾಸಕರ ಅಭಿಪ್ರಾಯದಂತೆ ಬೆಳೆ ಪರಿಹಾರವನ್ನು ರಾಜ್ಯ ಸರ್ಕಾರ ಹೆಚ್ಚಳ ಮಾಡುತ್ತಿದೆ. ಒಣ ಭೂಮಿಗೆ ಈವರೆಗೂ ಪ್ರತಿ ಹೆಕ್ಟೆರ್ ಗೆ 6,800 ರೂಪಾಯಿ ಕೊಡುತ್ತಿದ್ದೇವು. ಈಗ ಹೆಚ್ಚುವರಿಯಾಗಿ 6,800 ರೂ ಅಂದರೆ 13,600 ರೂ. ಕೊಡಬೇಕೆಂದು ತೀರ್ಮಾನಿಸಲಾಗಿದೆ. ನೀರಾವರಿ ಭೂಮಿಗೆ ಸದ್ಯ 13,500 ರೂ. ನೀಡಲಾಗುತ್ತಿದ್ದು, ಹೆಚ್ಚುವರಿಯಾಗಿ 11,500 ಸೇರಿಸಿ ಪ್ರತಿ ಹೆಕ್ಟೆರ್ ಗೆ 25 ಸಾವಿರ ರೂಪಾಯಿ ನೀಡಲಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು. 

ರಾಜ್ಯ ಸರ್ಕಾರ ಇಂತಹ ಕಷ್ಟದ ಕಾಲದಲ್ಲಿ ರೈತರ ಅನುಕೂಲಕ್ಕೆ ಬರಲು ನಿರ್ಧರಿಸಿದೆ. ಈಗಾಗಲೇ ಘೋಷಿಸಿರುವ ಹಣವನ್ನು ಶೀಘ್ರವಾಗಿ ರೈತರ ಖಾತೆಗೆ ಜಮೆ ಮಾಡಲಾಗುವುದು, ಕೋವಿಡ್ ಇತಿಮಿತಿಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಸುಮಾರು 1,200 ಕೋಟಿಗೂ ಅಧಿಕ ಹಣದ ಹೊರೆ ಬೀಳಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com