ಹೊಸ ವರ್ಷಾಚರಣೆ ಹೊತ್ತಲ್ಲಿ ಪಬ್, ರೆಸ್ಟೋರೆಂಟ್ ಮಾಲೀಕರಿಗೆ ನೈಟ್ ಕರ್ಫ್ಯೂ ಶಾಕ್!

ಜಗತ್ತಿನಾದ್ಯಂತ ವ್ಯಾಪಕ ಭೀತಿ ಸೃಷ್ಟಿಸಿರುವ ಓಮಿಕ್ರಾನ್ ರೂಪಾಂತರ ಸೋಂಕು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಡಿಸೆಂಬರ್ 28 ರಿಂದ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಸರ್ಕಾರದ ನಿರ್ಬಂಧಕ್ಕೆ ಹೋಟೆಲ್ ಉದ್ಯಮಿಗಳು, ಬಾರ್, ಪಬ್‌ ಉದ್ಯಮಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಜಗತ್ತಿನಾದ್ಯಂತ ವ್ಯಾಪಕ ಭೀತಿ ಸೃಷ್ಟಿಸಿರುವ ಓಮಿಕ್ರಾನ್ ರೂಪಾಂತರ ಸೋಂಕು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಡಿಸೆಂಬರ್ 28 ರಿಂದ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಸರ್ಕಾರದ ನಿರ್ಬಂಧಕ್ಕೆ ಹೋಟೆಲ್ ಉದ್ಯಮಿಗಳು, ಬಾರ್, ಪಬ್‌ ಉದ್ಯಮಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 

ನೈಟ್‌ ಕರ್ಫ್ಯೂ ಜಾರಿಗೊಳಿಸಿದ್ದಲ್ಲಿ ಉದ್ಯಮ ಕ್ಷೇತ್ರಕ್ಕೆ ಭಾರೀ ಹೊಡೆತ ಬೀಳಲಿದೆ. ಈಗಾಗಲೇ ಕೋವಿಡ್ ಎರಡು ಬಾರಿಯ ಲಾಕ್‌ಡೌನ್ ಹಾಗೂ ನೈಟ್ ಕರ್ಫ್ಯೂ ಸೇರಿದಂತೆ ಮತ್ತಿತರ ನಿರ್ಬಂಧಗಳು ಉದ್ಯಮ ಕ್ಷೇತ್ರಕ್ಕೆ ಭಾರೀ ಹೊಡೆತ ನೀಡಿದೆ. ಅದರಲ್ಲೂ ಹೋಟೆಲ್ ಉದ್ಯಮ, ಆಟೋ, ಕ್ಯಾಬ್ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು ನಲುಗಿದ್ದಾರೆ. ಇದೇ ಕಾರಣಕ್ಕೆ ನೈಟ್‌ ಕರ್ಪ್ಯೂಗೆ ಆಟೋ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು, ಹೋಟೆಲ್ ಉದ್ಯಮಿಗಳು, ಬಾರ್, ಪಬ್‌ ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಅಂತೆಯೇ ಹೊಟೆಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಶೇ.50ರಷ್ಟು ಆಕ್ಯುಪೆನ್ಸಿಗೆ ಅನುಮತಿಸಲಾಗಿತ್ತಾದರೂ ಈಗ ಕೊನೆ ಕ್ಷಣದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಈ ಕುರಿತು ಮಾತನಾಡಿರುವ ಎಂಜಿ ರಸ್ತೆಯಲ್ಲಿರುವ ಶೆರ್ಲಾಕ್ ಪಬ್‌ನ ಮಾಲೀಕ ಸಿದ್ಧಾರ್ಥ್ ಬಾಲಾ ಅವರು, ಹೊಸ ವರ್ಷದ ಮುನ್ನ ರಾತ್ರಿ ಕರ್ಫ್ಯೂ ಹೇರುವುದು ಅನೇಕರಿಗೆ ಅನಾನುಕೂಲವಾಗಿದೆ. ನಾವು ಅನಿಯಮಿತ ಬಫೆ ಮತ್ತು ಪಾನೀಯ ಕಾರ್ಯಕ್ರಮಗಳನ್ನು ಯೋಜಿಸಿದ್ದೇವೆ ಮತ್ತು ಸುಮಾರು ಶೇ. 60 ರಷ್ಟು ವೋಚರ್‌ಗಳನ್ನು ಮಾರಾಟ ಮಾಡಿದ್ದೇವೆ. ಆದರೆ ಸರ್ಕಾರದ ನಿರ್ಧಾರದಿಂದ ಗ್ರಾಹಕರು ವೋಚರ್ ಗಳನ್ನು ರದ್ದು ಮಾಡಲು ಆರಂಭಿಸುತ್ತಿದ್ದಾರೆ. ಇದಕ್ಕಾಗಿ ನಾವು ಇದೀಗ ಮರು ಪಾವತಿ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದ್ದಾರೆ.

ಡಿಸೆಂಬರ್ 30 ರೊಳಗೆ ನಮ್ಮ ಎಲ್ಲಾ ಸಿಬ್ಬಂದಿ ಆರ್‌ಟಿ-ಪಿಸಿಆರ್ ಪರೀಕ್ಷೆಗಳಿಗೆ ಒಳಗಾಗಬೇಕು ಎಂದು ನಿಯಮವೊಂದು ಹೇಳುತ್ತದೆ. ನಾವು ಸುಮಾರು 50 ಸಿಬ್ಬಂದಿಯನ್ನು ಹೊಂದಿದ್ದೇವೆ ಮತ್ತು ಕೋವಿಡ್ ಪರೀಕ್ಷೆಗಳು ಅಗ್ಗವಾಗಿಲ್ಲ. ಇದೂ ಕೂಡ ನಮಗೆ ಹಿನ್ಮಡೆಯಾಗಿದೆ. ಹಗಲಿನ ಕಾರ್ಯಾಚರಣೆಯ ಸಮಯದಲ್ಲಿ ಮಾಲ್‌ಗಳಂತಹ ಸಾರ್ವಜನಿಕ ಸ್ಥಳಗಳು ತುಂಬಿರುವಾಗಲೂ ಸರ್ಕಾರ ನೈಟ್ ಕರ್ಫ್ಯೂ ಹೇರಿ ರಾತ್ರಿ ಜೀವನವನ್ನು ಗುರಿಯಾಗಿರಿಸಿಕೊಳ್ಳುತ್ತಿದೆ.

ಇದೇ ರೀತಿಯಲ್ಲಿ ಮಾತನಾಡಿದ 1522 SuzyQ  ಪಾಲುದಾರರಾದ ಚೇತನ್ ಹೆಗ್ಡೆ ಅವರು, ಕಳೆದ ವರ್ಷದಲ್ಲಿ ಉಂಟಾದ ನಷ್ಟದಿಂದ ಇನ್ನೂ ಚೇತರಿಸಿಕೊಳ್ಳುತ್ತಿರುವ ಕಾರಣ ಹಾಲಿ ನೈಟ್ ಕರ್ಫ್ಯೂ ಉದ್ಯಮಕ್ಕೆ ಭಾರಿ ನಿರಾಶೆಯನ್ನುಂಟುಮಾಡಿದೆ. ಹಳೆಯ ಮಾರ್ಗಸೂಚಿಗಳಲ್ಲಿ, ನಮಗೆ ಶೇ.50 ರಷ್ಟು ಆಕ್ಯುಪೆನ್ಸಿಯ ಬಗ್ಗೆ ತಿಳಿಸಲಾಗಿದೆ. ಯಾವುದೇ ಸಮಯದ ನಿರ್ಬಂಧವಿಲ್ಲ ಮತ್ತು ನಾವು ಅದನ್ನು ಯೋಜಿಸಿದ್ದೇವೆ ಮತ್ತು ಅದರ ಪ್ರಕಾರ ಟೇಬಲ್ ಕಾಯ್ದಿರಿಸಿದ್ದೇವೆ. ಸಮಯದ ನಿರ್ಬಂಧಗಳೊಂದಿಗೆ, ಜನರು ನಗರವನ್ನು ತೊರೆಯಬಹುದು ಅಥವಾ ಮನೆಯಲ್ಲೇ ಸಂಭ್ರಮಾಚರಣೆ ಮಾಡಬಹುದು. ಇದರಿಂದ ನಾವು ಆಯೋಜಿಸಿರುವ ಕಾರ್ಯಕ್ರಮಗಳು ರದ್ದಾಗುತ್ತವೆ. ಇದು ವ್ಯವಹಾರದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ನಿರಾಶೆ ವ್ಯಕ್ತಪಡಿಸಿದ್ದಾರೆ.

ಆದಾಗ್ಯೂ ಕೋವಿಡ್ ನಿರ್ವಹಣೆ ಸಂಬಂಧ ಸರ್ಕಾರದ ಕ್ರಮಗಳನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿರುವ ಉರು ಬ್ರೂಪಾರ್ಕ್‌ನ ಜನರಲ್ ಮ್ಯಾನೇಜರ್ ಟೆರೆನ್ಸ್ ಪ್ರಸಾದ್, ಕೋವಿಡ್ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಸರ್ಕಾರವು ನೀಡಿದ ಎಲ್ಲಾ ನಿರ್ದೇಶನಗಳಿಗೆ ನಾವು ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ. ನಾವು ಈ ಎಲ್ಲಾ ಕ್ರಮಗಳನ್ನು ಅನುಸರಿಸುತ್ತೇವೆ ಎಂದು ಹೇಳಿದ್ದಾರೆ. 

ಅಂತೆಯೇ ಸರ್ಕಾರದ ನಿರ್ಧಾರಕ್ಕೆ ಬೆಂಬಲ ನೀಡಿರುವ ಪಂಪ್‌ಹೌಸ್‌ನ ಜನರಲ್ ಮ್ಯಾನೇಜರ್ ಕೇಶವ್ ವಿಎಸ್ ಅವರು, 'ಭವಿಷ್ಯದ ಲಾಕ್‌ಡೌನ್‌ಗಳು ಮತ್ತು ಕೋವಿಡ್ ಪ್ರಕರಣಗಳ ಘಾತೀಯ ಬೆಳವಣಿಗೆಯನ್ನು ತಪ್ಪಿಸಲು ನೈಟ್ ಕರ್ಫ್ಯೂ ಅನಿವಾರ್ಯ. ರೆಸ್ಟೋರೆಂಟ್ ಮಾಲೀಕರಾಗಿ, ನಾವು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಒಬ್ಬ ವ್ಯಕ್ತಿಯಾಗಿ, ಲಾಕ್‌ಡೌನ್‌ಗಳ ಬಗ್ಗೆ ನನಗೆ ದೊಡ್ಡ ಭಯವಿದೆ. ಏಕೆಂದರೆ ನಾವು ಇದನ್ನು ಇನ್ನು ಮುಂದೆ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ರಾತ್ರಿ ಕರ್ಫ್ಯೂಗಳು ಒಂದು ರೀತಿಯಲ್ಲಿ ಉತ್ತಮವಾಗಿದೆ ಎಂದು ಕೇಶವ್ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com